ಕೊಪ್ಪಳ: ಜಿಲ್ಲಾದ್ಯಂತ ಮೊಟ್ಟ ಮೊದಲ ಬಾರಿಗೆ ಜೆಸ್ಕಾಂ ಎರಡು ಡಿವಿಜನ್‌ಗಳಿಂದ 12 ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮ ನಡೆಯಿತು. ರೈತರು ಟ್ರಾನ್ಸ್‌ಫಾರ್ಮರ್, ವಿದ್ಯುತ್ ತಂತಿ ಬದಲಾವಣೆ ಸೇರಿದಂತೆ ವಿವಿಧ ಅರ್ಜಿಗಳನ್ನು ಸಲ್ಲಿಸಿ ತಮ್ಮ ಅಹವಾಲು ಅಧಿಕಾರಿಗಳ ಗಮನಕ್ಕೆ ತಂದರು. ಸ್ಥಳದಲ್ಲೇ 22 ಅರ್ಜಿ ಇತ್ಯರ್ಥ ಮಾಡಲಾಯಿತು.
ರಾಜ್ಯ ಸರ್ಕಾರವು ಮೊಟ್ಟ ಮೊದಲ ಬಾರಿಗೆ ಇಂಧನ ಇಲಾಖೆಯಿಂದ ಮೊದಲ ಬಾರಿಗೆ ವಿದ್ಯುತ್ ಅದಾಲತ್ ಕಾರ್ಯಕ್ರಮವನ್ನು ರೂಪಿಸಿ ಶನಿವಾರ ಜಾರಿ ಮಾಡಲಾಯಿತು.
ಇಲ್ಲಿ ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ಸಮಸ್ಯೆ, ವಿದ್ಯುತ್ ತಂತಿಗಳ ಬದಲಾವಣೆ, ಕಂಬಗಳ ದುರಸ್ತಿ ಸೇರಿದಂತೆ ಗ್ರಾಮೀಣ, ನಗರದಲ್ಲಿನ ವಿದ್ಯುತ್ ಲೈನ್‌ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ದೂರುಗಳಿದ್ದರೂ ಅದಾಲತ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಇತ್ಯರ್ಥಕ್ಕೆ ಸರ್ಕಾರ ಮುಂದಾಗಿದೆ.
ಈ ಮೊದಲು ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ರೈತರು ಸೇರಿದಂತೆ ಗ್ರಾಹಕರು ತುಂಬಾ ಸಮಸ್ಯೆ ಎದುರಿಸುವಂತಾಗುತ್ತಿತ್ತು. ಅರ್ಜಿ ಕೊಟ್ಟು ಹತ್ತಾರು ಬಾರಿ ಇಲಾಖೆಗೆ ಸುತ್ತಿದರೂ ಸಹ ಸಮಸ್ಯೆ ಬಗೆಹರಿಯುತ್ತಿರಲಿಲ್ಲ, ಇದರಿಂದ ಬೇಸತ್ತಿದ್ದರು. ಇದನ್ನು ವೇಗವಾಗಿ ಇತ್ಯರ್ಥ ಮಾಡಲು ಹೊಸ ಆಯಾಮ ಕೊಡಲು ಎಲ್ಲ ಇಲಾಖೆಗಳಲ್ಲಿ ಅದಾಲತ್ ಮಾಡಿದಂತೆ ಇಂಧನ ಇಲಾಖೆಯಲ್ಲಿ ವಿದ್ಯುತ್ ಅದಾಲತ್ ಆರಂಭಿಸಿದ್ದು, ಶನಿವಾರ ನಡೆದ ಮೊದಲ ಅದಾಲತ್‌ನಲ್ಲಿ ಕೊಪ್ಪಳ ಡಿವಿಜನ್‌ನ ಆರು ಉಪ ವಿಭಾಗಗಳಲ್ಲಿನ ಹಿರೇಬಗನಾಳ, ಗಾಣದಾಳ, ಆಚಾರ್ ನರಸಾಪುರ, ಹಿರೇಸುಳಿಕೇರಿ, ಗಿಣಗೇರಿ, ಗುನ್ನಾಳ ಗ್ರಾಮಗಳಲ್ಲಿ ಅದಾಲತ್ ನಡೆದವು.
ಇಲ್ಲಿ 74 ಅರ್ಜಿಗಳು ಸಲ್ಲಿಕೆಯಾದರೆ 11 ಅರ್ಜಿ ಇತ್ಯರ್ಥವಾಗಿ 63 ಅರ್ಜಿಗಳು ಬಾಕಿ ಉಳಿದವು. ಇನ್ನು ಗಂಗಾವತಿ ಡಿವಿಜನ್‌ನಲ್ಲಿ ಉಪ ವಿಭಾಗಕ್ಕೆ ಎರಡು ಗ್ರಾಮಗಳಂತೆ ಹೇಮಗುಡ್ಡ, ರಾಮದುರ್ಗ, ಹಿರೇಖೇಡ, ಸೋಮನಾಳ, ವಕ್ಕಂದುರ್ಗ, ಕ್ಯಾದಿಗುಪ್ಪಾ ಗ್ರಾಮದಲ್ಲಿ ಅದಾಲತ್ ನಡೆದಿದ್ದು, 76 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 11 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿ, 65 ಅರ್ಜಿಗಳು ಬಾಕಿ ಉಳಿದವು. ಒಟ್ಟಾರೆ ಜಿಲ್ಲೆಯಲ್ಲಿನ ಎರಡೂ ಡಿವಿಜನ್‌ಗಳಲ್ಲಿನ 12 ಗ್ರಾಮಗಳಲ್ಲಿ ನಡೆದ ವಿದ್ಯುತ್ ಅದಾಲತ್‌ನಲ್ಲಿ 150 ಅರ್ಜಿಗಳು ಸಲ್ಲಿಕೆಯಾಗಿದ್ದು, 22 ಅರ್ಜಿಗಳು ಇತ್ಯರ್ಥವಾಗಿ 128 ಅರ್ಜಿ ಬಾಕಿ ಉಳಿದು ಅವುಗಳನ್ನು ಮುಂದಿನ ಹಂತದಲ್ಲಿ ಅಧಿಕಾರಿಗಳು ಇತ್ಯರ್ಥ ಪಡಿಸುವ ಭರವಸೆ ನೀಡಿದ್ದಾರೆ.
ಜಿಲ್ಲೆಯ ಎರಡು ಡಿವಿಜನ್ ಗಳ 12 ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮ ನಡೆಸಲಾಯಿತು. ಎರಡೂ ವಿಭಾಗದಿಂದ 150 ಅರ್ಜಿಗಳು ಸಲ್ಲಿಕೆಯಾಗಿದ್ದು, 22 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಿದ್ದು, ಉಳಿದ ಅರ್ಜಿಗಳನ್ನು ಮುಂದಿನ ಹಂತದ ಪಕ್ರಿಯೆ ಯಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜೇಶ, ಜೆಸ್ಕಾಂ ಇಇ