Advertisement

ವಿದ್ಯುತ್‌ ಶಾಕಿಂಗ್‌ ಸ್ಪಾಟ್‌: 270 ಹೊಸ ಎಲ್‌ಟಿಡಿ ಬಾಕ್ಸ್‌ ಅಳವಡಿಕೆ

10:05 AM Nov 29, 2018 | Team Udayavani |

ಮಹಾನಗರ: ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಪಾಯ ಆಹ್ವಾನಿಸುವ ರೀತಿ ಅಳವಡಿಸಲಾಗಿರುವ ವಿದ್ಯುತ್‌ ಸಂಪರ್ಕ-ಸರಬರಾಜಿನ ಟ್ರಾನ್ಸ್‌ ಫಾಮರ್‌ ಗಳು, ತುಂಡಾಗಿ ಹೋಗಿರುವ ವೈಯರ್‌ಗಳು, ಎಲ್‌ಟಿಡಿ ಬಾಕ್ಸ್‌ಗಳು, ಸ್ವಿಚ್‌ಬೋರ್ಡ್‌ಗಳನ್ನು ರಿಪೇರಿ ಮಾಡುವ ದಿಕ್ಕಿನಲ್ಲಿ ಮೆಸ್ಕಾಂ, ಮಹಾನಗರ ಪಾಲಿಕೆ ಸಹಿತ ಸಂಬಂಧಪಟ್ಟ ಇಲಾಖೆಗಳು ಇದೀಗ ಕಾರ್ಯಪ್ರವೃತ್ತಗೊಂಡಿವೆ.

Advertisement

ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್‌ ಸಂಪರ್ಕ ಹಾಗೂ ಸರಬರಾಜು ವ್ಯವಸ್ಥೆ ಸಮರ್ಪಕವಾಗಿ ನಿರ್ವಹಣೆ ಆಗದಿರುವ ಕಾರಣ ಸಾರ್ವಜನಿಕರಿಗೆ ಎದುರಾಗಿರುವ ಅಪಾಯದ ಕುರಿತಂತೆ ‘ಸುದಿನ’ವು ಒಂದೂವರೆ ತಿಂಗಳ ಹಿಂದೆ ‘ವಿದ್ಯುತ್‌ -ಆಪತ್ತು ಇರಲಿ ಎಚ್ಚರ’ ಎಂಬ ಶೀರ್ಷಿಕೆಯಡಿಯಲ್ಲಿ ಅಭಿಯಾನ ಕೈಗೊಂಡಿತ್ತು. ಈ ಕುರಿತ ಸರಣಿ ವರದಿಗಳು ಬಂದಾಗ, ವರದಿಯಿಂದ ಎಚ್ಚೆತ್ತುಕೊಂಡಿದ್ದ ಮೆಸ್ಕಾಂ, ಮಹಾನಗರ ಪಾಲಿಕೆ ಸಹಿತ ಉನ್ನತ ಮಟ್ಟದ ಅಧಿಕಾರಿಗಳು ಸಭೆ ನಡೆಸಿ, ನಗರದಲ್ಲಿ ವಿದ್ಯುತ್‌ನಿಂದ ಶಾಕ್‌ ಹೊಡೆಯಬಹುದಾದ ಅಪಾಯಕಾರಿ ಸ್ಥಳಗಳಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವ ಮೂಲಕ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದರು.

ಹಂತ-ಹಂತವಾಗಿ ಸರಿಪಡಿಸುವ ಭರವಸೆ
ಒಂದೂವರೆ ತಿಂಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ನೀಡಿದ್ದ ಭರವಸೆಯಂತೆ ವಿದ್ಯುತ್‌ ಶಾಕಿಂಗ್‌ ಸ್ಪಾಟ್‌ಗಳನ್ನು ಸರಿಪಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆಯೇ? ಸುದಿನ ಉಲ್ಲೇಖೀಸಿದ್ದ ಅಪಾಯಕಾರಿ ಸ್ಪಾಟ್‌ಗಳ ಪೈಕಿ ಎಷ್ಟು ಕಡೆಗಳಲ್ಲಿ ಅದನ್ನು ಸರಿಪಡಿಸುವ ಕಾರ್ಯ ಆಗಿದೆ? ಎಂಬಿತ್ಯಾದಿ ಅಂಶಗಳ ಬಗ್ಗೆ ಮತ್ತೆ ರಿಯಾಲಿಟಿ ಚೆಕ್‌ ಮಾಡುವ ಪ್ರಯತ್ನವನ್ನು ಸುದಿನ ನಡೆಸಿದೆ. 

ಆ ಪ್ರಕಾರ, ಕೆಲವು ಕಡೆಗಳಲ್ಲಿ ಮೆಸ್ಕಾಂ ಸಹಿತ ಸಂಬಂಧಪಟ್ಟ ಇಲಾಖೆಗಳು ಸಮಸ್ಯೆಗೆ ತುರ್ತು ಸ್ಪಂದಿಸುವ ಕೆಲಸವನ್ನು ಮಾಡಿವೆ. ಆದರೆ, ಇನ್ನು ಕೂಡ ಬಹಳಷ್ಟು ಕಡೆಗಳಲ್ಲಿ ಅಪಾಯದ ಪರಿಸ್ಥಿತಿ ಯಥಾ ಸ್ಥಿತಿಯಲ್ಲಿ ಇದ್ದು, ಅವುಗಳನ್ನು ಹಂತ- ಹಂತವಾಗಿ ಸರಿಪಡಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ನಗರದಲ್ಲಿರುವ ಟ್ರಾನ್ಸ್‌ಫಾಮರ್‌ಗಳಲ್ಲಿ ಬಾಯ್ದೆರೆದು ಕೊಂಡಿರುವ ಎಲ್‌ಟಿಡಿ ಬಾಕ್ಸ್‌ಗಳನ್ನು ಮೆಸ್ಕಾಂ ಈಗಾಗಲೇ ಗುರುತಿಸಿದ್ದು, ನಗರ ಮತ್ತು ಉಳ್ಳಾಲ ಪ್ರದೇಶಗಳಲ್ಲಿ ಒಟ್ಟಾರೆ 270 ಹೊಸ ಎಲ್‌ಟಿಡಿ ಬಾಕ್ಸ್ ಗಳನ್ನು ಅಳವಡಿಸಿದೆ. ನಗರದ ಇನ್ನೂ ಎಲ್ಲೆಲ್ಲಿ ಕೆಟ್ಟು ಹೋಗಿರುವ ಬಾಕ್ಸ್‌ಗಳಿವೆ ಸಹಿತ ವಿದ್ಯುತ್‌ ಶಾಕಿಂಗ್‌ ಸ್ಪಾಟ್‌ಗಳ ಬಗ್ಗೆ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ.

Advertisement

ನಗರದ ಅನೇಕ ಕಡೆಗಳಲ್ಲಿ ಬೀದಿ ದೀಪದ ವಿದ್ಯುತ್‌ ಸರಬರಾಜು ಬಾಕ್ಸ್‌ಗಳು ಕೂಡ ಅಪಾಯ ಸೂಚಿಸಿರುವ ಬಗ್ಗೆ ‘ಸುದಿನ’ ತನ್ನ ವರದಿಯಲ್ಲಿ ಉಲ್ಲೇಖೀಸಿತ್ತು. ಇದೀಗ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಕೆಟ್ಟು ಹೋದ ಎಲ್‌ಟಿಡಿ ಬಾಕ್ಸ್‌ಗಳನ್ನು ಗುರುತು ಮಾಡುವ ಕೆಲಸ ನಡೆಯುತ್ತಿದೆ. ಈಗಾಗಲೇ ನಗರದಲ್ಲಿನ ಪ್ರಮುಖ ರಸ್ತೆಯ ಡಿವೈಡರ್‌ನಲ್ಲಿ ಅಳವಡಿಸಿದ ಬೀದಿ ದೀಪದ ಕಂಬದಲ್ಲಿ ಹೊಸ ಜಂಕ್ಷನ್‌ ಬಾಕ್ಸ್‌ ಅಳವಡಿಸಲಾಗಿದೆ. ಇನ್ನೂ ಕೆಲವೆಡೆ ಜಂಕ್ಷನ್‌ ಬಾಕ್ಸ್‌ ಕೆಟ್ಟು ಹೋಗಿದ್ದು, ಸ್ಮಾರ್ಟ್‌ಸಿಟಿ ಕ್ರಿಯಾಯೋಜನೆಯಡಿಯಲ್ಲಿ ಟೆಂಡರ್‌ ಕರೆಯಲು ಪಾಲಿಕೆ ನಿರ್ಧರಿಸಿದ್ದು, ಮುಂದಿನ ತಿಂಗಳು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಕದ್ರಿ ಪಾರ್ಕ್‌: ಸಮಸ್ಯೆ ಪರಿಹಾರ
ಪ್ರತಿನಿತ್ಯ ನೂರಾರು ಮಕ್ಕಳು, ಹೆತ್ತವರು, ಹಿರಿಯ ನಾಗರಿಕರು ಹಾಗೂ ಪ್ರವಾಸಿಗರು ಬಂದು ಹೋಗುವ ನಗರದ ಜನಪ್ರಿಯ ಪಾರ್ಕ್‌ಗಳ ಪೈಕಿ ಕದ್ರಿ ಪಾರ್ಕ್‌ ಕೂಡ ಒಂದಾಗಿದೆ. ಪಾರ್ಕ್‌ ಒಳಗಡೆ ಮಕ್ಕಳು ಆಟವಾಡುವ ಜಾಗದ ಪಕ್ಕದಲ್ಲಿ ಈ ಹಿಂದೆ ಬೀದಿ ದೀಪದ ಕಂಬದ ಕೆಳಗಿರುವ ಪೆಟ್ಟಿಗೆಯೊಂದು ತೆರೆದುಕೊಂಡು ವಯರ್‌ ಜೋತು ಬಿದ್ದಿತ್ತು. ಇದೀಗ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡಿದ್ದು, ವಿದ್ಯುತ್‌ ವಯರ್‌ಗಳನ್ನು ಪೆಟ್ಟಿಗೆಯೊಳಗೆ ಹಾಕಿ ಪೆಟ್ಟಿಗೆಯ ಬಾಗಿಲು ಮುಚ್ಚಲಾಗಿದೆ.

ಕದ್ರಿ ಜಿಂಕೆ ಉದ್ಯಾನವನದ ಒಳಗಡೆ ಸ್ಕಿನ್‌ ತೆಗೆದು, ಗಮ್‌ಟೇಪ್‌ ಸುತ್ತಿದ್ದ ವಯರ್‌ನ್ನು ಸ್ಥಳಾಂತರಿಸಲಾಗಿದೆ. ಅದೇರೀತಿ ಕದ್ರಿ ಪಾರ್ಕ್‌ನ ಪ್ರವೇಶದ್ವಾರದ ಬಳಿ ಇರುವ ಬೀದಿ ದೀಪದ ಕಂಬದಲ್ಲಿ ಮೀಟರ್‌ ಪೆಟ್ಟಿಗೆ ಯಲ್ಲಿದ್ದ ವಯರ್‌, ಪೆಟ್ಟಿಗೆಯ ಅರ್ಧ ಭಾಗ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಸುಟ್ಟು ಹೋಗಿ ಅಪಾಯ ಸೂಚಿಸುತ್ತಿತ್ತು. ಸಂಬಂಧಪಟ್ಟ ಇಲಾಖೆ ಈ ವಿಚಾರ ಗಂಭೀರವಾಗಿ ತೆಗೆದುಕೊಂಡು ಮೀಟರ್‌ ಬಾಕ್ಸ್‌ನ್ನು ಸ್ಥಳಾಂತರಿಸಿದ್ದಾರೆ. ಮಣ್ಣಗುಡ್ಡ ಬಳಿ ಇರುವ ಫುಟ್‌ ಬಾಲ್‌ ಮೈದಾನ ಪಕ್ಕದಲ್ಲಿ ಅಪಾಯ ಆಹ್ವಾನಿಸುವಂತಿದ್ದ ವಿದ್ಯುತ್‌ ವಯರ್‌ಗಳನ್ನು ಈಗ ತೆಗೆಯಲಾಗಿದೆ.

ಎಲ್‌ಟಿಡಿ ಬಾಕ್ಸ್‌ಗಳಿಗೆ ಪ್ಲಾಸ್ಟಿಕ್‌ ಹೊದಕೆ
ನಗರದಲ್ಲಿರುವ ಕೆಲವೊಂದು ಟ್ರಾನ್ಸ್‌ಫಾರ್ಮರ್‌ಗಳಲ್ಲಿರುವ ವಿದ್ಯುತ್‌ ಸರಬರಾಜು ಬಾಕ್ಸ್‌ಗಳಿಗೆ ಪ್ಲಾಸ್ಟಿಕ್‌ ಹೊದಕೆಯಿಂದ ಮುಚ್ಚಲಾಗಿದೆ. ಡೊಂಗರಕೇರಿಯ ಬಳಿ ಇರುವ ಎಲ್‌ಟಿಡಿ ಬಾಕ್ಸ್‌, ಮೇಯರ್‌ ಬಂಗ್ಲೆ ಪಕ್ಕದಲ್ಲಿರುವ ಎಲ್‌ಟಿಡಿ ಬಾಕ್ಸ್‌ಗಳಿಗೆ ಬಾಗಿಲುಗಳಿಲ್ಲ. ಅದರ ಬದಲು ಪ್ಲಾಸ್ಟಿಕ್‌ಗಳಿಂದ ಮುಚ್ಚಲಾಗಿದೆ. ನಗರದ ಮೆಸ್ಕಾಂ ಕಚೇರಿ ಬಳಿ ಇರುವ ಬೀದಿ ದೀಪ ಸರಬರಾಜು ಪೆಟ್ಟಿಗೆಯನ್ನು ಕೂಡ ರಟ್ಟಿನಿಂದ ಮುಚ್ಚಲಾಗಿದೆ.

ಕ್ರಮಕೈಗೊಳ್ಳುತ್ತೇವೆ
ನಗರದಲ್ಲಿನ ಒಟ್ಟಾರೆ 270 ಕಡೆಗಳಲ್ಲಿ ಈಗಾಗಲೇ ಹೊಸ ಎಲ್‌ಟಿಡಿ ಬಾಕ್ಸ್‌ಗಳನ್ನು ಅಳವಡಿಸಲಾಗಿದೆ. ಇನ್ನೂ ಕೆಲವೆಡೆ ಬಾಯ್ದೆರೆದಿರುವ ಬಾಕ್ಸ್ ಗಳಿದ್ದರೆ ಆ ಬಗ್ಗೆ ಲೈನ್‌ ಮ್ಯಾನ್‌ಗಳು ಸೆಕ್ಷನ್‌ ಆಫೀಸರ್‌ ಗಳಿಗೆ ತಿಳಿಸಲು ಸೂಚಿಸಲಾಗಿದೆ. ಕೂಡಲೇ ಕ್ರಮ ಕೈಗೊಳ್ಳುತ್ತೇವೆ.
ಕೃಷ್ಣರಾಜ್‌,
  ಮೆಸ್ಕಾಂ ಕಾರ್ಯಕಾರಿ ಅಭಿಯಂತರ 

ಟೆಂಡರ್‌ ಕರೆಯಲಾಗಿದೆ
ನಗರದಲ್ಲಿನ ಬೀದಿ ದೀಪ ಎಲ್‌ಟಿಡಿ ಬಾಕ್ಸ್‌ ನಿರ್ವಹಣೆಗೆ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಟೆಂಡರ್‌ ಕರೆಯಲಾಗುವುದು ಒಂದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬಳಿಕ ಹೊಸ ಬಾಕ್ಸ್‌ ಅಳವಡಿಸುತ್ತೇವೆ. ಈಗಾಗಲೇ ಬಾಯ್ದೆರೆದಿರುವ ಬೀದಿ ದೀಪ ಎಲ್‌ಟಿಡಿ ಬಾಕ್ಸ್‌ನ ತತ್‌ಕ್ಷಣದ ಪರ್ಯಾಯ ವ್ಯವಸ್ಥೆಗೆ ಸೂಚಿಸುತ್ತೇನೆ.
– ಶ್ರೀ ಕುಮಾರ್‌, ಪಾಲಿಕೆ
ಸಹಾಯಕ ಎಂಜಿನಿಯರ್‌

ಶಾಶ್ವತ ಪರಿಹಾರ ಅಗತ್ಯ
ನಗರದಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕೆಲವೊಂದು ಎಲ್‌ಟಿಡಿ ಬಾಕ್ಸ್‌ಗಳಿಗೆ ಸಂಬಂಧಪಟ್ಟ ಇಲಾಖೆ ಈಗ ತಾತ್ಕಾಲಿಕ ಪರಿಹಾರ ಕಂಡುಕೊಂಡಿದೆ. ಕೆಲವು ಕಡೆ ಗಳಲ್ಲಿ ಜೋತು ಬಿದ್ದಿದ್ದ ವಯರ್‌ ಗಳನ್ನು ಎಲ್‌ಟಿಡಿ ಬಾಕ್ಸ್‌ನೊಳಗೆ ಇಟ್ಟು ಅದನ್ನು ಮುಚ್ಚದೆ ತೆರೆದಿಡಲಾಗಿದೆ. ಇನ್ನು ಹಲವು ಕಡೆಗಳಲ್ಲಿ ಶಿಥಿಲಾವಸ್ಥೆಯಲ್ಲೇ ಸ್ವಿಚ್‌ ಬಾಕ್ಸ್‌, ಎಲ್‌ಡಿಸಿ ಬಾಕ್ಸ್‌ಗಳು ಇವೆ. ಹೀಗಾಗಿ, ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆಯೇ ಹೊರತು ಜನರ ಸುರಕ್ಷತೆ ದೃಷ್ಟಿಯಿಂದ ಶಾಶ್ವತ ಪರಿಹಾರ ಒದಗಿಸುವ ಕಾರ್ಯ ಇನ್ನಷ್ಟೇ ಆಗಬೇಕಿದೆ. 

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next