ಹೊಸದಿಲ್ಲಿ: ಭಾರತದ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ವಿವರಗಳನ್ನು ಸಲ್ಲಿಸಲು ಜೂನ್ 30 ರವರೆಗೆ ಸಮಯವನ್ನು ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ನಾಳೆ (ಮಾರ್ಚ್ 12) ಕೆಲಸದ ಸಮಯದ ಮುಕ್ತಾಯದೊಳಗೆ ಎಲೆಕ್ಟೋರಲ್ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಎಸ್‌ಬಿಐಗೆ ನ್ಯಾಯಾಲಯ ಹೇಳಿದೆ.
ಮಾರ್ಚ್ 15 ರ ಸಂಜೆ 5 ಗಂಟೆಯೊಳಗೆ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಹಾಕುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಸಮಿತಿಗೆ ಆದೇಶಿಸಿದೆ.
ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ನ್ಯಾಯಾಲಯ ತನ್ನ ಆದೇಶವನ್ನು ಕಾಲಮಿತಿಯೊಳಗೆ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಬಾಂಡ್‌ನ ವಿವರಗಳನ್ನು ಬಹಿರಂಗಪಡಿಸುವ ಗಡುವನ್ನು ಜೂನ್ 30 ರವರೆಗೆ ವಿಸ್ತರಿಸುವಂತೆ ಎಸ್‌ಬಿಐ ಕಳೆದ ವಾರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಸಿಜೆಐ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ”ಕಳೆದ 26 ದಿನಗಳಲ್ಲಿ, ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ನಿಮ್ಮ ಅರ್ಜಿಯ ಬಗ್ಗೆ ಮೌನವಾಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ.