ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಹತ್ತು ದಿನಗಳಷ್ಟೇ ಬಾಕಿ ಉಳಿದಿದ್ದರೂ ಪ್ರಚಾರದ ಅಬ್ಬರವಾಗಲಿ ಅಥವಾ ಚುನಾವಣೆ, ಪಕ್ಷಗಳ ಬಲಾಬಲ, ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದ ಬಗ್ಗೆಯಾಗಲೀ ಗಂಭೀರವಾದ ಮಾತು-ಚರ್ಚೆಗಳು ಸಾರ್ವಜನಿಕ ವಲಯದಿಂದ ಈ ಬಾರಿ ಅಷ್ಟೊಂದು ಕೇಳಿಸುತ್ತಿಲ್ಲ. ಪಕ್ಷಗಳ ಅಭ್ಯರ್ಥಿಗಳು ಮನೆ-ಮನೆ ಭೇಟಿ, ಬಹಿರಂಗ ಸಭೆಗಳಲ್ಲಿ ಮತಯಾಚನೆ ಮಾಡುತ್ತಿದ್ದರೆ, ಅತ್ತ ಮತದಾರರು ಮಾತ್ರ ತಮ್ಮ ಪಾಡಿಗೆ ತಾವು ಬಿಜಿಯಾಗಿರುವ ಸನ್ನಿವೇಶ ಕಾಣಿಸುತ್ತಿದೆ.
ಅದಕ್ಕೆ ಪ್ರಮುಖ ಕಾರಣ ಕಾಲೇಜುಗಳ ಪುನರಾರಂಭ ಹಾಗೂ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಒತ್ತಡ. ಹಾಗೆಯೇ ಮಳೆಗಾಲ ಆರಂಭವಾಗುವುದಕ್ಕೆ ತಿಂಗಳಷ್ಟೇ ಬಾಕಿ ಉಳಿದಿದ್ದು, ಒಂದಷ್ಟು ಮಂದಿ ಮದುವೆ, ಜಾತ್ರೆ, ಧಾರ್ಮಿಕ ಉತ್ಸವಗಳನ್ನು ಪೂರ್ಣಗೊಳಿಸುವ ತರಾತುರಿಯಲ್ಲಿದ್ದಾರೆ. ಈ ಕಾರಣಗಳಿಂದ ಚುನಾವಣೆಯತ್ತ ಹೆಚ್ಚಿನ ಗಮನಹರಿಸುವ ಮೂಲಕ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕೂ ಜಾಸ್ತಿ ಸಮಯವೂ ಇಲ್ಲ.
ಏಕೆಂದರೆ ಈ ವರ್ಷ ಪಿಯುಸಿ ಶೈಕ್ಷಣಿಕ ವೇಳಾಪಟ್ಟಿ ಪರಿಷ್ಕರಣೆಯಾಗಿದ್ದು ಪಿಯುಸಿ ತರಗತಿಗಳು ಒಂದು ತಿಂಗಳು ಮುಂಚಿತವಾಗಿ ಆರಂಭಗೊಳ್ಳುತ್ತಿವೆ. ದ್ವಿತೀಯ ಪಿಯುಸಿ ಮೇ 2ರಿಂದ ಆರಂಭವಾಗಿದೆ ಹಾಗೂ ಪ್ರಥಮ ಪಿಯುಸಿ ಮೇ 14ಕ್ಕೆ ಪ್ರಾರಂಭವಾಗುತ್ತಿವೆ.
ಇನ್ನು ದ್ವಿತೀಯ ಪಿಯುಸಿ, ಜೆಇಇ ಮೈನ್ ಫಲಿತಾಂಶ ಈಗಷ್ಟೆ ಬಂದಿದೆ. ಸಿಇಟಿ ಪರೀಕ್ಷೆಗಳ ಫಲಿತಾಂಶ ಸದ್ಯದಲ್ಲೇ ಘೋಷಣೆಯಾಗಲಿದೆ. ಇನ್ನು ಎಸ್ ಎಸ್‌ಎಲ್‌ಸಿ ಫಲಿತಾಂಶ ಕೂಡ ವಾರದೊಳಗೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಈ ರೀತಿ ಒಂದು ಕಡೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಾನಾ ಹಂತದ ಪರೀಕ್ಷೆಗಳ ಫಲಿತಾಂಶ ಹೊರಬೀಳುತ್ತಿದ್ದರೆ, ಇನ್ನೊಂದು ಕಡೆ ತಮ್ಮ ಮಕ್ಕಳಿಗೆ ಪಿಯುಸಿ, ಎಂಜಿನಿಯರಿಂಗ್, ವೈದ್ಯ ಸಹಿತ ಉನ್ನತ ಶಿಕ್ಷಣಕ್ಕೆ ಸೀಟು ಪಡೆಯುವ ವಿಚಾರದಲ್ಲಿ ಪೋಷಕರು ಬಿಜಿಯಾಗುತ್ತಿದ್ದಾರೆ. ಇದರ ನಡುವೆ ಚುನಾವಣೆ ಬಂದಿರುವುದರಿಂದ ಪೋಷಕರು ಆ ಕಡೆ ಹೆಚ್ಚು ಗಮನಹರಿಸುತ್ತಿದ್ದಾರೆ.
ಎಪ್ರಿಲ್, ಮೇ ತಿಂಗಳಿನಲ್ಲಿ ವಿವಾಹ ಸಹಿತ ಶುಭ ಕಾರ್ಯಗಳು, ಜಾತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವ ಕಾಲ. ಜನರು ಇವುಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ. ಇದರಿಂದಾಗಿ ಚುನಾವಣೆಯ ವಿಚಾರಗಳನ್ನು ಅಷ್ಟೇನೂ ಗಮನಿಸುವ ಗೋಜಿಗೆ ಅವರು ಹೋಗುತ್ತಿಲ್ಲ. ಚುನಾವಣ ಹವಾ ಕೂಲ್ ಆಗಿರಲು ಚುನಾವಣಾ ನೀತಿಸಂಹಿತೆಯ ಪಾತ್ರವೂ ಇದೆ. ಚುನಾವಣಾ ಅಧಿಕಾರಿಗಳ ಅನುಮತಿ ಇಲ್ಲದೆ ಬಂಟಿಂಗ್ಸ್, ಪೋಸ್ಟರ್, ಫ್ಲೆಕ್ಸ್‌ಗಳನ್ನು ಅಳವಡಿಸುವಂತಿಲ್ಲ.
ಗೋಡೆ ಬರಹಗಳನ್ನು ಹಾಕುವಂತಿಲ್ಲ. ಹತ್ತು ಹಲವು ನಿಯಮಗಳನ್ನು ಪಾಲಿಸಬೇಕಾಗಿರುವುದರಿಂದ ಧ್ವನಿ ವರ್ಧಕಗಳನ್ನು ಬಳಸಿ ಪ್ರಚಾರ ಮಾಡುವ ಗೋಜಿಗೂ ಅಭ್ಯರ್ಥಿಗಳು ಹೋಗುತ್ತಿಲ್ಲ. ಈ ಹಿಂದೆಲ್ಲ ಚುನಾವಣೆ ಬಂತೆಂದರೆ, ರಸ್ತೆಯುದ್ದಕ್ಕೂ ಬ್ಯಾನರ್, ಕಟೌಟ್, ಪೋಸ್ಟರ್‌ಗಳಿಂದ ರಾರಾಜಿಸುತ್ತಿತ್ತು. ಹೀಗಿರುವಾಗ, ಈಗ ಚುನಾವಣೆಯ ಬಗ್ಗೆ ಯಾವುದೇ ಸದ್ದು-ಗದ್ದಲ ಗೋಚರಿಸುತ್ತಿಲ್ಲ.
ಬಿಸಿಲಿನ ಧಗೆ: ತೀವ್ರ ಬಿಸಿಲಿನ ವಾತಾವರಣದ ನಡುವೆ ಈ ಬಾರಿಯ ಚುನಾವಣೆ ನಡೆಯುತ್ತಿದೆ. ದಕ್ಷಿಣ ಕನ್ನಡದಲ್ಲಿ ಪ್ರಸ್ತುತ ದಿನದ ಗರಿಷ್ಠ ತಾಪಮಾನವೂ 37 ಡಿಗ್ರಿ ಸೆಲ್ಸಿಯಸ್ ಇದೆ. ಪಕ್ಷಗಳ ಕಾರ್ಯಕರ್ತರು ಬಿಸಿಲಿನ ಧಗೆಗೆ ಬೆವರಿಳಿಸುತ್ತಾ ಮತದಾರರ ಮನೆಮನೆಗೆ ಭೇಟಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಉರಿ ಬಿಸಿಲಿನ ಬೇಗೆಯೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರನ್ನು ಹೈರಾಣಾಗಿಸಿದೆ.
ಕೇಶವ ಕುಂದರ್