Advertisement

Election result; ಪಂಚರಾಜ್ಯಗಳ ಗೆಲುವು ನಾಯಕರ ಮೇಲೇನು ಪರಿಣಾಮ? ಇಲ್ಲಿದೆ ಮಾಹಿತಿ…

11:55 PM Dec 04, 2023 | Team Udayavani |

ರವಿವಾರದ ನಾಲ್ಕು ಮತ್ತು ಸೋಮವಾರದ ಒಂದು ಸೇರಿ ಪಂಚರಾಜ್ಯಗಳ ವಿಧಾನಸಭೆ ಚುನಾವಣ ಫ‌ಲಿತಾಂಶ ಪ್ರಕಟವಾಗಿ, ಈಗಾಗಲೇ ಸರಕಾರ ರಚನೆಯ ಕಸರತ್ತುಗಳೂ ಆರಂಭವಾಗಿವೆ. 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಫ‌ಲಿತಾಂಶ ಬಹಳ ಪ್ರಾಮುಖ್ಯ ಪಡೆದುಕೊಂಡಿದೆ. ಈ ಚುನಾವಣೆ ಯಾವ ನಾಯಕರ ಮೇಲೆ ಏನು ಪರಿಣಾಮ ಬೀರಲಿದೆ? ಇಲ್ಲಿದೆ ಮಾಹಿತಿ…

Advertisement

ನರೇಂದ್ರ ಮೋದಿ
ಹಿಂದಿ ಬೆಲ್ಟ್ನ ಮೂರು ರಾಜ್ಯಗಳಲ್ಲಿನ ಬಿಜೆಪಿ ಗೆಲುವಿಗೆ ಪ್ರಮುಖ ಕಾರಣವೇ ಪ್ರಧಾನಿ ನರೇಂದ್ರ ಮೋದಿ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದೇ, ಮೋದಿ ಅವರ ಹೆಸರಿನಲ್ಲೇ ಚುನಾವಣೆ ಎದುರಿಸಲಾಗಿತ್ತು. ಮೋದಿ ಅವರ ಜನಪ್ರಿಯತೆ, ರಾಷ್ಟ್ರೀಯತೆ ಮತ್ತು ಜನ ಕಲ್ಯಾಣದ ಯೋಜನೆಗಳಿಂದಾಗಿ ಜನ ಮತ ಹಾಕಿದ್ದಾರೆ. ವಿಶೇಷವೆಂದರೆ ಈ ಬಾರಿಯ ಚುನಾವಣೆ ಬಿಜೆಪಿ ಪಾಲಿಗೆ ಹೆಚ್ಚು ಕಷ್ಟಕರವಾಗಿಯೂ ಇತ್ತು.

ಮಧ್ಯಪ್ರದೇಶದಲ್ಲಿನ 18 ವರ್ಷಗಳ ಆಡಳಿತ, ಛತ್ತೀಸ್‌ಗಢದಲ್ಲಿ ಭೂಪೇಶ್‌ ಬಘೇಲ್‌ ಅವರ ಜನಪ್ರಿಯತೆ ಬಿಜೆಪಿಗೆ ಕೊಂಚ ಅಡ್ಡಿಯುಂಟು ಮಾಡುವ ಸಾಧ್ಯತೆ ಇತ್ತು. ಆದರೆ, ಮೋದಿ ಅವರ ಜನಪ್ರಿಯತೆಯಿಂದಾಗಿ ಈ ಎಲ್ಲ ಅಡ್ಡಿಗಳು ದೂರ ಸರಿದವು. ಮೂರು ರಾಜ್ಯಗಳಲ್ಲೂ ಬಿಜೆಪಿ ಅತ್ಯಂತ ಸುಲಭವಾಗಿ ಜಯ ಗಳಿಸಿತು. ಅತ್ತ ತೆಲಂಗಾಣದಲ್ಲಿ ಗೆಲ್ಲದಿದ್ದರೂ, 2018ರ ಚುನಾವಣೆಗೆ ಹೋಲಿಕೆ ಮಾಡುವುದಾದರೆ, ಹೆಚ್ಚೇ ಸೀಟುಗಳು ಬಂದಿವೆ. ಮತ ಹಂಚಿಕೆಯೂ ಹೆಚ್ಚಾಗಿದೆ.

ಹಿಂದಿ ರಾಜ್ಯಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ, ಈಗಾಗಲೇ ಬಿಜೆಪಿ 200 ಲೋಕಸಭೆ ಸೀಟುಗಳನ್ನು ಗೆದ್ದ ಸಂಭ್ರಮದಲ್ಲಿದೆ. ವಿಧಾನಸಭೆ ಚುನಾವಣೆಯಲ್ಲೇ ಮೋದಿ ಮುಖ ನೋಡಿ ಮತ ಹಾಕುವುದಾದರೆ, 2024ರಲ್ಲಿ ಮೋದಿಗಾಗಿಯೇ ಮತ ಕೇಳುವಾಗ ಜನ ದೂರ ಸರಿಯುತ್ತಾರೆಯೋ ಎಂಬುದು ಬಿಜೆಪಿ ನಾಯಕರ ಅಭಿಪ್ರಾಯ. ಹೀಗಾಗಿ ಈ ಚುನಾವಣೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೂಸ್ಟರ್‌ ಡೋಸ್‌ ನೀಡಿದೆ ಎಂದೇ ಹೇಳಲಾಗುತ್ತಿದೆ.

ರಾಹುಲ್‌ ಗಾಂಧಿ
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾಗಿರುವ ರಾಹುಲ್‌ ಗಾಂಧಿಯವರಿಗೆ ಈ ಚುನಾವಣೆ ದೊಡ್ಡ ಮಟ್ಟದ ಪೆಟ್ಟು ನೀಡಿದೆ ಎಂದೇ ಹೇಳಬಹುದು. ಭಾರತ್‌ ಜೋಡೋ ಯಾತ್ರೆ ಅನಂತರ, ತಮ್ಮ ವರ್ಚಸ್ಸನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದ ರಾಹುಲ್‌ ಗಾಂಧಿಯವರು, ಹಿಂದಿ ಹಾರ್ಟ್‌ಲ್ಯಾಂಡ್‌ನ‌ ರಾಜ್ಯಗಳಲ್ಲಿ ಉತ್ತಮವಾದ ಗೆಲುವು ಬೇಕಾಗಿತ್ತು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಪರ್ಯಾಯ ನಾಯಕ ಎಂದೇ ಈ ಚುನಾವಣೆಯಲ್ಲಿ ಬಿಂಬಿಸಿಕೊಂಡಿದ್ದರು. ಕಾಂಗ್ರೆಸ್‌ ಕೂಡ ಅದೇ ರೀತಿ ಬಿಂಬಿಸಲು ಪ್ರಯತ್ನಿಸಿತ್ತು. ಅದರಲ್ಲೂ 18 ವರ್ಷಗಳ ಕಾಲ ಆಡಳಿತದಲ್ಲಿರುವ ಬಿಜೆಪಿ ಸರಕಾರವನ್ನು ಮಧ್ಯಪ್ರದೇಶದಿಂದ ಕಿತ್ತೂಗೆಯಬೇಕು ಎಂದೇ ಕಾಂಗ್ರೆಸ್‌ ಯೋಜನೆ ರೂಪಿಸಿತ್ತು. ಆದರೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿನ ಸೋಲು ರಾಹುಲ್‌ ಅವರಿಗೆ ದೊಡ್ಡ ಹಿನ್ನಡೆ ತಂದುಕೊಟ್ಟಿದೆ. ವಿಶೇಷವೆಂದರೆ ಭಾರತ್‌ ಜೋಡೋ ಯಾತ್ರೆ ವೇಳೆ ಈ ಮೂರು ರಾಜ್ಯಗಳಲ್ಲಿಯೂ ಗಣನೀಯ ಪ್ರಮಾಣದಲ್ಲಿ ಸ್ಪಂದನೆ ಸಿಕ್ಕಿತ್ತು. ಆದರೆ ಜನರ ಸ್ಪಂದನೆಯನ್ನು ಮತವಾಗಿ ಮಾರ್ಪಡಿಸುವಲ್ಲಿ ಕಾಂಗ್ರೆಸ್‌ ವಿಫ‌ಲವಾಗಿದೆ ಎಂದೇ ಹೇಳಬಹುದು. ಅಲ್ಲದೆ ಈ ಸೋಲಿನಿಂದ ಐಎನ್‌ಡಿಐಎದಲ್ಲಿನ ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿಯವರ ಪ್ರಾಮುಖ್ಯವೂ ಕಡಿಮೆಯಾಗಬಹುದು. ದಕ್ಷಿಣ ಭಾರತದ ತೆಲಂಗಾಣದಲ್ಲಿನ ಗೆಲುವು ರಾಹುಲ್‌ ಅವರಿಗೆ ಮಾನಸಿಕವಾಗಿ ಬೂಸ್ಟರ್‌ ನೀಡಿದೆ. ದಕ್ಷಿಣ ಭಾರತದಲ್ಲಿ ಅವರ ವರ್ಚಸ್ಸು ಹೆಚ್ಚಿರುವುದನ್ನು ಈ ಫ‌ಲಿತಾಂಶ ತೋರಿಸಿದೆ. ಆದರೆ ದಕ್ಷಿಣ ಭಾರತದ ಲ್ಲಿನ ವರ್ಚಸ್ಸಿನಿಂದ ಲೋಕಸಭೆ ಚುನಾವಣೆ ಗೆಲ್ಲುವುದು ಕಷ್ಟಕರ. ಕರ್ನಾಟಕದ ಜನತೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ವಿಚಾರದಲ್ಲಿ ಬುದ್ಧಿವಂತಿಕೆಯಿಂದ ಮತ ಹಾಕುತ್ತಾರೆ. ತೆಲಂಗಾಣದಲ್ಲಿ ಈಗ ಇರುವುದಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬಹುದು. ತಮಿಳುನಾಡು, ಕೇರಳ, ಆಂಧ್ರ ಪ್ರದೇಶದಲ್ಲಿ ಎಷ್ಟು ಸೀಟು ಸಿಗಲಿವೆ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಹೀಗಾಗಿ, ಮುಂದಿನ ಲೋಕಸಭೆ ಚುನಾವಣೆ ವಿಚಾರದಲ್ಲಿ ಇನ್ನಷ್ಟು ಕಾರ್ಯತಂತ್ರ ರೂಪಿಸಬೇಕಾದ ಅಗತ್ಯತೆ ಇದೆ.

Advertisement

ಮಲ್ಲಿಕಾರ್ಜುನ ಖರ್ಗೆ
2022ರ ಅಕ್ಟೋಬರ್‌ನಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಚುನಾವಣೆ ಫ‌ಲಿತಾಂಶ ಹಿನ್ನಡೆ ತಂದಿದೆ. ವಿಶೇಷವೆಂದರೆ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭೂತಪೂರ್ವವಾಗಿ ಗೆದ್ದಿತ್ತು. ಹೀಗಾಗಿ, ಕಾಂಗ್ರೆಸ್‌ನ ಪುನರುತ್ಥಾನದ ಬಗ್ಗೆ ಆಶಾದಾಯಕ ಮಾತುಗಳು ಕೇಳಿ­ಬಂದಿ­ದ್ದವು. ಅಲ್ಲದೆ, ತೆಲಂ­ಗಾಣ­ದಲ್ಲಿ ಬಿಆರ್‌ಎಸ್‌ನಿಂದ ಅಧಿಕಾರ ಪಡೆದಿರುವುದು ಉತ್ತಮ ಸಾಧನೆಯೇ. ಜತೆಗೆ ಖರ್ಗೆ ಅವರು ದಕ್ಷಿಣ ಭಾರತದವರೇ ಆಗಿರುವುದರಿಂದ, ತೆಲಂಗಾಣದ ಸಾಧನೆ ಬೂಸ್ಟ್‌ ನೀಡಿದಂತಾಗಿದೆ.

ಆದರೆ ಉತ್ತರ ಭಾರತದಲ್ಲಿನ ಮೂರು ರಾಜ್ಯಗಳ ಸೋಲು ಮಾತ್ರ ಹಿನ್ನಡೆಗೆ ಕಾರಣವಾಗಿದೆ. ಛತ್ತೀಸ್‌ಗಢದಲ್ಲಿ ಜನಪ್ರಿಯ ಸರಕಾರವಿದ್ದು, ಅದನ್ನು ಉಳಿಸಿಕೊಳ್ಳಲಾಗಲಿಲ್ಲ. ಚುನಾವಣೆಗೆ ಮುನ್ನ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ನದ್ದೇ ಸರಕಾರ ಎಂದೇ ಎಲ್ಲರೂ ಹೇಳುತ್ತಿದ್ದರು. ಜತೆಗೆ 2018ರಲ್ಲಿ ಕಾಂಗ್ರೆಸ್‌ ಗೆಲ್ಲುವ ಮುನ್ನ, ಈ ರಾಜ್ಯವನ್ನು ಬಿಜೆಪಿಯ ರಮಣ್‌ ಸಿಂಗ್‌ ಅವರು ಸತತ ಮೂರು ಬಾರಿ ಆಳ್ವಿಕೆ ನಡೆಸಿದ್ದರು. ಆದರೆ ಕಾಂಗ್ರೆಸ್‌ ಒಂದು ಬಾರಿ ಮಾತ್ರ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮುಂದುವರಿಸಿಕೊಂಡು ಹೋಗುವಲ್ಲಿ ವಿಫ‌ಲವಾಗಿದೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್‌ ಪೈಲಟ್‌ ಅವರ ನಡುವಿನ ಆಂತರಿಕ ಘರ್ಷಣೆ ನಿವಾರಣೆ ಮಾಡುವಲ್ಲಿ ಹೈಕಮಾಂಡ್‌ ವಿಫ‌ಲವಾಗಿದೆ ಎಂಬ ವಿಶ್ಲೇಷಣೆಗಳಿವೆ. ಮಧ್ಯಪ್ರದೇಶದಲ್ಲೂ ಸೋಲಿಗೆ ಇಂಥದ್ದೇ ಸಂಘರ್ಷ ಕಾರಣ ಎಂಬ ಮಾತುಗಳಿವೆ. ಹೀಗಾಗಿ ಪಕ್ಷದ ಆಂತರಿಕ ಸಂಘರ್ಷ ನಿವಾರಣೆ ಮಾಡುವಲ್ಲಿ ಖರ್ಗೆ ಅವರ ನೇತೃತ್ವದಲ್ಲಿ ಹೈಕಮಾಂಡ್‌ ಪ್ರಯತ್ನ ಪಟ್ಟರೆ ಲೋಕಸಭೆ ಚುನಾವಣೆ ಎದುರಿಸುವುದು ಕೊಂಚ ಸುಲಭವಾಗಬಹುದು.

ಅಮಿತ್‌ ಶಾ
ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಮತಗಳಾಗಿ ಪರಿವರ್ತಿಸುವಲ್ಲಿ ಅಮಿತ್‌ ಶಾ ಈ ಬಾರಿ ಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ಈ ಬಾರಿಯ ಹಿಂದಿ ಬೆಲ್ಟ್ ನ  ಮೂರು ರಾಜ್ಯಗಳಲ್ಲೂ ಅಮಿತ್‌ ಶಾ ತಂತ್ರಗಾರಿಕೆ ಕೆಲಸ ಮಾಡಿದೆ. ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೇ ಪ್ರಚಾರ ನಡೆಸಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿಯತ್ತ ಅವಕಾಶ ತಿರುಗಿಸಿದ್ದು, ಮಧ್ಯ ಪ್ರದೇಶದ ಜನಪ್ರಿಯ ಕಾರ್ಯಕ್ರಮಗಳು, ಛತ್ತೀಸ್‌ಗಢದಲ್ಲಿ ಬುಡಕಟ್ಟು ಜನಾಂಗದವರ ಓಲೈಕೆ ಅಮಿತ್‌ ಶಾ ಅವರ ತಂತ್ರಗಾರಿಕೆಯ ಭಾಗಗಳು. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆ ವೇಳೆಯಲ್ಲೂ ಇವರ ತಂತ್ರಗಾರಿಕೆ ಬಿಜೆಪಿಗೆ ನೆರವಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next