Advertisement

ದಟ್ಟ ಕಾನನ ನಡುವೆ ರಾಜಕೀಯ ಸುನಾಮಿ

11:22 PM Feb 13, 2023 | Team Udayavani |

ಕಾರವಾರ: ಪಶ್ಚಿಮ ಘಟ್ಟದ ದಟ್ಟ ಕಾನನ, ಅರಬ್ಬಿ ಸಮುದ್ರದ ಅಲೆ ಗಳ ಅಬ್ಬರದ ನಾಡು ಉತ್ತರ ಕನ್ನಡ ಜಿಲ್ಲೆ. ಘಟ್ಟದ ಮೇಲೆ, ಘಟ್ಟದ ಕೆಳಗೆ ಎಂದು ಮಾನಸಿಕವಾಗಿ ವಿಂಗಡಣೆಯಾಗಿದ್ದರೂ ಅಖಂಡ ಜಿಲ್ಲೆಯಾಗಿ ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ ಛಾಪು ಮೂಡಿಸಿದೆ.

Advertisement

ಕಾರವಾರ, ಶಿರಸಿ, ಹಳಿಯಾಳ, ಅಂಕೋಲಾ, ಕುಮಟಾ, ಭಟ್ಕಳ ಸಹಿತ 6 ಕ್ಷೇತ್ರಗಳನ್ನೊಂಡ ಜಿಲ್ಲೆ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆದಿದೆ. ದೊಡ್ಮನೆ ರಾಮಕೃಷ್ಣ ಹೆಗಡೆ ಶಿರಸಿ ಕ್ಷೇತ್ರದಿಂದ ಎರಡು ಸಲ, ಹಳಿಯಾಳ ಕ್ಷೇತ್ರದಿಂದ ಒಮ್ಮೆ ಆಯ್ಕೆಯಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅತ್ಯುನ್ನತ ಹುದ್ದೆ ನಿಭಾಯಿಸಿದ್ದರು.

ಆರ್‌.ವಿ.ದೇಶಪಾಂಡೆ ಹಳಿಯಾಳ ಕ್ಷೇತ್ರದಿಂದ ಜನತಾ ಪಕ್ಷ, ಜನತಾ ದಳದಿಂದ ನಾಲ್ಕು ಬಾರಿ, ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅಂಕೋಲಾದಿಂದ ಮೂರು ಬಾರಿ, ಶಿರಸಿಯಿಂದ ಮೂರು ಬಾರಿ ಸಹಿತ ಸತತ 6 ಬಾರಿ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ.

ರಾಜ್ಯಕ್ಕೆ ಬೆಳಕು ನೀಡುವ ಜಿಲ್ಲೆಯಲ್ಲಿ ಕೈಗಾ ಅಣು ವಿದ್ಯುತ್‌ ಸ್ಥಾವರ ಸಹಿತ ಸೂಪಾ, ಕೊಡಸಳ್ಳಿ, ಕದ್ರಾ, ಗೇರುಸೊಪ್ಪ ಜಲ ವಿದ್ಯುತ್‌ ಉತ್ಪಾದನಾ ಕೇಂದ್ರಗಳಿವೆ. ಏಷ್ಯಾ ಖಂಡದಲ್ಲೇ ಅತೀ ದೊಡ್ಡ ನೌಕಾನೆಲೆ ಸಹ ಇಲ್ಲೇ ಇದೆ. ಕಾಂಗ್ರೆಸ್‌ ಭದ್ರಕೋಟೆ ಜತೆಗೆ ಜನತಾ ಪರಿವಾರದ ಪಕ್ಷಗಳಿಗೂ ಇಲ್ಲಿನ ಜನ ಮಣೆ ಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಬೇರುಗಳು ಗಟ್ಟಿಯಾಗಿದ್ದು, ಸಮಬಲದ ಕಾದಾಟಕ್ಕೂ ಸಾಕ್ಷಿಯಾಗಿದೆ. ವಿಶೇಷ ಎಂದರೆ ಎಂಇಎಸ್‌ ಕೂಡ ಮ್ಮೆ ಗೆಲುವು ಸಾಧಿಸಿದೆ.

ಕಾರವಾರ-ಅಂಕೋಲಾ
ಕಾರವಾರ ಕಾಂಗ್ರೆಸ್‌ನ ಭದ್ರಕೋಟೆ. ಒಮ್ಮೆ ಎಂಇಎಸ್‌ ಸಹ ಗೆದ್ದಿದೆ. ಎಸ್‌.ಡಿ.ಗಾಂವ್ಕರ್‌, ಪ್ರಭಾಕರ ರಾಣೆ, ಕದಂ ಎಲ್ಲರೂ ಕಾಂಗ್ರೆಸ್‌ನಿಂದ ಗೆದ್ದವರೇ. ಕದಂ ಅವರು ಎಂಇಎಸ್‌, ಸ್ವತಂತ್ರ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸಿದ ಇತಿಹಾಸವಿದೆ. ವಸಂತ ಅಸ್ನೋಟಿಕರ್‌ ಬಂಗಾರಪ್ಪ ಕಟ್ಟಿದ ಕೆಸಿಪಿಯಲ್ಲಿ ರಾಜಕೀಯ ಆರಂಭಿಸಿ ಅಅನಂತರ‌ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಗಂಗಾಧರ ಭಟ್‌ 2004ರಲ್ಲಿ ಸ್ಪರ್ಧಿಸಿ ಮೊಟ್ಟ ಮೊದಲಿಗೆ ಕಮಲ ಅರಳಿಸಿದರು. ಅನಂತರ‌ ವಸಂತ ಅಸ್ನೋಟಿಕರ್‌ ಪುತ್ರ ಆನಂದ ಅಸ್ನೋಟಿಕರ್‌ ಕಾಂಗ್ರೆಸ್‌ಗೆ ಕಾರವಾರವನ್ನು ಮರಳಿ ಗೆದ್ದು ಕೊಟ್ಟರು. ಆದಾಗಲೇ ಕ್ಷೇತ್ರ ಪುನರ್‌ ವಿಂಗಡಣೆಯಾಗಿ ಜೋಯಿಡಾ ಕಾರವಾರದಿಂದ ಬೇರ್ಪಟ್ಟು ಹಳಿಯಾಳಕ್ಕೆ ಸೇರಿತ್ತು. ಅಂಕೋಲಾ ತಾಲೂಕು ಕಾರವಾರ ಕ್ಷೇತ್ರದಲ್ಲಿ ವಿಲೀನವಾಗಿತ್ತು. ಯಲ್ಲಾಪುರ ಮುಂಡಗೋಡ ಸೇರಿ ಯಲ್ಲಾಪುರ ಕ್ಷೇತ್ರ ಉದಯವಾಗಿತ್ತು. ಕ್ಷೇತ್ರ ಪುನರ್‌ ವಿಂಗಡಣೆ ಅನಂತರ‌ ನಡೆದ 2008ರ ಮೊದಲ ಚುನಾವಣೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರವು ಕಾಂಗ್ರೆಸ್‌ ತೆಕ್ಕೆಗೆ ಜಾರಿತು. ಆದರೆ ಪûಾಂತರ ಮಾಡಿದ ಆನಂದ ಅಸ್ನೋಟಿಕರ್‌ 2008ರ ಡಿಸೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ಕಾರವಾರ ಕ್ಷೇತ್ರದಲ್ಲಿ ಜೀವ ತುಂಬಿದರು. ಆನಂದ ಅಸ್ನೋಟಿಕರ್‌ ಬಿಜೆಪಿ ಶಾಸಕರಾಗಿ ಗೆದ್ದು ಮಂತ್ರಿಯೂ ಆದರು. ಯಡಿಯೂರಪ್ಪ ವಿರುದ್ಧ ಬಂಡೆದ್ದು, ಶೆಟ್ಟರ್‌ ಸಚಿವ ಸಂಪುಟ ಸೇರಿದರು. ಕೊನೆಗೆ ಬಿಜೆಪಿಯಿಂದ ನಿರಾಕರಿಸಲ್ಪಟ್ಟಿದ್ದು, ಜೆಡಿಎಸ್‌ ಸೇರಿ, ಅನಂತರ‌ ಜೆಡಿಎಸ್‌ ಬಿಟ್ಟು ಚಂಚಲತೆಯ ರಾಜಕೀಯ ನಿಲುವು ಪ್ರದರ್ಶಿಸಿದ್ದು ಇತಿಹಾಸ. 2013ರಲ್ಲಿ ಕಾರವಾರ ಸ್ವತಂತ್ರ ಅಭ್ಯರ್ಥಿ ಅದಿರು ಉದ್ಯಮಿ ಸತೀಶ್‌ ಸೈಲ್‌ಗೆ ಮಣೆ ಹಾಕಿತು. ಬಳಿಕ ಸೈಲ್‌ ಕಾಂಗ್ರೆಸ್‌ ಸೇರಿದರು. 2018ರಲ್ಲಿ ರೂಪಾಲಿ ನಾಯ್ಕ ಮತ್ತೆ ಬಿಜೆಪಿಗೆ ಜಯ ತಂದುಕೊಟ್ಟರು.

Advertisement

ಕುಮಟಾ
1957ರಿಂದ 2018ರ ನಡುವೆ ನಡೆದ 14 ಸಾರ್ವತ್ರಿಕ ಚುನಾವಣೆಗಳನ್ನು ಅವಲೋಕಿಸಿದಾಗ ಇಲ್ಲಿ 8 ಸಲ ಕಾಂಗ್ರೆಸ್‌ ಗೆದ್ದಿದೆ. ಉಳಿದಂತೆ ಒಮ್ಮೆ ಸ್ವತಂತ್ರ ಅಭ್ಯರ್ಥಿ, ಒಮ್ಮೆ ಜನತಾಪಾರ್ಟಿ, ಒಮ್ಮೆ ಜೆಡಿಎಸ್‌, ಮೂರು ಸಲ ಬಿಜೆಪಿ ಗೆಲುವು ಸಾಧಿಸಿದೆ. ಕುಮಟಾದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳೆ ಆರಿಸಿ ಬಂದಿರುವುದು ವಿಶೇಷ. ವಸಂತಲತಾ ಮಿರರ್ಜಾನಕರ್‌ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. 1962ರಲ್ಲಿ ಸಹ ವಸಂತಲತಾ ಮತ್ತೆ ಗೆದ್ದಿದ್ದರು. 1967ರಲ್ಲಿ ಸ್ವತಂತ್ರ ಅಭ್ಯರ್ಥಿ ಹೆಗಡೆ ರಾಮಚಂದ್ರ ಮಂಜುನಾಥ ಅವರು ವಸಂತಲತಾ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. 1972 ಮತ್ತು 1978ರಲ್ಲಿ ಸೀತಾರಾಮ ವಾಸುದೇವ ನಾಯ್ಕ ಸತತ ಎರಡು ಸಲ ಕಾಂಗ್ರೆಸ್‌ನಿಂದ ಗೆದ್ದಿದ್ದರು. 1983ರಲ್ಲಿ ಡಾ|ಎಂ.ಪಿ. ಕರ್ಕಿ ಎಂಬ ಪ್ರಸಿದ್ಧ ವೈದ್ಯ ಬಿಜೆಪಿಗೆ ಗೆಲುವು ತಂದು ಕೊಟ್ಟರು. 1985ರಲ್ಲಿ ಎನ್‌.ಎಚ್‌.ಗೌಡ ಜನತಾ ಪಾರ್ಟಿಯಿಂದ, 1989ರಲ್ಲಿ ಕೃಷ್ಣಾ ಹನುಮಾ ಗೌಡ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು. 1994ರಲ್ಲಿ ಕರ್ಕಿ ಬಿಜೆಪಿಯಿಂದ ಪುನರಾಯ್ಕೆಯಾಗಿದ್ದರು. 1999,2004ರಲ್ಲಿ ಮೋಹನ್‌ ಶೆಟ್ಟಿ ಸತತ ಎರಡು ಸಲ ಕಾಂಗ್ರೆಸ್‌ಗೆ ಜೀವ ತುಂಬಿದ್ದರು. 2008ರಲ್ಲಿ ದಿನಕರ ಶೆಟ್ಟಿ ಜೆಡಿಎಸ್‌ನಿಂದ ಗೆದ್ದರೆ, 2013ರಲ್ಲಿ ಶಾರದಾ ಶೆಟ್ಟಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 2018ರಲ್ಲಿ ದಿನಕರ ಶೆಟ್ಟಿ ಬಿಜೆಪಿ ಸೇರಿ ಪುನರಾಯ್ಕೆಯಾಗಿದ್ದಾರೆ.

ಭಟ್ಕಳ
ಭಟ್ಕಳ ಕ್ಷೇತ್ರ ಆರಂಭದಲ್ಲಿ ಮುಸ್ಲಿಂ ಅಭ್ಯರ್ಥಿ ಶಂಶುದ್ದೀನ್‌ ಹುಸೇನ್‌ ಜುಕಾಕೋ ಎಂಬ ಸೆಕ್ಯುಲರ್‌ ಹಾಗೂ ಶಿಕ್ಷಣ ಪ್ರೇಮಿಯ ಕೈಯಲ್ಲಿತ್ತು. ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಪ್ರತಿನಿಧಿಸಿದ್ದ ಅವರು 1957, 1962ರಲ್ಲಿ ವಿಧಾನಸಭೆ ಪ್ರವೇಶಿಸಿದ್ದರು. ಅನಂತರ‌ ವಕೀಲ ಜಾಲಿಸತಿY ಪ್ರಜಾ ಸೋಷಲಿಸ್ಟ್‌ ಪಾರ್ಟಿಗೆ ಜಯ ತಂದು ಕೊಟ್ಟರು. ಅನಂತರ‌ ಎಸ್‌.ಎಂ.ಯಾಹ್ಯಾ ಎರಡು ಸಲ ಕಾಂಗ್ರೆಸ್‌ಗೆ ಗೆಲುವು ತಂದು ಕೊಟ್ಟ ಇತಿಹಾಸವಿದೆ. 1972, 1978ರಲ್ಲಿ ಕಾಂಗ್ರೆಸ್‌ ಭದ್ರ ಕೋಟೆ. ಅನಂತರ‌ 1983, 1985,1989ರಲ್ಲಿ ಆರ್‌.ಎನ್‌. ನಾಯ್ಕ ಎಂಬ ವಕೀಲರು ಜನತಾ ಪಾರ್ಟಿಯಿಂದ ಒಮ್ಮೆ, ಕಾಂಗ್ರೆಸ್‌ನಿಂದ ಎರಡು ಸಲ ಗೆದ್ದಿದ್ದರು. 1994 ಭಟ್ಕಳದ ಪಾಲಿಗೆ ಟರ್ನಿಂಗ್‌ ಪಾಯಿಂಟ್‌. ಪ್ರಸಿದ್ಧ ವೈದ್ಯ ಯು.ಚಿತ್ತರಂಜನ್‌ ಬಿಜೆಪಿಯಿಂದ ಆರಿಸಿ ಬಂದರು. 1999ರಲ್ಲಿ ವಕೀಲ ಜೆ.ಡಿ. ನಾಯ್ಕ ಶಾಸಕರಾದರು. 2004ರಲ್ಲಿ ಶಿವಾನಂದ ನಾಯ್ಕ ಬಿಜೆಪಿ ಶಾಸಕ ರಾದರು. 2013ರಲ್ಲಿ ಮಂಕಾಳು ವೈದ್ಯ ಸ್ವತಂತ್ರರಾಗಿ ಗೆದ್ದು ಬಂದು ಅನಂತರ‌ ಕಾಂಗ್ರೆ ಸ್‌ ಸೇರಿದರು. 2018ರಲ್ಲಿ ಮತ್ತೆ ಬಿಜೆಪಿಯ ಸುನಿಲ್‌ ನಾಯ್ಕ ಆರಿಸಿ ಬಂದರು.

ಹಳಿಯಾಳ
ಹಳಿಯಾಳ ಕ್ಷೇತ್ರ ಆರಂಭದಲ್ಲಿ 2008ಕ್ಕೂ ಮುಂಚೆ ಮುಂಡಗೋಡ ತಾಲೂಕನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿತ್ತು. ಆಗ ಆ ಕ್ಷೇತ್ರ ಸಚಿವ ಆರ್‌.ವಿ. ದೇಶಪಾಂಡೆಯ ಭದ್ರ ನೆಲೆ. ಜನತಾ ಪಕ್ಷ, ಜನತಾ ದಳಗಳ ಗಟ್ಟಿ ನೆಲೆ. ರಾಮ ಕೃಷ್ಣ ಹೆಗಡೆ ಅವರಿಗೂ ರಾಜಕೀಯ ಜನ್ಮ ನೀಡಿದ ಕ್ಷೇತ್ರ. ದೇಶಪಾಂಡೆ ಅವರಿಗೆ 5 ಬಾರಿ ಹಳಿಯಾಳ ಗೆಲುವು ತಂದು ಕೊಟ್ಟಿದೆ. ಅವರು ಸೋತದ್ದೇ ಇಲ್ಲ. 2008ರಲ್ಲಿ ಕ್ಷೇತ್ರ ವಿಂಗಡಣೆಯಾಗಿ ಮುಂಡಗೋಡ ಕೈತಪ್ಪಿ, ಜೋಯಿಡಾ ಸೇರ್ಪಡೆಯಾದ ವರ್ಷ ದೇಶಪಾಂಡೆ, ಸುನಿಲ್‌ ಹೆಗಡೆ ವಿರುದ್ಧ ಸ್ಪರ್ಧಿಸಿ ಸೋತರು. 1999, 2004ರಲ್ಲಿ ದೇಶಪಾಂಡೆ ಹಳಿಯಾಳದಿಂದಲೇ ಕಾಂಗ್ರೆಸ್‌ ಶಾಸಕರಾಗಿದ್ದರು. 2013ರಲ್ಲಿ ಮತ್ತೆ ಹಳಿಯಾಳ ಕ್ಷೇತ್ರದಿಂದ ಕಾಂಗ್ರೆಸ್‌ ಹುರಿಯಾಳಾಗಿ ನಿಂತು ಗೆದ್ದು ಬಂದಿದ್ದರು. 2018ರಲ್ಲಿ ಗೆಲುವನ್ನು ಪುನರಾವರ್ತಿಸಿಕೊಂಡರು. ಇದು ಅವರ 8ನೇ ಗೆಲುವಾಗಿತ್ತು. ಈಗ ಮತ್ತೆ ವಿಧಾನಸಭೆ ಪ್ರವೇಶಿಸಲು ಹಳಿಯಾಳ ರಂಗ ಸಜ್ಜಿಕೆ ಸಿದ್ಧಗೊಳಿಸಿಕೊಂಡಿದ್ದಾರೆ. ಬಿಜೆಪಿ ಇಲ್ಲಿ ಇನ್ನೂ ಅರಳಿಲ್ಲ.

ಶಿರಸಿ
ಶಿರಸಿ ಕ್ಷೇತ್ರ ಆರಂಭದಲ್ಲಿ ರಾಮಕೃಷ್ಣ ಹೆಗಡೆ, ಈಗ ವಿಶ್ವೇಶ್ವರ ಹೆಗಡೆ ಕಾಗೇರಿ (ಹಾಲಿ ವಿಧಾನಸಭೆ ಸ್ಪೀಕರ್‌) ಎಂಬಂತಾಗಿದೆ. ಶಿರಸಿ-ಸಿದ್ದಾಪುರ ದಲ್ಲಿ ಆರಂಭದಲ್ಲಿ ಕಾಂಗ್ರೆಸ್‌, ಈಗ ಸತತ ಮೂರು ಚುನಾವಣೆಯಲ್ಲಿ ಬಿಜೆಪಿ ಯನ್ನು ಅಪ್ಪಿಕೊಂಡ ಕ್ಷೇತ್ರವಿದು. ಕ್ಷೇತ್ರ ವಿಂಗಡಣೆಗೆ ಮುನ್ನ ಅಂಕೋಲಾ ದಿಂದ ಸತತ ಮೂರು ಸಲ ಗೆದ್ದು ಬಂದಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿ ಕ್ಷೇತ್ರಕ್ಕೆ ಬಂದಾಗಿನಿಂದ ಸತತ ಮೂರು ಸಲ ಗೆದ್ದಿದ್ದಾರೆ. ಶಿರಸಿ ಮೀಸಲು ಕ್ಷೇತ್ರವಾಗಿದ್ದ ಸಮಯದ ಸಹಿತ ಮತ್ತು ಆರಂಭದ ಎರಡು ಚುನಾವಣೆಯಲ್ಲಿ 1972ರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಆರಂಭದಲ್ಲಿ ರಾಮಕೃಷ್ಣ ಹೆಗಡೆ ಎರಡು ಸಲ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಎಂ.ಎಚ್‌. ಜಯಪ್ರಕಾಶ್‌ ನಾರಾಯಣ 1967ರಲ್ಲಿ ಪಿಎಸ್‌ಪಿಯಿಂದ, 1972ನಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು. 1978ನಲ್ಲಿ ಬೋರ್ಕರ್‌ ಉಮಾಕಾಂತ ಬುದ್ಧು ಜನತಾ ಪಾರ್ಟಿಯಿಂದ ಗೆದ್ದಿದ್ದರು. 1983ರಿಂದ ಸತತ ಮೂರು ಸಲ ಶಾಸಕರಾಗಿದ್ದ ಕಾನಡೆ ಗೋಪಾಲ ಮುಕುಂದ ಆರಂಭದಲ್ಲಿ ಜನತಾ ಪಾರ್ಟಿ, ಅನಂತರ‌ ಎರಡು ಸಲ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಪ್ರೇಮಾನಂದ ಜಯವಂತ ಅವರು 1991ರಲ್ಲಿ ಜನತಾ ದಳದಿಂದ ಮೊದಲ ಬಾರಿಗೆ ಶಾಸಕರಾಗಿ, ಸಚಿವರೂ ಆಗಿದ್ದರು. 1999ರಲ್ಲಿ ಬಿಜೆಪಿ ವಿವೇಕಾನಂದ ವೈದ್ಯರನ್ನು ನಿಲ್ಲಿಸಿ ಮೊದಲ ಸಲ ಕಮಲವನ್ನು ಅರಳಿಸಿತು. 2004ರಲ್ಲಿ ಗೆಲುವು ಪುನರಾವರ್ತನೆಯಾಯಿತು. 2008ಕ್ಕೆ ಅಂಕೋಲಾ ಕಾರವಾರಕ್ಕೆ ಸೇರಿತು. ಶಿರಸಿ ಮೀಸಲು ಕ್ಷೇತ್ರ ಇದ್ದದ್ದು ಪುನಃ ಸಾಮಾನ್ಯ ಕ್ಷೇತ್ರವಾಯಿತು. ಮೂಲ ನೆಲೆಗೆ ಬಂದ ವಿಶ್ವೇಶ್ವರ ಹೆಗಡೆ ಕಾಗೇರಿ
ಸತತ ಮೂರು ಸಲ ಶಿರಸಿಯಿಂದ ಗೆದ್ದು ಬರುತ್ತಿದ್ದಾರೆ. 2008, 2013, 2018ರಲ್ಲಿ ಕಾಗೇರಿ ಬಿಜೆಪಿ ಶಾಸಕರಾಗಿ, ಮಂತ್ರಿಯಾಗಿ, ಈಗ ಸ್ಪೀಕರ್‌ ಆಗಿದ್ದಾರೆ.

ಯಲ್ಲಾಪುರ
ಕ್ಷೇತ್ರ ಪುನರ್‌ ವಿಂಗಡಣೆ ಅನಂತರ‌ ಯಲ್ಲಾಪುರ ಇಬ್ಬರು ಶಾಸಕರನ್ನು ಕಂಡಿದೆ. ಮೊದಲು ಈ ಕ್ಷೇತ್ರ ಅಂಕೋಲಾ ಕ್ಷೇತ್ರದಲ್ಲಿ ಸೇರಿತ್ತು. 2008ರಲ್ಲಿ ಸ್ವತಂತ್ರ ಕ್ಷೇತ್ರವಾಗಿದ್ದು, ಮುಂಡಗೋಡ ತಾಲೂಕನ್ನು ಒಳಗೊಂಡಿದೆ. ಕ್ಷೇತ್ರ ವಿಂಗಡನೆ ಅನಂತರ‌ ಇಲ್ಲಿ ಮೊದಲ ಶಾಸಕ ಬಿಜೆಪಿಯವರು. ವಿ.ಎಸ್‌.ಪಾಟೀಲ್‌ 2008ರಲ್ಲಿ ಶಿವರಾಮ ಹೆಬ್ಟಾರ ಅವರನ್ನು ಸೋಲಿಸಿ ಆರಿಸಿ ಬಂದರು. 2013, 2018ರಲ್ಲಿ ಶಿವರಾಮ ಹೆಬ್ಟಾರ ಕಾಂಗ್ರೆಸ್‌ನಿಂದ ಆರಿಸಿ ಬಂದರು. 2020ರಲ್ಲಿ ಪûಾಂತರ ಮಾಡಿ ಬಿಜೆಪಿ ಸೇರ್ಪಡೆಯಾದರು. ಅನಂತರ‌ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆರಿಸಿ ಬಂದು ಸಚಿವರಾಗಿದ್ದಾರೆ. ಬಿಜೆಪಿ ತನ್ನನ್ನು ಕಡೆಗಣಿಸುತ್ತಿದೆ ಎಂದು ದೂರಿದ ವಿ.ಎಸ್‌.ಪಾಟೀಲ್‌ ಬಿಜೆಪಿಗೆ ವಿದಾಯ ಹೇಳಿ ಕಾಂಗ್ರೆಸ್‌ ಸೇರಿದ್ದಾರೆ.

– ನಾಗರಾಜ್‌ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next