Advertisement

30ರಂದು ಜಿಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

07:31 AM Jun 21, 2020 | Suhan S |

ವಿಜಯಪುರ: ಶಿವಯೋಗೆಪ್ಪ ನೇದಲಗಿ ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ವಿಜಯಪುರ ಜಿಲ್ಲೆಯ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಜೂ. 30ರಂದು ಚುನಾವಣೆ ದಿನಾಂಕ ನಿಗದಿಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.

Advertisement

ಕಾಂಗ್ರೆಸ್‌ ಆಂತರಿಕ ಒಪ್ಪಂದದಂತೆ ಅಧಿಕಾರ ಹಂಚಿಕೆ ಸೂತ್ರಕ್ಕಾಗಿ ಶಿವಯೋಗೆಪ್ಪ ನೇದಲಗಿ ಮೇ ಕೊನೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಕುರಿತು ಚುನಾವಣಾಧಿಕಾರಿಗಳಾದ ಬೆಳಗಾವಿ ಪ್ರಾದೇಶಿಕ ಆಯುಕ್ತರು ಜಿಪಂ ಸಿಇಒ ಅವರಿಗೆ ಚುನಾವಣೆಗೆ ಅಗತ್ಯ ಇರುವ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

42 ಸದಸ್ಯ ಬಲದ ವಿಜಯಪುರ ಜಿಪಂನಲ್ಲಿ ಬಿಜೆಪಿ 20 ಸದಸ್ಯರನ್ನು ಹೊಂದಿದ್ದು ದೊಡ್ಡ ಪಕ್ಷವಾಗಿದ್ದರೂ 18 ಸದಸ್ಯರನ್ನು ಮಾತ್ರ ಹೊಂದಿರುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಈವರೆಗೆ ಅಧಿಕಾರ ನಡೆಸಿದೆ. ಕಾಂಗ್ರೆಸ್‌ ಅಧಿಕಾರ ಸೂತ್ರ ಹಿಡಿಯುವಲ್ಲಿ ಜೆಡಿಎಸ್‌ ಪಕ್ಷದ 3 ಸದಸ್ಯರಲ್ಲಿ ಇಬ್ಬರು ಹಾಗೂ ಓರ್ವ ಪಕ್ಷೇತರ ಸದಸ್ಯನ ಬೆಂಬಲ ಕಾರಣವಾಗಿದೆ. ಕಾಂಗ್ರೆಸ್‌ ಸದಸ್ಯರಾಗಿರುವ ನೀಲಮ್ಮ ಮೇಟಿ ಹಾಗೂ ಶಿವಯೋಗೆಪ್ಪ ನೇದಲಗಿ ಅವರು ಈ ಹಿಂದಿನ 4 ವರ್ಷಗಳ ಅವ ಧಿಯಲ್ಲಿ ಅಧ್ಯಕ್ಷರಾಗಿದ್ದರು. ಇದೀಗ ಕಾಂಗ್ರೆಸ್‌ ಅಧಿಕಾರ ಹಂಚಿಕೆ ಸೂತ್ರದ ಆಧಾರದಲ್ಲಿ ಸುಜಾತಾ ಕಳ್ಳಿಮನಿ ಅವರಿಗೆ ಕಾಂಗ್ರೆಸ್‌ಹೈಕಮಾಂಡ್‌ ಕೊಟ್ಟ ಮಾತಿನಂತೆ ನೇದಲಗಿ ಅವರಿಂದ ರಾಜೀನಾಮೆ ಕೊಡಿಸುವಲ್ಲಿ ಯಶಸ್ವಿಯಾಗಿದೆ.

ಹೀಗಾಗಿ ಇದೀಗ ಜಿಲ್ಲೆಯಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮ್ಯಾಜಿಕ್‌ ಸಂಖ್ಯೆ 22 ಸದಸ್ಯರು ಬೇಕು. ಜಿಪಂ ಅಧಿಕಾರದ ಗದ್ದುಗೆ ಮರಳಿ ಹಿಡಿಯಲು 18 ಸದಸ್ಯರ ಕಾಂಗ್ರೆಸ್‌ ಪಕ್ಷಕ್ಕೆ ಇಬ್ಬರು ಜೆಡಿಎಸ್‌ ಸದಸ್ಯರು ಹಾಗೂ ಓರ್ವ ಪಕ್ಷೇತರ ಬೆಂಬಲ ನೀಡಿದರೂ ಮ್ಯಾಜಿಕ್‌ ಸಂಖ್ಯೆಗೆ ಒಬ್ಬ ಸದಸ್ಯ ಕೊರತೆ ಎದುರಾಗಲಿದೆ. ಹೀಗಾಗಿ ಬಿಜೆಪಿ ಸಂಪರ್ಕದಲ್ಲಿರುವ ಜೆಡಿಎಸ್‌ ಇನ್ನೋರ್ವ ಸದಸ್ಯನನ್ನು ಮನವೊಲಿಸುವ ಕಾರ್ಯಕ್ಕೆ ಮುಂದಾಗಿದೆ ಎನ್ನಲಾಗಿದೆ.

ಪರಿಣಾಮ ಹೆಚ್ಚಿನ ಸದಸ್ಯರಿದ್ದರೂ ಅಧಿಕಾರ ಹಿಡಿಯವಲ್ಲಿ ಸಮರ್ಥ ನಾಯಕತ್ವದ ಕೊರತೆ ಎದುರಿಸುತ್ತಿರುವ ಬಿಜೆಪಿಯಲ್ಲಿನ ಒಡಕಿನ ಲಾಭ ಪಡೆಯಲು ಕಾಂಗ್ರೆಸ್‌ ಹೊಂಚು ಹಾಕುತ್ತಿದೆ. ಮತ್ತೂಂದೆಡೆ ಈಗಾಗಲೇ ಪ್ರಭುಗೌಡ ದೇಸಾಯಿ ಅವರ ಮೂಲಕ ಜಿಪಂ ಉಪಾಧ್ಯಕ್ಷ ಸ್ಥಾನದಲ್ಲಿ ಕುಳಿತಿರುವ ಬಿಜೆಪಿ, ಪ್ರಸಕ್ತ ಅವಧಿಯ ಜಿಪಂ ಆಡಳಿತದ ಕೊನೆಯಲ್ಲಿ ಪೂರ್ಣಾಧಿಕಾರ ಪಡೆಯುವ ಅವಕಾಶ ಪಡೆದಿದೆ. ಚುನಾಯಿತ ಸದಸ್ಯರ ಅಧಿಕಾರ  ಕೆಲವು ತಿಂಗಳು ಮಾತ್ರ ಬಾಕಿ ಇರುವಾಗ ಅಧಿಕಾರ ಪಡೆಯುವ ಕುರಿತು ಬಿಜೆಪಿ ಪಡಸಾಲೆಯಲ್ಲಿ ಗಂಭೀರ ಚರ್ಚೆ ನಡೆದಿದೆ.

Advertisement

ಡಿಸಿಎಂ ಲಕ್ಷ್ಮಣ ಸವದಿ ಅವರ ಹತ್ತಿರದ ಸಂಬಂಧಿ ನವೀನ ಅರಕೇರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಕುಲಬಾಂಧವ ಸಾಬು ಮಾಶ್ಯಾಳ ಮಧ್ಯೆ ಪೈಪೋಟಿ ನಡೆದಿದೆ. ಈ ಪೈಪೋಟಿ ಪಕ್ಷದಲ್ಲಿ ಬೇಗುದಿ ಮೂಡಿಸಿದರೆ, ಸುಜಾತಾ ಕಳ್ಳಿಮನಿ ಮೂಲಕ ಮತ್ತೆ ಕಾಂಗ್ರೆಸ್‌ ಜಿಪಂ ಗದ್ದುಗೆ ಏರುವುದು ಖಚಿತ.

ತೆರವಾಗಿರುವ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಜೂ. 30 ರಂದು ಚುನಾವಣೆ ನಡೆಸಲು ಸರ್ಕಾರ ದಿನಾಂಕ ನಿಗದಿ ಮಾಡಿದೆ. ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಚುನಾವಣೆಗೆ ಅಗತ್ಯ ಇರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. -ಗೋವಿಂದರಡ್ಡಿ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next