ಸುವರ್ಣ ವಿಧಾನಸೌಧ: ವಿಧಾನಪರಿಷತ್ ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಎಂ.ಕೆ. ಪ್ರಾಣೇಶ್ ಹಾಗೂ ಕಾಂಗ್ರೆಸ್‌ನಿಂದ ಅರವಿಂದ ಅರಳಿ ನಾಮಪತ್ರ ಸಲ್ಲಿಸಿದ್ದಾರೆ.
ಸಭಾಪತಿ ಚುನಾವಣೆ ನಂತರ ಇದೀಗ ಉಪಸಭಾಪತಿ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಗುರುವಾರ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀ ಅವರಿಗೆ ಉಭಯ ಪಕ್ಷಗಳ ಸದಸ್ಯರು ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಚುನಾವಣೆಯಿಂದ ದೂರ ಉಳಿದಿದ್ದು, ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಉಪಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಎಂ.ಕೆ. ಪ್ರಾಣೇಶ್ ಅವರಿಗೆ ಮೇಲ್ಮನೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸದಸ್ಯ ನಾರಾಯಣ ಸ್ವಾಮಿ ಸೂಚಕರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅರವಿಂದ ಅರಳಿ ಅವರಿಗೆ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹಾಗೂ ಸದಸ್ಯ ಮಂಜುನಾಥ ಭಂಡಾರಿ ಸೂಚಕರಾಗಿದ್ದಾರೆ.
ಪ್ರಾಣೇಶ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ, ಮಾಧುಸ್ವಾಮಿ, ಗೋವಿಂದ ಕಾರಜೋಳ, ಶಾಸಕರಾದ ಸಿ.ಟಿ.ರವಿ, ವೈ.ಎ. ನಾರಾಯಣಸ್ವಾಮಿ, ರವಿಕುಮಾರ್, ಅ. ದೇವೇಗೌಡ, ಎಸ್.ವಿ. ಸಂಕನೂರು ಇತರರಿದ್ದರು. ಕಾಂಗ್ರೆಸ್‌ನ ಅರವಿಂದ ಅರಳಿ ನಾಮಪತ್ರ ಸಲ್ಲಿಕೆ ವೇಳೆ ಬಿ.ಕೆ.ಹರಿಪ್ರಸಾದ್, ಸಲೀಂ ಅಹ್ಮದ್, ಪಿ.ಆರ್.ರಮೇಶ್, ಪ್ರಕಾಶ್ ರಾಥೋಡ್ ಇದ್ದರು.
ಕಾಂಗ್ರೆಸ್‌ಗೆ ಸಂಖ್ಯೆ ಕೊರತೆ: ವಿಧಾನಪರಿಷತ್‌ನಲ್ಲಿ ಬಿಜೆಪಿಯ ಸಂಖ್ಯಾಬಲ ಹೆಚ್ಚಿದೆ. ಆದರೂ, ಶುಕ್ರವಾರ ನಡೆಯಲಿರುವ ಚುನಾವಣೆಗಾಗಿ ಕಾಂಗ್ರೆಸ್‌ನಿಂದ ಅಭ್ಯರ್ಥಿ ಕಣಕ್ಕಿಳಿಸಲಾಗಿದೆ. ಸದಸ್ಯರ ಬಲಾಬಲ ನೋಡಿದರೆ ಬಿಜೆಪಿಯ ಎಂ.ಕೆ. ಪ್ರಾಣೇಶ್ ಗೆಲ್ಲುವುದು ಖಚಿತ. ಜೆಡಿಎಸ್, ಪಕ್ಷೇತರ ಸದಸ್ಯರ ಬೆಂಬಲ ದೊರೆತು, ಬಿಜೆಪಿಯ ಕನಿಷ್ಠ 7 ಸದಸ್ಯರು ಗೈರಾದರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಉಪಸಭಾಪತಿಯಾಗಲಿದ್ದಾರೆ.
ಸಂಖ್ಯಾ ಬಲ:
ಬಿಜೆಪಿ: 39
ಕಾಂಗ್ರೆಸ್: 26
ಜೆಡಿಎಸ್: 8
ಪಕ್ಷೇತರ: 1
ಸಭಾಪತಿ: 1
ಉಪಸಭಾಪತಿ ಸ್ಥಾನಕ್ಕೆ ಎಂ.ಕೆ.ಪ್ರಾಣೇಶ್ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ, ಕಾಂಗ್ರೆಸ್‌ಗೆ ಬಹುಮತ ಇಲ್ಲದಿದ್ದರೂ ನಾಮಪತ್ರ ಸಲ್ಲಿಸಿದ್ದಾರೆ. ಅವರು ನಾಮಪತ್ರ ಹಿಂಪಡೆಯುವ ಮೂಲಕ ಉಪಸಭಾಪತಿ ಸ್ಥಾನಕ್ಕೆ ಅವಿರೋಧ ಆಯ್ಕೆಗೆ ಸಹಕರಿಸಬೇಕು.
-ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ
ಆಡಳಿತ ಪಕ್ಷಕ್ಕೆ ಸಭಾಪತಿ ಹಾಗೂ ವಿರೋಧ ಪಕ್ಷಕ್ಕೆ ಉಪಸಭಾಪತಿ ಎಂಬ ಸಂಪ್ರದಾಯ ಹಿಂದಿನಿಂದಲೂ ನಡೆದುಬಂದಿದೆ. ಆದರೆ, ಬಿಜೆಪಿ ಈಗ ಸಂಪ್ರದಾಯ ಮುರಿದಿದೆ. ಆದ್ದರಿಂದ ಕಾಂಗ್ರೆಸ್‌ನಿಂದ ಅರವಿಂದ ಅರಳಿ ಅವರನ್ನು ಕಣಕ್ಕಿಳಿಸಲಾಗಿದೆ.
-ಬಿ.ಕೆ. ಹರಿಪ್ರಸಾದ್, ಪರಿಷತ್ ವಿಪಕ್ಷ ನಾಯಕ