Advertisement

Sagar; ನಿಗದಿಯಾದ ದಿನಾಂಕದಂದೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಬಿಜೆಪಿ ಆಗ್ರಹ

06:07 PM Aug 23, 2024 | Shreeram Nayak |

ಸಾಗರ: ಸ್ಥಳೀಯ ಸಂಸ್ಥೆಗಳ ಕಾಯ್ದೆಗನುಣವಾಗಿ ನಿಗದಿಯಾದ ದಿನಾಂಕದಂದೇ ಸಾಗರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಒತ್ತಾಯಿಸಿ ಶುಕ್ರವಾರ ಬಿಜೆಪಿ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ಶಾಸಕ ಚನ್ನಬಸಪ್ಪ, ಸ್ಥಳೀಯ ಸಂಸ್ಥೆಗಳ ಮೇಲೆ ಸರ್ಕಾರ ಗದಾಪ್ರಹಾರ ಮಾಡುತ್ತಿದೆ. ಎಲ್ಲೆಲ್ಲಿ ಬಿಜೆಪಿ ಬಹುಮತ ಇದೆಯೋ ಅಂತಹ ಕಡೆಗಳಲ್ಲಿ ಅಧಿಕಾರ ನಡೆಸದಂತೆ ಷಡ್ಯಂತ್ರ ರೂಪಿಸುತ್ತಿದೆ. ಸಾಗರ ನಗರಸಭೆಯಲ್ಲಿ ಬಿಜೆಪಿ ಅತಿಹೆಚ್ಚು ಸದಸ್ಯರನ್ನು ಹೊಂದಿದ್ದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಸ್ಥಳೀಯ ಶಾಸಕರು ಚುನಾವಣೆ ನಡೆಯದಂತೆ ಉದ್ದೇಶಪೂರ್ವಕವಾಗಿ ತಮ್ಮ ಸದಸ್ಯರ ಮೂಲಕ ತಡೆಯಾಜ್ಞೆ ತರಿಸಿ ಸ್ಥಳೀಯ ಸಂಸ್ಥೆ ಆಡಳಿತಕ್ಕೆ ಅಡಚಣೆ ಉಂಟು ಮಾಡಿದ್ದಾರೆ. ಅಧಿಕಾರಿಗಳು ಇದಕ್ಕೆ ಆಸ್ಪದ ಕೊಡದೆ ತಕ್ಷಣ ಚುನಾವಣೆ ನಡೆಸಿ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯಬೇಕು. ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಅಧಿಕಾರಿಗಳು ಕೈಕಟ್ಟಿ ಕುಳಿತುಕೊಳ್ಳಬಾರದು ಎಂದರು.

ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಆ. 26ಕ್ಕೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಾಗ ಕಾಂಗ್ರೆಸ್ ತಡೆಯಾಜ್ಞೆ ತರುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ಧೋರಣೆ ತೆಳೆದಿದೆ.

ಚುನಾವಣಾ ವೇಳಾಪಟ್ಟಿ ಪ್ರಕಟವಾದ ಮೇಲೆ ತಡೆಯಾಜ್ಞೆ ತರಲು ಬರುವುದಿಲ್ಲ. ಇದನ್ನು ಅಧಿಕಾರಿಗಳು ಗಮನ ಹರಿಸಬೇಕು. ಬಿಜೆಪಿ ಅಧಿಕಾರಕ್ಕೆ ಬರಬಾರದು ಎನ್ನುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಈ ಹುನ್ನಾರ ನಡೆಸುತ್ತಿದೆ. ಒಬ್ಬ ಸದಸ್ಯೆ ತಾನು ಅಧ್ಯಕ್ಷನಾಗುತ್ತೇನೆ ಬೆಂಬಲಿಸಿ ಎಂದು ಎಲ್ಲ ಸದಸ್ಯರ ಹತ್ತಿರ ಮನವಿ ಮಾಡಿದ್ದರೆ, ಇನ್ನೊಬ್ಬ ಸದಸ್ಯೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದು ಕಾಂಗ್ರೆಸ್‌ನ ದುರುದ್ದೇಶಪೂರಿತ ನಡೆಗೆ ಸಾಕ್ಷಿಯಾಗಿದೆ.

ಇದ್ಯಾವುದಕ್ಕೂ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಕಿವಿಗೊಡದೆ ನಿಗದಿತ ದಿನಾಂಕಕ್ಕೆ ಚುನಾವಣೆ ನಡೆಸಬೇಕು. ಬಿಜೆಪಿ ಸಹ ಈ ಕುರಿತು ಕಾನೂನು ಹೋರಾಟ ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತದೆ ಎಂದು ಹೇಳಿದರು.

Advertisement

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ, ನಗರಸಭೆ ಸದಸ್ಯರಾದ ಮಧುರಾ ಶಿವಾನಂದ್, ಶ್ರೀನಿವಾಸ್ ಮೇಸ್ತ್ರಿ, ವಿ. ಮಹೇಶ್, ಬಿ.ಎಚ್.ಲಿಂಗರಾಜ್, ಸವಿತಾ ವಾಸು, ಮೈತ್ರಿ ಪಾಟೀಲ್, ಭಾವನಾ ಸಂತೋಷ್, ಪ್ರೇಮ ಕಿರಣ್ ಸಿಂಗ್, ಕುಸುಮ ಸುಬ್ಬಣ್ಣ, ಸರೋಜಮ್ಮ, ತುಕಾರಾಮ್, ಶ್ರೀರಾಮ್, ಸರೋಜ ಭಂಡಾರಿ, ಸುಧಾ ಉದಯ್, ಅರವಿಂದ ರಾಯ್ಕರ್, ಪ್ರಮುಖರಾದ ವಾಸಂತಿ ರಮೇಶ್, ಮಂಜುನಾಥ್ ಪಿ. ಸತೀಶ್ ಕೆ., ನಾಗರಾಜ ವಾಟೆಮಕ್ಕಿ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next