ಹೊಸದಿಲ್ಲಿ : ಫೇಸ್‌ಬುಕ್‌ನಲ್ಲಿ ಮತದಾರರ ಜಾಗೃತಿ ಅಭಿಯಾನವನ್ನು ಕೈಗೊಳ್ಳುವ ಬಗ್ಗೆ ಚುನಾವಣಾ ಆಯೋಗ ತೀವ್ರ ಮರು ಚಿಂತನೆಯನ್ನು ನಡೆಸುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ ಪಿ ರಾವತ್ ಹೇಳಿದ್ದಾರೆ.
ಇಂದು ಶುಕ್ರವಾರವೇ ಈ ಬಗ್ಗೆ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಲಾಗುವುದು ಎಂದು ರಾವತ್ ತಿಳಿಸಿದ್ದಾರೆ.
ಫೇಸ್ ಬುಕ್ ಜತೆಗಿನ ಚುನಾವಣಾ ಆಯೋಗದ ಸಂಬಂಧಗಳ ಕುರಿತಾದ ಹೇಳಿಕೆಯು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗವಾಯಿತು.
ಫೇಸ್ ಬುಕ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಬೃಹತ್ ಪ್ರಮಾಣದಲ್ಲಿ ಕಳವು ಮಾಡಲಾದ ಮತ್ತು ಅವುಗಳನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತ್ತು ಬ್ರೆಕ್ಸಿಟ್ ಜನಮತ ಗಣನೆಯಲ್ಲಿ ಪ್ರಭಾವ ಬೀರಲು ಬ್ರಿಟನ್‌ನ ಕ್ಯಾಂಬ್ರಿಜ್ ಎನಾಲಿಟಿಕಾ ಸಂಸ್ಥೆ ಬಳಸಿಕೊಂಡ ವಿಷಯ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಫೇಸ್ ಬುಕ್ ಜತೆಗಿನ ಸಂಬಂಧದ ಮರು ಚಿಂತನೆ ಅಗತ್ಯವಾಗಿರುವುದಾಗಿ ರಾವತ್ ಹೇಳಿರುವುದಾಗಿ ವರದಿಯಾಗಿದೆ.
ಈ ವರೆಗೂ ಭಾರತದ ಚುನಾವಣಾ ಆಯೋಗ ಮತದಾರರ ಜಾಗೃತಿ ಅಭಿಯಾನಕ್ಕಾಗಿ ಫೇಸ್ ಬುಕ್ ವೇದಿಕೆಯನ್ನು ಬಳಸಿಕೊಂಡು ಬಂದಿತ್ತು. ಯುವ ಮತದಾರರು ಮತ್ತು ಹೆಸರನ್ನು ನೋಂದಾಯಿಸಿಕೊಂಡು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಒತ್ತಾಸೆ ಉಂಟು ಮಾಡುವ ಜಾಗೃತಿ ಅಭಿಯಾನ ಪರಿಣಾಮಕಾರಿಯಾಗಿತ್ತು.