Advertisement

Article: ಚುನಾವಣ ಪ್ರಚಾರವೂ, ವೃತ್ತಿಪರ ತಂಡವೂ…

11:23 PM Nov 09, 2023 | Team Udayavani |

ಚುನಾವಣ ಕಣದಲ್ಲಿ ಸ್ಟ್ರಾಟಜಿ ಎಂಬುದು ಇಂದಿನ ದಿನಗಳಲ್ಲಿ ಅತ್ಯಂತ ಪ್ರಮುಖವಾದದ್ದು. 2014ರಲ್ಲಿ ನರೇಂದ್ರ ಮೋದಿಯವರು ಗೆದ್ದು ಪ್ರಧಾನಿ ಪಟ್ಟಕ್ಕೇರಿದಾಗ, ಪ್ರಶಾಂತ್‌ ಕಿಶೋರ್‌ ಎಂಬ ಚುನಾವಣ ಸ್ಟ್ರಾಟಜಿಸ್ಟ್‌  ಹೆಸರು ಬೆಳಕಿಗೆ ಬಂದಿತ್ತು. ಇದಾದ ಬಳಿಕ ದೇಶಾದ್ಯಂತ ಪ್ರಶಾಂತ್‌ ಕಿಶೋರ್‌ ಅವರ ಹೆಸರು ಪ್ರಸಿದ್ಧಿಗೆ ಬಂದಿತ್ತು. ಇತ್ತೀಚೆಗಷ್ಟೇ ಮುಗಿದ ಕರ್ನಾಟಕ ಚುನಾವಣೆಯಲ್ಲೂ ಸುನಿಲ್‌ ಕನುಗೋಳು ಅವರ ತಂಡ ಕಾಂಗ್ರೆಸ್‌ ಪರವಾಗಿ ಕೆಲಸ ಮಾಡಿ ಗೆಲುವಿಗೆ ಸಹಕರಿಸಿತ್ತು. ಈಗಿನ ಪಂಚರಾಜ್ಯ ಚುನಾವಣೆಯಲ್ಲೂ ಅದೇ ರೀತಿ ವಿವಿಧ ತಂಡಗಳು ಕೆಲಸ ಮಾಡುತ್ತಿವೆ. ಈ ತಂಡಗಳಿಗೆ ಕೋಟಿಗಳ ಲೆಕ್ಕಾಚಾರದಲ್ಲಿ ಹಣವೂ ಸಿಗುತ್ತದೆ…

Advertisement

ಹಿಂದೆ ಹೇಗಿತ್ತು?

ಈ ಹಿಂದೆ ಪ್ರಭಾವಿ ನಾಯಕ, ಆತನ ಜಾತಿ, ಧರ್ಮ, ಈ ನಾಯಕನ ದೊಡ್ಡದೊಂದು ಭಾಷಣ, ಜನ ಸೇರಿಸುವ ಸಣ್ಣಪುಟ್ಟ ಪುಢಾರಿ­ಗಳು, ಹಣ, ಮದ್ಯದ ಆಮಿಷ, ದಬ್ಟಾಳಿಕೆ… ಇವಿಷ್ಟು ಚುನಾವಣ ವಿಚಾರಗಳಾಗಿದ್ದವು. ಅದೆಷ್ಟೋ ಬಾರಿ ಆ ದೊಡ್ಡ ನಾಯಕ ಅಥವಾ ನಾಯಕಿಗಾಗಿಯೇ ಜನ ವೋಟ್‌ ಹಾಕುವ ಸಂಪ್ರದಾಯವೂ ಇತ್ತು. ಅನಂತರದಲ್ಲಿ ಚುನಾ ವಣೆಯಲ್ಲಿ ಮದ್ಯ, ಹಣದ ಪ್ರವೇಶವೂ ಆಗಿ, ಮತದ ಖರೀದಿ ಕೆಲಸವೂ ಆಯಿತು. ಆಗ ಯಾರು ಹೆಚ್ಚು ಹಣ ಚೆಲ್ಲುತ್ತಾರೆಯೋ ಅವರು ಗೆಲ್ಲುತ್ತಾರೆ ಎಂಬ ಮಾತುಗಳಿದ್ದವು. ಇದರ ಜತೆಗೆ ದಬ್ಟಾಳಿಕೆ ಮೇಲೂ ಕೆಲವರು ಮತ ಹಾಕಿಸಿಕೊಳ್ಳುತ್ತಿದ್ದುದು ಉಂಟು.

ಈಗ ಹೇಗಿದೆ?

ಈಗ ಹಣವಿದೆ, ಮದ್ಯವೂ ಇದೆ, ಪ್ರಭಾವಿ ಅಥವಾ ಫೇಸ್‌ವ್ಯಾಲ್ಯೂ ಇರುವಂಥ ನಾಯಕರೂ ಇದ್ದಾರೆ. ಆದರೆ ಇವಿಷ್ಟಕ್ಕೇ ಜನ ಮತ ಹಾಕುತ್ತಾರಾ? ಇಲ್ಲ, ಜನ ಒಂದಷ್ಟು ಬುದ್ಧಿವಂತರಾಗಿದ್ದಾರೆ. ತಾವು ಯಾರಿಗೆ ಮತ ಹಾಕಬೇಕು ಎಂಬುದನ್ನು ಆತ ನಾನಾ ಮಾರ್ಗದಲ್ಲಿ ಆಲೋಚನೆ ಮಾಡಿ, ಕೇಳಿ, ನೋಡಿ ತಿಳಿದು ಮತ ಹಾಕುತ್ತಾರೆ. ಹೀಗಾಗಿ ರಾಜಕಾರಣಿಯೊಬ್ಬ ಸಾರ್ವಜನಿಕವಾಗಿ ಹೇಗೆ ನರೇಟೀವ್‌ ಸೃಷ್ಟಿ ಮಾಡುತ್ತಾನೆ ಎಂಬುದರ ಮೇಲೆ ಆತನಿಗೆ ಮತ ಬೀಳುತ್ತದೆ. ಇದು ಸುಮ್ಮನೆ ಆಗುವ ಮಾತೇ ಅಲ್ಲ. ಇದಕ್ಕಾಗಿಯೇ ಒಂದು ನುರಿತ ತಂಡವಿರುತ್ತದೆ. ಕೆಲವರು ಐಐಟಿ, ಐಐಎಂಗಳಲ್ಲಿ  ಕಲಿತು ಬಂದವ ರಿದ್ದಾರೆ. ಇವರು ಕುಳಿತು ಜಾತಿ, ಧರ್ಮ, ಜನ ಸಂಖ್ಯೆ, ವೆಚ್ಚ ಮಾಡುವ ಹಣ ಎಲ್ಲವನ್ನೂ ಸೇರಿ ಸಿ ಕುಳಿತು ಪ್ಲ್ರಾನ್‌ ಮಾಡುತ್ತಾರೆ. ಈ ಪ್ಲ್ರಾನ್‌ನಂತೆಯೇ ಚುನಾವಣೆಯನ್ನೂ ನಡೆಸುತ್ತಾರೆ.

Advertisement

ಬೇಡಿಕೆ ಹೆಚ್ಚು

ಈಗ ಪಂಚರಾಜ್ಯ ಚುನಾವಣೆ ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈಗ ಚುನಾ ವಣ ಸ್ಟ್ರಾಟಜಿಸ್ಟ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಅಲ್ಲದೆ ಇಂಥ ಕಂಪೆನಿಗಳೂ ಈಗಾ ಗಲೇ ಉದ್ಯೋಗಿಗಳ ನೇಮಕವನ್ನೂ ಆರಂ ಭಿಸಿವೆ. ಈಗಷ್ಟೇ ವಿವಿಗಳಿಂದ ಹೊರಗೆ ಬಂದ ವರಿಗೂ ಅಪಾರ ಬೇಡಿಕೆ ಇದೆ. ನ್ಯೂಸ್‌ಪೇಪರ್‌ಗಳು ಅಥವಾ ಟಿ.ವಿ.ಗಳಲ್ಲಿ ಆರಂಭಿಕವಾಗಿ 25,000ದಿಂದ 30 ಸಾವಿರದ ವರೆಗೆ ವೇತನ ಕೊಟ್ಟರೆ, ಈ ಕಂಪೆನಿಗಳು ಮಾಸಿಕ 40 ಸಾವಿರ ರೂ. ವರೆಗೆ ವೇತನ ಕೊಡುತ್ತಾರೆ.

ದೊಡ್ಡ ಮಟ್ಟದ ಉದ್ಯಮವಾಗಿ ಪರಿವರ್ತನೆ

ಈಗ ಚುನಾವಣ ಪ್ರಚಾರ ತಂತ್ರವೇ ದೊಡ್ಡ ಮಟ್ಟದ ವ್ಯಾಪಾರವಾಗಿ ಬದಲಾಗಿದೆ. ಆರಂಭದಲ್ಲೇ ಹೇಳಿದ ಹಾಗೆ 2014ರಲ್ಲಿ ಪ್ರಶಾಂತ್‌ ಕಿಶೋರ್‌ ಅವರು ಸಿಟಿಜನ್‌ ಫಾರ್‌ ಅಕೌಂಟಬಲ್‌ ಗವರ್ನೆನ್ಸ್‌(ಸಿಎಜಿ) ಎಂಬ ಸಂಸ್ಥೆ ಕಟ್ಟಿ ಈ ಮೂಲಕ ನರೇಂದ್ರ ಮೋದಿಯವರ ಪರವಾಗಿ ಕೆಲಸ ಮಾಡಿದ್ದರು. 2015ರಲ್ಲಿ ಐಪ್ಯಾಕ್‌ ಎಂಬ ಸಂಸ್ಥೆ ಕಟ್ಟಿ ಬೇರೆ ಬೇರೆಯವರ ಪರವಾಗಿ ಕೆಲಸ ಮಾಡಿದರು. ಇದರಲ್ಲಿದ್ದ ಅನೇಕರು ಈಗ ತಮ್ಮದೇ ಆದ ಸ್ವಂತ ಸಂಸ್ಥೆ ಕಟ್ಟಿ ಪ್ರಚಾರ ತಂತ್ರಗಾರಿಕೆಯಲ್ಲಿ ಭಾಗಿಯಾಗಿದ್ದಾರೆ.  ಐಪ್ಯಾಕ್‌ನಲ್ಲಿದ್ದ ರಾಬಿನ್‌ ಶರ್ಮ ವೈಎಸ್‌ಆರ್‌ ಕಾಂಗ್ರೆಸ್‌ ಪಾರ್ಟಿ, ವೈಎಸ್‌ ಜಗನ್‌ಮೋಹನ್‌ ರೆಡ್ಡಿ ಪರವಾಗಿ 2019ರಲ್ಲಿ ಕೆಲಸ ಮಾಡಿದ್ದರು.

ಇವರು ಶೋ ಟೈಮ್‌ ಕನ್ಸಲ್ಟಿಂಗ್‌ ಎಂಬ ಕಂಪೆನಿ ಕಟ್ಟಿಕೊಂಡಿದ್ದಾರೆ. ಈಗ ಇದು ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಪರ ಕೆಲಸ ಮಾಡುತ್ತಿದ್ದರೆ, ಐಪ್ಯಾಕ್‌ ಜಗನ್‌ ಪರ ತಂತ್ರಗಾರಿಕೆ ಮಾಡುತ್ತಿದೆ. ಈ ಹಿಂದೆ ಶಂತನುಸಿಂಗ್‌ ಎಂಬವರು 2015ರಲ್ಲಿ ನಿತೀಶ್‌ ಕುಮಾರ್‌ ಪರ ಕೆಲಸ ಮಾಡಿದ್ದರು. ಈಗ ಶೋಟೈಮ್‌ನಲ್ಲೇ ಕೆಲಸ ಮಾಡುತ್ತಿದ್ದಾರೆ. ಐಪ್ಯಾಕ್‌ನಲ್ಲಿದ್ದ ನರೇಶ್‌ ಅರೋರಾ ಎಂಬವರು ಶೋಬಾಕ್ಸ್‌ಡ್‌ ಎಂಬ ಸಂಸ್ಥೆ ಕಟ್ಟಿ ಈಗ ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಪರ ಕೆಲಸ ಮಾಡುತ್ತಿದ್ದಾರೆ.

ಇವರು ಕೆಲಸ ಮಾಡುವುದು ಹೇಗೆ?

ಮೊದಲಿಗೆ ತಮ್ಮನ್ನು ಸಂಪರ್ಕಿಸಿದ ರಾಜಕೀಯ ವ್ಯಕ್ತಿ ಅಥವಾ ಪಕ್ಷದ ನಾಯಕರ ಜತೆಗೆ ಸಮಾಲೋಚನೆ ನಡೆಸಿ ಅವರ ಗುರಿಯನ್ನು ತಿಳಿದು­ಕೊಳ್ಳುತ್ತಾರೆ. ಅಲ್ಲದೆ ಈ ಗುರಿ ಸಾಧಿಸಲು ಬೇಕಾದ ಸಮಯದ ನಿಗದಿ, ಸಂಪೂರ್ಣ ಯೋಜನೆ, ಮುಂದೆ ಆಗಬಹುದಾದ ಕೆಲಸಗಳ ಬಗ್ಗೆ ನಿಗದಿ ಮಾಡಿಕೊಳ್ಳುತ್ತಾರೆ.

ಎರಡನೇ ಹಂತದಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಕ್ಷೇತ್ರವೊಂದರ ಬೂತ್‌, ವೋಟರ್‌ ಲಿಸ್ಟ್‌ ಪಡೆದು ನಿಗದಿತ ಕ್ಷೇತ್ರದ ಎಲ್ಲ ಮಾಹಿತಿ ಪಡೆದುಕೊಳ್ಳುತ್ತಾರೆ. ತಮ್ಮದೇ ತಂಡದ ಮೂಲಕ ಸಮೀಕ್ಷೆಯನ್ನೂ ನಡೆಸಿ, ಕ್ಷೇತ್ರಗಳಲ್ಲಿ ಇರುವ ಜನಬೆಂಬಲದ ಬಗ್ಗೆ ಅರಿತುಕೊಳ್ಳುತ್ತಾರೆ. ಅಲ್ಲಿನ ಪರ ಮತ್ತು ವಿರೋಧದ ಅಲೆ ಬಗ್ಗೆ ಅರಿತು ಇದಕ್ಕೆ ಬೇಕಾದ ರೀತಿಯಲ್ಲಿ ಪ್ರಚಾರ ತಂತ್ರ ಹೆಣೆಯುತ್ತಾರೆ.

ಮೂರನೇ ಹಂತದಲ್ಲಿ ಪ್ರಚಾರ. ಇಲ್ಲಿ ಯಾವ ರೀತಿ ಜನರನ್ನು ಮುಟ್ಟಬೇಕು? ಅವರನ್ನು ರೀಚ್‌ ಆಗುವುದು ಹೇಗೆ? ಯಾವ ವಯಸ್ಸಿನವರಿಗೆ, ಹೇಗೆ ಮುಟ್ಟಬೇಕು ಎಂಬುದನ್ನು ಪ್ಲ್ರಾನ್‌ ಮಾಡಲಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿನ ಪ್ರಚಾರದಿಂದ ಹಿಡಿದು, ಮನೆ ಮನೆ ಪ್ರಚಾರದ ವರೆಗೆ ಎಲ್ಲ ರೀತಿಯ ಯೋಜನೆ ರೂಪಿಸಲಾಗುತ್ತದೆ.

ನಾಲ್ಕನೇ ಹಂತದಲ್ಲಿ ಸದಸ್ಯತ್ವ ಅಭಿಯಾನ, ಪ್ರಚಾರದಲ್ಲಿ ಬಳಕೆಯಾಗುವ ಭಿತ್ತಿಪತ್ರಗಳು, ಬ್ಯಾನರ್‌ಗಳ ಬಗ್ಗೆ ನಿರ್ಧಾರ­ವಾಗುತ್ತದೆ. ಪ್ರಮುಖ ನಾಯಕರು ಎಲ್ಲಿ, ಯಾವ ರೀತಿ ಭಾಷಣ ಮಾಡಬೇಕು ಎಂಬುದೂ ನಿಗದಿಯಾಗುತ್ತದೆ.

ಚುನಾವಣ ಚತುರರು

          ಐಪ್ಯಾಕ್‌ – ಪ್ರಶಾಂತ್‌ ಕಿಶೋರ್‌ ಆರಂಭಿಸಿದ್ದ ಸಂಸ್ಥೆ. ಈಗ ರಿಶಿ ರಾಜ್‌ ಸಿಂಗ್‌, ಪ್ರತೀಕ್‌ ಜೈನ್‌ ಮತ್ತು ವಿನೇಶ್‌ ಚಂಡಲ್‌ ನೋಡಿಕೊಳ್ಳುತ್ತಿದ್ದಾರೆ.

          ಇನ್‌ಕ್ಲುಸಿವ್‌ ಮೈಂಡ್‌ – ಸುನಿಲ್‌ ಕುನಗೋಳು ಅವರ ಸಂಸ್ಥೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಪರ ಕೆಲಸ ಮಾಡಿದ್ದ ಈ ಸಂಸ್ಥೆ ಈಗ ಪಂಚ ರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪರವೇ ತಂತ್ರಗಾರಿಕೆ ರೂಪಿಸುತ್ತಿದೆ.

          ಎಬಿಎಂ – 2016ರಲ್ಲಿ  ಹಿಮಾಂಶು ಸಿಂಗ್‌ ಎಂಬವರು ಕಟ್ಟಿದ್ದ ಸಂಸ್ಥೆ. ಇದು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ. ನೇಷನ್‌ ವಿತ್‌ ನಮೋ, ಮೈ ಫ‌ಸ್ಟ್‌ ಫಾರ್‌ ಮೋದಿ, ಮೈನ್‌ ಬೀ ಚೌಕಿದಾರ್‌, ಇವರ ಸಂಸ್ಥೆ ಮಾಡಿಕೊಟ್ಟ ಸ್ಲೋಗನ್‌ಗಳು. ಈಗ ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ಚುನಾವಣೆ ನೋಡಿಕೊಳ್ಳುತ್ತಿದೆ.

          ವರಾಹೇ ಅನಾಲಿಟಿಕ್ಸ್‌ – 2022ರಲ್ಲಿ ರಂಗೇಶ್‌ ಶ್ರೀಧರ್‌ ಕಟ್ಟಿದ ಸಂಸ್ಥೆ. ಇದೂ ಬಿಜೆಪಿ ಪರವಾಗಿಯೇ ಕೆಲಸ ಮಾಡುತ್ತಿದೆ. ಸದ್ಯ ಛತ್ತೀಸ್‌ಗಢ ಚುನಾವಣೆ ನೋಡಿಕೊಳ್ಳುತ್ತಿದೆ.

          ಜಾರ್ವಿಸ್‌ ಕನ್ಸಲ್ಟಿಂಗ್‌ -ದಿಗ್ಗಜ್‌ ಅರೋರಾ ಅವರ ಸಂಸ್ಥೆ. ಬಿಜೆಪಿಯ ಆಂತರಿಕ ಸಂಪರ್ಕ ಮತ್ತು ಕಾಲ್‌ ಸೆಂಟರ್‌ ಉಸ್ತುವಾರಿ ಹೊತ್ತಿದೆ.

          ಶೋಟೈಮ್‌ ಕನ್ಸಲ್ಟಿಂಗ್‌ – ರಾಬಿನ್‌ ಶರ್ಮ ಕಟ್ಟಿದ ಈ ಸಂಸ್ಥೆ ಈಗ ಮೇಘಾಲಯದಲ್ಲಿ ಕೋರ್ನಾಡ್‌ ಸಂಗ್ಮಾ  ಪರವಾಗಿ ಕೆಲಸ ಮಾಡುತ್ತಿದೆ.

          ಪಾಲಿಟಿಕ್‌ ಅಡ್ವೈಸರ್ಸ್‌ –  ಹಿಂದೆ ಆಪ್‌ ಪರ ಕೆಲಸ ಮಾಡುತ್ತಿದ್ದ ಈ ಸಂಸ್ಥೆ ಈಗ ಐಎನ್‌ಡಿಐಎನ ಮೂರು ಪಕ್ಷಗಳ ಪರವಾಗಿ ಕೆಲಸ ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next