Advertisement

ಮೇಲ್ಮನೆ: ಗ್ರಾಪಂ ಸದಸ್ಯರೇ ನಿರ್ಣಾಯಕ

11:00 AM Nov 26, 2021 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಅದರಲ್ಲಿಯೂ ಗ್ರಾಪಂ ಸದಸ್ಯರೆ ನಿರ್ಣಾಯಕರಾಗಿದ್ದಾರೆ. ಹಾಗಾಗಿ ಎಲ್ಲ ಪಕ್ಷಗಳ ಚಿತ್ತ ಇದೀಗ ಗ್ರಾಪಂ ಸದಸ್ಯರತ್ತ ನೆಟ್ಟಿದೆ.

Advertisement

ಸ್ಥಳೀಯ ಸಂಸ್ಥೆಗಳ ಮತವೇ ಬಲ: ಜಿಪಂ ಮತ್ತು ತಾಪಂ ಸದಸ್ಯರು ಹಾಗೂ ಕೆಲವು ಗ್ರಾಪಂ ಅವಧಿ ಮುಗಿದಿರುವುದರಿಂದ ಸದಸ್ಯರಿಗಿಲ್ಲ ಮತದಾನದ ಹಕ್ಕು. ಈ ಚುನಾವಣೆಗೆ ಜನರು ಮತದಾರರಲ್ಲ. ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಮಾತ್ರ ಮತದಾನದ ಹಕ್ಕನ್ನು ಹೊಂದಿದ್ದಾರೆ. ಗ್ರಾಪಂ, ಪಪಂ, ಪುರಸಭೆ, ನಗರಸಭೆ, ಸದಸ್ಯರಿಗೆ ಮತದಾನದ ಹಕ್ಕು ಇರಲಿದೆ.

ಈ ಬಾರಿ ಚುನಾವಣೆಯಲ್ಲಿ ಜಿಪಂ, ತಾಪಂ ಸದಸ್ಯರು ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಇವುಗಳ ಅವಧಿ ಮುಗಿದಿರುವ ಕಾರಣ ಈ ಸದಸ್ಯರುಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಚುನಾವಣಾ ಆಯೋಗ ಕೈಬಿಟ್ಟಿದೆ.

ಮೇಲ್ಮನೆ ಅಖಾಡಕ್ಕೆ ಕಲಿಗಳು: ಮರು ಆಯ್ಕೆ ಬಯಸಿರುವ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ರವಿ, ಜೆಡಿಎಸ್‌ನಿಂದ ಎಚ್‌.ಎಂ.ರಮೇಶ್‌ಗೌಡ, ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಸಿ ನಾರಾಯಣಸ್ವಾಮಿ ಅಖಾಡ ಪ್ರವೇಶಿಸಿದ್ದಾರೆ. ಮೂರು ಪಕ್ಷಗಳ ಅಭ್ಯರ್ಥಿಗಳ ಸಭೆಸಮಾರಂಭಗಳ ಮೂಲಕ ಮತದಾರರ ಮನವೊಲಿಸುವ ಕಾರ್ಯ ಪ್ರಾರಂಭಿಸಿದ್ದಾರೆ.

ಪಕ್ಷದ ಚಿಹ್ನೆ ಇಲ್ಲದೆ ಆಯ್ಕೆಯಾದ ಗ್ರಾಪಂ ಸದಸ್ಯರು ಯಾರಿಗೆ ಬೇಕಾದರೂ ಮತದಾನ ಮಾಡಲು ಸ್ವತಂತ್ರರು. ದೊಡ್ಡಪ್ರಮಾಣದಲ್ಲಿರುವ ಗ್ರಾಪಂ ಸದಸ್ಯರಿಗೆ ಡಿಮ್ಯಾಂಡ್‌ ಜೋರಾಗಿದೆ. ಗ್ರಾಪಂ ಸದಸ್ಯರು ಯಾವುದೇ ಪಕ್ಷದಿಂದ ಆಯ್ಕೆಯಾಗಿರುವುದಿಲ್ಲ. ಒಂದೊಂದು ಪಕ್ಷದ ಬೆಂಬಲಿತರಾಗಿರುತ್ತಾರೆ.

Advertisement

ರಾಮನಗರದಲ್ಲೇ ಮತಬಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೋಲಿಕೆ ಮಾಡಿದಲ್ಲಿ ರಾಮನಗರ ಜಿಲ್ಲೆಯಲ್ಲಿ ಅತಿಹೆಚ್ಚಿನ ಮತದಾರರಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 101ಗ್ರಾಪಂಗಳು, ರಾಮನಗರ ಜಿಲ್ಲೆಯಲ್ಲಿ 126 ಗ್ರಾಪಂಗಳು ಹೊಂದಿದೆ.

ನಗರ ಸ್ಥಳೀಯ ಸಂಸ್ಥೆಗಳಿಗೆ ಹೋಲಿಸಿದರೆ ಗ್ರಾಪಂ ಪ್ರತಿನಿಧಿಗಳ ಬಲವೇ ಹೆಚ್ಚಿದ್ದು ನಿರ್ಣಾಯಕವಾಗಿದೆ. ರಾಮನಗರ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಗ್ರಾಪಂಗಳಲ್ಲಿ ಮಾತ್ರ ಬಿಜೆಪಿ ಬೆಂಬಲಿತರು ಗಣನೀಯ ಸಂಖ್ಯೆಯಲ್ಲಿದ್ದಾರೆ.

– ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next