ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಕಾಂಗ್ರೆಸ್ ಹಾಗೂ ಎಎಪಿ ಪಕ್ಷದ ಅಭ್ಯರ್ಥಿಗಳ ಘೋಷಣೆಯಾಗಿ ಪ್ರಚಾರಕ್ಕೆ ಇಳಿದಿದ್ದು, ಇನ್ನೂ ಘೋಷಣೆ ಯಾಗದಿರುವ ಬಿಜೆಪಿ ಅಭ್ಯರ್ಥಿ ಕುರಿತು ಕುತೂಹಲ ಹೆಚ್ಚಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯಾದ ಜಿ. ಕೃಷ್ಣಪ್ಪ ಅವರು ಈಗಾಗಲೇ ಕ್ಷೇತ್ರದಲ್ಲಿ ವಿವಿಧೆಡೆ ಭೇಟಿ ನೀಡಿ ಪಕ್ಷದ ನಾಯಕರ ಜತೆ ಸಭೆ ನಡೆಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಕಾಂಗ್ರೆಸ್ ಚುನಾವಣ ಕಚೇರಿ ಯನ್ನು ಆರಂಭಿಸಲಾಗಿದೆ.
ಆಮ್ ಆದ್ಮಿ ಪಕ್ಷವೂ ಈ ಬಾರಿ ಅಭ್ಯರ್ಥಿ ನಿಯೋಜಿಸಿದೆ. ಮಾಜಿ ಶಾಸಕ ಕುಶಲ ಅವರ ಪುತ್ರಿ ಸುಮನಾ ಬೆಳ್ಳಾರ್ಕರ್ ಅಭ್ಯರ್ಥಿಯಾಗಿದ್ದು, ಈಗಾಗಲೇ ಕ್ಷೇತ್ರ ದಲ್ಲಿ ಮತದಾರರನ್ನು ಭೇಟಿಯಾಗುತ್ತಿದ್ದಾರೆ.
ಹೊಸ ಅಭ್ಯರ್ಥಿ?
ಬಿಜೆಪಿಯು ಈ ಬಾರಿ ಹೊಸ ಅಭ್ಯರ್ಥಿ ಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಆರು ಅವಧಿಯಲ್ಲಿ ಸುಳ್ಯದ ಶಾಸಕರಾದ ಎಸ್. ಅಂಗಾರ ಅವರಿಗೆ ಈ ಬಾರಿ ಅವಕಾಶ ಸಿಗುವ ಕುರಿತು ಸಂಶಯ ಹೊಂದಲಾಗಿದೆ. ಆದರೆ ಅದಿನ್ನೂ ಅಂತಿಮವಾಗಿಲ್ಲ. ಈ ನಡುವೆ ಹೊಸ ಮುಖದ ಅಭ್ಯರ್ಥಿ ಅನ್ವೇಷಣೆ ನಡೆದಿದೆ. ಒಂದು ವೇಳೆ ಹೊಸ ಅಭ್ಯರ್ಥಿ ಬಂದರೆ ಈ ಕ್ಷೇತ್ರದಲ್ಲಿ ಹಲವು ವರ್ಷಗಳ ಬಳಿಕ ಪ್ರಮುಖ ಪಕ್ಷ ವೊಂದು ಹೊಸ ಅಭ್ಯರ್ಥಿಯನ್ನು ನಿಯೋ ಜಿಸಿದಂತಾಗುತ್ತದೆ.
ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಮೊದಲಿಂದಲೂ ಅಸಮಾಧಾನ ವ್ಯಕ್ತ ವಾಗಿದ್ದು, ಮುಂದುವರಿದಿದೆ. ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ನಂದಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿರುವುದನ್ನು ಅವರ ಅಭಿಮಾನಿ ಬಳಗ ಅಸಮಾಧಾನ ಹೊರ ಹಾಕಿದ್ದರು. ಸುಳ್ಯ, ಕಡಬದಲ್ಲಿ ಸಭೆ ನಡೆಸಿ, ಮಂಗಳೂರಿನ ಕಾಂಗ್ರೆಸ್ ಕಚೇರಿ ಬಳಿ ಪ್ರತಿಭಟನೆಯನ್ನು ನಡೆಸಿದ್ದರು. ಅಲ್ಲದೇ ಬೆಂಗಳೂರಿನಲ್ಲಿ ಪ್ರಮುಖ ನಾಯಕರನ್ನು ಭೇಟಿ ಮಾಡಿ ನಂದಕುಮಾರ್ ಅವರಿಗೆ ಟಿಕೆಟ್, ಬಿಫಾರಂ ನೀಡುವಂತೆ ಒತ್ತಾಯಿ ಸಿದ್ದರು. ಅಭಿಮಾನಿಗಳ ಸಭೆಯಲ್ಲಿ ಬಂಡಾಯವಾಗಿ ನಿಲ್ಲುವ ಸೂಚನೆ ಲಭಿಸಿ ದ್ದರೂ ಅಂತಿಮ ನಿರ್ಧಾರವಾಗಿಲ್ಲ.