Advertisement

ಬಿಜೆಪಿಯಲ್ಲೂ ಜಟಿಲ; ಏ. 8ಕ್ಕೆ ಮೊದಲ ಪಟ್ಟಿ

08:44 AM Apr 02, 2023 | Team Udayavani |

ಬೆಂಗಳೂರು: ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಮತ್ತೆ ಜಟಿಲಗೊಳ್ಳುವ ಸಾಧ್ಯತೆ ಇದೆ. ಏ. 7 ರಂದು ದಿಲ್ಲಿಯಲ್ಲಿ ನಡೆಯುವ ಸಂಸದೀಯ ಮಂಡಳಿ ಸಭೆಯ ಬಳಿಕ ಏ. 8ರಂದು ಮೊದಲ ಪಟ್ಟಿ ಪ್ರಕಟಗೊಳ್ಳುವುದು ಬಹುತೇಕ ನಿಗದಿಯಾಗಿದೆ.

Advertisement

ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲೇ ನಡೆಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈಗಾಗಲೇ ಘೋಷಿಸಿದ್ದಾರೆ. ಅದರ ಮಧ್ಯೆಯೇ ಟಿಕೆಟ್‌ ಹಂಚಿಕೆಗೆ ಸಂಬಂಧಪಟ್ಟಂತೆ ಕಾರ್ಯಕರ್ತರ ಅಭಿಪ್ರಾಯಕ್ಕೂ ಮನ್ನಣೆ ನೀಡುವುದಕ್ಕಾಗಿ ನಡೆಸುತ್ತಿರುವ ಜಿಲ್ಲಾ ಕೋರ್‌ ಕಮಿಟಿ ಸಭೆಯ ಸಂಗ್ರಹಣೆ ಮತ್ತೂಂದು ಸುತ್ತಿನ ಗೊಂದಲ ಸೃಷ್ಟಿಸುತ್ತಿದೆ ಎಂಬ ಕೂಗು ಈಗ ಪಕ್ಷದ ಒಳಗಿನಿಂದಲೇ ಕೇಳಿ ಬಂದಿದೆ. ಇದು ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಬಣ ಕಲಹಕ್ಕೆ ಕಾರಣವಾಗಬಹುದೆಂಬ ಕಳವಳ ವ್ಯಕ್ತವಾಗತೊಡಗಿದೆ.

ಟಿಕೆಟ್‌ ಆಯ್ಕೆ ಸಂದರ್ಭ ಈ ಬಾರಿ ತಮ್ಮ ಮಾತೇ ಎಂಬ ನಿರೀಕ್ಷೆಯನ್ನು ಯಡಿಯೂರಪ್ಪ ಹೊಂದಿದ್ದಾರೆ. ಆದರೆ ಬೂತ್‌ ಕಮಿಟಿ, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ ಸೇರಿದಂತೆ ಪಕ್ಷದ ಸಂಘಟನ ವ್ಯವಸ್ಥೆಯಲ್ಲಿ ಇರುವವರಲ್ಲಿ ಸಂತೋಷ್‌ ಬೆಂಬಲಿಗರು ಮೇಲುಗೈ ಸಾಧಿಸಿದ್ದಾರೆ. ಹೀಗಾಗಿ ಕಾರ್ಯಕರ್ತರು ನೀಡಿದ ಅಭಿಪ್ರಾಯದ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆಗೆ ಮುಂದಾದಾಗ ಯಡಿಯೂರಪ್ಪ ಹಾಗೂ ಸಂತೋಷ್‌ ಬಣದ ಮಧ್ಯೆ ಹಿಂದಿನಂತೆ ಸಮಸ್ಯೆ ನಿರ್ಮಾಣವಾಗಬಹುದು ಎಂಬ ಆತಂಕವನ್ನು ಪಕ್ಷದ ಹಿರಿಯರು ವ್ಯಕ್ತಪಡಿಸಿದ್ದಾರೆ. ಆದರೆ ಜಿಲ್ಲಾವಾರು ಕೋರ್‌ ಕಮಿಟಿಯಿಂದ ಅಭಿಪ್ರಾಯ ಸಂಗ್ರಹಣೆಗೂ ಅಮಿತ್‌ ಶಾ ಅವರಿಂದಲೇ ಹಸುರು ನಿಶಾನೆ ಲಭಿಸಿದೆ. ಹೀಗಾಗಿ ಬಿಜೆಪಿ ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಮತ್ತೆ ಗೊಂದಲದ ಗೂಡಾಗಿ ಪರಿಣಮಿಸಿದೆ.

ಸುದೀರ್ಘ‌ ಸಭೆ
ಜಿಲ್ಲಾ ಕೋರ್‌ ಕಮಿಟಿಯಿಂದ ಸಂಗ್ರಹವಾದ ಅಭಿಪ್ರಾಯಗಳ ಸಂಸ್ಕರಣೆ ಕಾರ್ಯ ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಶನಿವಾರ ಪ್ರಾರಂಭಗೊಂಡಿದ್ದು, ರವಿವಾರವೂ ಮುಂದುವರಿಯುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ಸಿ.ಟಿ. ರವಿ, ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯ ಕೋರ್‌ ಕಮಿಟಿ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು. ಹಲವು ಕ್ಷೇತ್ರಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡುವಾಗ ಭಿನ್ನ ಹೆಸರುಗಳು ಪ್ರಕಟಗೊಂಡಿವೆ. ಕೆಲವು ಕ್ಷೇತ್ರದಿಂದ ಬಂದ ಕಾರ್ಯಕರ್ತರು ಸಭೆ ನಡೆಯುತ್ತಿದ್ದ ಸ್ಥಳದ ಹೊರಭಾಗದಲ್ಲಿ ತಮ್ಮ ನಾಯಕರ ಪರವಾಗಿ ಘೋಷಣೆಯನ್ನೂ ಹಾಕಿದ್ದಾರೆ. ರವಿವಾರ ಸಂಜೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಎ. 3, 4, 5ರಂದು ರಾಜ್ಯ ಬಿಜೆಪಿ ಕೋರ್‌ ಕಮಿಟಿ ಮತ್ತೊಮ್ಮೆ ಸಭೆ ಸೇರಿ ಎಲ್ಲ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಒಂದು ಒಮ್ಮತದ ಪಟ್ಟಿ ಸಿದ್ದಪಡಿಸುವ ಸಾಧ್ಯತೆ ಇದೆ. ಎ. 7ರಂದು ದಿಲ್ಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಅದೇ ದಿನ ರಾತ್ರಿ ಅಥವಾ ಎ. 8ರಂದು 80ರಿಂದ 85 ಅಭ್ಯರ್ಥಿಗಳ ಬಿಜೆಪಿಯ ಮೊದಲ ಪಟ್ಟಿ ಪ್ರಕಟಗೊಳ್ಳುತ್ತದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಇದೆಲ್ಲದರ ಜತೆಗೆ ಬೇರೆ ರಾಜ್ಯಗಳ “ಮಾಡೆಲ್‌’ ಭೂತ ಬಿಜೆಪಿಯ ಹಾಲಿ ಶಾಸಕರನ್ನು ಕಾಡುತ್ತಿದ್ದು, ಮೊದಲ ಹಂತದಲ್ಲಿ ಕೆಲವರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ನಿಚ್ಚಳವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next