Advertisement
ಶಿಡ್ಲಘಟ್ಟ ನಗರ ಸೇರಿದಂತೆ ತಾಲೂಕಿನಾದ್ಯಂತ ಪಡಿತರಚೀಟಿ ಹೊಂದಿರುವ ಪ್ರತಿಯೊಂದು ಕುಟುಂಬದ ಮುಖ್ಯಸ್ಥರು ಮತ್ತು ಸದಸ್ಯರು ಸರ್ಕಾರಿ ನ್ಯಾಯಬೆಲೆ ಅಂಗಡಿಯವರ ಲಾಗಿನ್‌ನಲ್ಲಿ ಉಚಿತವಾಗಿ ಇಕೆವೈಸಿ ಅಪ್‌ಡೇಟ್ ಮಾಡಲು ಸರ್ಕಾರ ಅವಕಾಶ ಕಲ್ಪಿಸಿತ್ತು. ಆದರೆ ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ತಂತ್ರಾಂಶದಲ್ಲಿ ಇಕೆವೈಸಿ ಮಾಡುವ ಸಂದರ್ಭದಲ್ಲಿ ಸರ್ವರ್ ಕಿರಿಕಿರಿಯಿಂದ ಗ್ರಾಹಕರು ಮತ್ತು ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ನೆಮ್ಮದಿ ಭಂಗವಾಗಿತ್ತು.
Related Articles
Advertisement
ನಾವು ಬಡವರು ಪಡಿತರಚೀಟಿಯಲ್ಲಿ ಬರುವ ಆಹಾರ ಪದಾರ್ಥಗಳನ್ನು ನಂಬಿ ಜೀವನ ನಡೆಸುತ್ತಿದ್ದೇವೆ. ಡಿಪೋ ಅವರು ಹೇಳಿದಂತೆ ನಾವು ಸೈಬರ್ ಕೇಂದ್ರಗಳಲ್ಲಿ ಇಕೆವೈಸಿ ಮಾಡಿದ್ದೇವೆ. ಆದರೆ ರೇಷನ್ ಇಲ್ಲವೆಂದರೇ ಏನು ಮಾಡಬೇಕು ಎಂದು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.
ರೇಷನ್ ಡಿಪೋ ಮಾಲೀಕರ ಮೇಲೆ ಕ್ರಮಜರುಗಿಸಿ: ಸೈಬರ್ ಕೇಂದ್ರಗಳಲ್ಲಿ ಇಕೆವೈಸಿ ಮಾಡಬಾರದು ಎಂದು ಆಹಾರ ಇಲಾಖೆಯಿಂದ ಸ್ಪಷ್ಟ ಸೂಚನೆ ಇದ್ದರೂ ಸಹ ಗ್ರಾಹಕರನ್ನು ಸೈಬರ್ ಕೇಂದ್ರಗಳಿಗೆ ಕಳುಹಿಸಿದ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಮಾಲೀಕರು ಯಾರು? ಸರ್ವರ್ ಕಿರಿಕಿರಿ ನೆಪವೊಡ್ಡಿ ಇಕೆವೈಸಿಗೆ ಸೈಬರ್ ಕೇಂದ್ರಗಳಿಗೆ ಕಳುಹಿಸಿ ಕರ್ತವ್ಯ ಲೋಪವೆಸಗಿರುವ ನ್ಯಾಯಬೆಲೆ ಅಂಗಡಿ ಮಾಲೀಕರ ಪರವಾನಿಗೆ ರದ್ದುಗೊಳಿಸಬೇಕೆಂದು ಗ್ರಾಹಕರು ಮನವಿ ಮಾಡಿದ್ದಾರೆ.
ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಸಮರ್ಪಕವಾಗಿ ಇಕೆವೈಸಿ ಮಾಡಿದರೇ ಗ್ರಾಹಕರು ರೇಷನ್‌ಭಾಗ್ಯದಿಂದ ವಂಚಿತಗೊಳ್ಳುತ್ತಿರಲಿಲ್ಲ. ಆಹಾರ ಭದ್ರತಾ ಕಾಯ್ದೆಯಡಿ ತನಿಖೆ ನಡೆಸಿ ರೇಷನ್ ಡಿಪೋ ಮಾಲೀಕರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯ ಕೇಳಿಬಂದಿದೆ.
ಉಪನಿರ್ದೇಶಕರಿಗೆ ಮನವಿ ಸಲ್ಲಿಕೆ: ಪಡಿತರಚೀಟಿದಾರರಿಗೆ ತಪ್ಪು ಮಾಹಿತಿ ನೀಡಿ ಸೈಬರ್ ಕೇಂದ್ರಗಳಲ್ಲಿ ಇಕೆವೈಸಿ ಅಪ್‌ಡೇಟ್ ಮಾಡಿರುವ ಪ್ರಕರಣಗಳು ಗಂಭೀರವಾಗಿ ಪರಿಗಣಿಸಿರುವ ತಾಲೂಕು ದಂಡಾಧಿಕಾರಿ ಎಂ.ದಯಾನಂದ್ ಕಾನೂನು ಬಾಹಿರವಾಗಿ ಇಕೆವೈಸಿ ಮಾಡಿರುವ ಸೈಬರ್ ಕೇಂದ್ರಗಳಿಗೆ ನೋಟಿಸ್ ಜಾರಿಗೊಳಿಸಿ ಗ್ರಾಹಕರಿಗೆ ದಿಕ್ಕು ತಪ್ಪಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಮತ್ತೂಂದೆಡೆ ಸೈಬರ್ ಕೇಂದ್ರಗಳಿಂದ ಆಗಿರುವ ಅವಾಂತರದಿಂದ ಪಡಿತರಭಾಗ್ಯದಿಂದ ವಂಚಿತಗೊಂಡಿರುವ ಗ್ರಾಹಕರಿಗೆ ರೇಷನ್ ಭಾಗ್ಯ ಕರುಣಿಸಲು ಅನುವು ಮಾಡಿಕೊಡಬೇಕೆಂದು ತಾಲೂಕು ಆಡಳಿತ ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ವ್ಯವಹಾರ ನಡೆಸಿ ಮನವಿ ಮಾಡಿದ್ದಾರೆ.
ಸೈಬರ್ ಕೇಂದ್ರಗಳಿಗೆ ಮೂಗುದಾರ: ಶಿಡ್ಲಘಟ್ಟ ನಗರ ಸೇರಿದಂತೆ ತಾಲೂಕಿನಾದ್ಯಂತ ಇರುವ ಸೈಬರ್ ಕೇಂದ್ರಗಳಲ್ಲಿ ಇಕೆವೈಸಿ ಪಡೆಯಲು ಸರ್ಕಾರ ನಿಗದಿಪಡಿಸಿರುವ ದರಕ್ಕಿಂತಲೂ ಅಧಿಕವಾಗಿ ವಸೂಲಿ ಮಾಡುತ್ತಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿಗಳು ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪನಿರ್ದೇಶಕರಿಗೆ ದೂರು ಸಲ್ಲಿಸಿರುವುದರಿಂದ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಲು ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.
ತನಿಖೆ ನಡೆಸಿದ ತಂಡ ಗ್ರಾಹಕರನ್ನು ಪ್ರಶ್ನಿಸಿದಾಗ ಕೆಲ ಸೈಬರ್ ಕೇಂದ್ರಗಳಲ್ಲಿ ಕಾನೂನುಬಾಹಿರವಾಗಿ ಇಕೆವೈಸಿ ಮಾಡುವ ಜೊತೆಗೆ ಜಿ.ಎಸ್.ಸಿಗೆ ಬರುವ ಗ್ರಾಹಕರನ್ನು ಮನಸೋ ಇಚ್ಛೆ ಅಂದರೆ 100-200 ರೂ.ವರೆಗೆ ಸುಲಿಗೆ ಮಾಡುತ್ತಿದ್ದಾರೆ ಎಂದು ದೂರುಗಳು ಕೇಳಿಬಂದಿದ್ದರಿಂದ ತಾಲೂಕು ಆಡಳಿತ ಸೈಬರ್ ಕೇಂದ್ರಗಳಿಗೆ ಮೂಗುದಾರ ಹಾಕಲು ನಿರ್ಧರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಮತ್ತು ಹೆಸರು ತೆಗೆಯಲು, ನ್ಯಾಯಬೆಲೆ ಅಂಗಡಿ ವಿಳಾಸ ಬದಲಾವಣೆ, ಹೊಸ ಪಡಿತರಚೀಟಿಗೆ ಅರ್ಜಿ ಸಲ್ಲಿಸಲು ಕೇವಲ 50 ರೂ.ಮಾತ್ರ ಪಡೆಯಬೇಕೆಂದು ಸೈಬರ್ ಕೇಂದ್ರಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಜೊತೆಗೆ ಸೈಬರ್ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ಇಕೆವೈಸಿ ಮಾಡಬಾರದೆಂದು ಖಡಕ್ ಎಚ್ಚರಿಕೆ ನೀಡಲಾಗಿದೆ.ಪಡಿತರವನ್ನು ವಿತರಿಸಲು ಮನವಿ – ತಹಶೀಲ್ದಾರ್: ಶಿಡ್ಲಘಟ್ಟ ನಗರ ಸೇರಿದಂತೆ ತಾಲೂಕಿನಲ್ಲಿ ಸೈಬರ್ ಕೇಂದ್ರಗಳಲ್ಲಿ ಇಕೆವೈಸಿ ಮಾಡಿರುವ ಗ್ರಾಹಕರಿಗೆ ಜನವರಿ ಮಾಹೆಯ ಪಡಿತರ ಸ್ಥಗಿತಗೊಳಿಸಲಾಗಿದೆ. ಮಾನವೀಯತೆಯ ದೃಷ್ಟಿಯಿಂದ ಜನವರಿ ಮಾಹೆಯಲ್ಲಿ ಪಡಿತರಭಾಗ್ಯದಿಂದ ವಂಚಿತಗೊಂಡಿರುವ ಗ್ರಾಹಕರಿಂದ ಆಗಿರುವ ತಾಂತ್ರಿಕ ಲೋಪವನ್ನು ಸರಿಪಡಿಸಿಕೊಂಡು ಎಲ್ಲಾ ಅರ್ಹ ಪಡಿತರಚೀಟಿದಾರರಿಗೆ ಪಡಿತರವನ್ನು ವಿತರಿಸಲು ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಮಾಡಿದ್ದೇವೆ ಎಂದು ಶಿಡ್ಲಘಟ್ಟ ತಾಲೂಕು ತಹಶೀಲ್ದಾರ್ ಎಂ.ದಯಾನಂದ್ ತಿಳಿಸಿದ್ದಾರೆ. ಇಲಾಖೆ ಅಧಿಕಾರಿಗಳು ಗ್ರಾಹಕರ ಹಿತದೃಷ್ಟಿಯಿಂದ ಜನವರಿ ಮಾಹೆಯ ಪಡಿತರವನ್ನು ಬಿಡುಗಡೆ ಮಾಡುವ ವಿಶ್ವಾಸ ತಮಗಿದೆ. ಕಾನೂನು ಬಾಹಿರವಾಗಿ ಇಕೆವೈಸಿ ಮಾಡಿರುವ ಸೈಬರ್ ಕೇಂದ್ರಗಳಿಗೆ ಈಗಾಗಲೇ ಎಚ್ಚರಿಕೆ ನೋಟಿಸ್ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರಿಂದ ದೂರು ಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. * ಎಂ.ಎ.ತಮೀಮ್ ಪಾಷ