ಶ್ರೀನಗರ್:ಜಮ್ಮು-ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್ ನಲ್ಲಿ ಕಳೆದ 24ಗಂಟೆಗಳಲ್ಲಿ ಎನ್ ಕೌಂಟರ್ ಗೆ ಎಂಟು ಉಗ್ರರು ಬಲಿಯಾಗಿರುವುದಾಗಿ ವರದಿ ತಿಳಿಸಿದೆ.
ವರದಿಯ ಪ್ರಕಾರ, ಪುಲ್ವಾಮಾದ ಆವಂತಿಪೋರಾದಲ್ಲಿ ಮೂವರು ಉಗ್ರರು ಹಾಗೂ ಶೋಪಿಯಾನ್ ನಲ್ಲಿ ಐವರು ಉಗ್ರರು ಭದ್ರತಾ ಪಡೆಯ ಎನ್ ಕೌಂಟರ್ ಗೆ ಬಲಿಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲು ದಕ್ಷಿಣ ಕಾಶ್ಮೀರದ ಆವಂತಿಪೋರಾದ ಪ್ಯಾಂಪೋರ್ ನ ಮೀಜ್ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇಬ್ಬರು ಉಗ್ರರು ಸ್ಥಳೀಯ ಜಾಮೀಯಾ ಮಸೀದಿಯಲ್ಲಿ ಅಡಗಿ ಕುಳಿತಿದ್ದರು. ಈ ಸಂದರ್ಭದಲ್ಲಿ ಶರಣಾಗುವಂತೆ ಇಮಾಮ್ ಸೂಚನೆ ನೀಡಿದರೂ ಕೂಡಾ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಮಸೀದಿಗೆ ಹಾನಿಯಾಗದಿರುವ ಮುಂಜಾಗ್ರತಾ ಕ್ರಮದೊಂದಿಗೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿರುವುದಾಗಿ ವರದಿ ವಿವರಿಸಿದೆ.
ಪ್ಯಾಂಪೋರ್ ನ ಮೀಜ್ ನಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿದ ವೇಳೆ ಮಸೀದಿಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳಲಾಗಿತ್ತು. ತಾಳ್ಮೆಯ ಹಾಗೂ ಉತ್ತಮ ಸೂಪರ್ ವಿಷನ್ ಗಾಗಿ ಸ್ಥಳೀಯ ಜನರು ಮತ್ತು ಮಸೀದಿಯ ಆಡಳಿತ ಮಂಡಳಿ ಜಿಲ್ಲಾ ಪೊಲೀಸರಿಗೆ ಅಭಿನಂದನೆ ಸಲ್ಲಿಸಿರುವುದಾಗಿ ವರದಿ ಹೇಳಿದೆ. ಅಷ್ಟೇ ಅಲ್ಲ ಸೇನೆ ಮತ್ತು ಸಿಆರ್ ಪಿಎಫ್ ಗೂ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.