ಚಿತ್ರದುರ್ಗ: ನಗರದ ಜೋಗಿಮಟ್ಟಿ ರಸ್ತೆಯ ಜಟ್‌ಪಟ್ ನಗರದಿಂದ ಕುರುಬರ ಗುಡ್ಡಕ್ಕೆ ಹೋಗುವ ಮಾರ್ಗದಲ್ಲಿ ಆಟೋದಲ್ಲಿ ಗಾಂಜಾ ಮಾರಾಟ ಮತ್ತು ಗಾಂಜಾ ಸೇವಿಸುತ್ತಿದ್ದ ಒಟ್ಟು ಎಂಟು ಮಂದಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 80 ಸಾವಿರ ರೂ. ಮೌಲ್ಯದ ಗಾಂಜಾ ಸೊಪ್ಪು, ಆಟೋ ಹಾಗೂ ನಗದು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಕೆ.ಪರಶುರಾಮ್ ಮಂಗಳವಾರ ಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಾಂಜಾ ಮಾರಾಟ ಮಾಡುತ್ತಿದ್ದ ಚಿತ್ರದುರ್ಗ ನಗರದ ಸೋಮಶೇಖರ, ಭರತ್ ಹಾಗೂ ಗಾಂಜಾ ಸೇವಿಸುತ್ತಿದ್ದ ದಸ್ತಗಿರಿ, ಸಾತ್ವಿಕ್, ಬಾಬು ಫಕೃದ್ದೀನ್, ದಾದಾಪೀರ್, ಭಾಸ್ಕರಾಚಾರಿ, ಗೌಸ್ ಪೀರ್ ಬಂಧಿತರು. ಆರೋಪಿಗಳು ಆಂಧ್ರಪ್ರದೇಶದ ವಿಶಾಖ ಪಟ್ಟಣದಿಂದ ಗೋವಿಂದಪ್ಪ ಎಂಬುವವರ ಬಳಿಯಿಂದ ರೈಲಿನ ಮೂಲಕ ಗಾಂಜಾ ಸೊಪ್ಪು ಖರೀದಿಸಿ ತಂದು ಚಿತ್ರದುರ್ಗದಲ್ಲಿ ಸಣ್ಣ ಕವರ್ ಗಳಲ್ಲಿ ತುಂಬಿಸಿ 400 ರೂ.ಗಳಿಗೆ ಒಂದರಂತೆ ಮಾರಾಟ ಮಾಡುತ್ತಿದ್ದರು. ಇದೇವೇಳೆ ನಗರದ ಕಾಲೇಜು ವಿದ್ಯಾರ್ಥಿಗಳಿಗೂ ಸರಬರಾಜು ಮಾಡುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ.
ಎಸ್ಪಿ ಕೆ.ಪರಶುರಾಮ್, ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ, ಡಿವೈಎಸ್ಪಿ ಪಾಂಡುರಂಗ ಮಾರ್ಗ ದರ್ಶನದಲ್ಲಿ ಸಿಪಿಐ ನಯೀಮ್, ಎಎಸ್‌ಐ ಸೈಯದ್ ಸಿರಾಜುದ್ದೀನ್, ಸಿಬ್ಬಂದಿಗಳಾದ ಶ್ರೀನಿವಾಸ, ರಂಗಸ್ವಾಮಿ, ಬೀರೇಶ್, ಶಿವರಾಜ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಹಾಜರಿದ್ದರು.
ಮಹಜರ್ ವೇಳೆ ಕಿಂಗ್‌ಪಿನ್ ಪರಾರಿ
ದಾಳಿ ವೇಳೆ ಬಂಧಿಸಿ, ಮಹಜರ್ ನಡೆಸುವಾಗ ಪ್ರಕರಣದ ಪ್ರಮುಖ ಆರೋಪಿ ಶ್ರೀನಿವಾಸ ಅಲಿಯಾಸ್ ಜಪಾನ್ ಸೀನ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಮೂತ್ರ ವಿಸರ್ಜನೆ ಮಾಡುವುದಾಗಿ ತಿಳಿಸಿದ್ದು, ಓರ್ವ ಸಿಬ್ಬಂದಿ ಜೊತೆಗೆ ದೂರಕ್ಕೆ ತೆರಳಿ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಇದು ನಮ್ಮ ಸಿಬ್ಬಂದಿ ನಿರ್ಲಕ್ಷ್ಯವಾಗಿದ್ದು, ಈ ಬಗ್ಗೆಯೂ ವಿಚಾರಣೆ ನಡೆಸಿ ಕ್ರಮ ಜರುಗಿಸುವುದಾಗಿ ಎಸ್ಪಿ ಕೆ.ಪರಶುರಾಮ್ ತಿಳಿಸಿದರು.
ಮಹಜರ್ ಸ್ಥಳದಲ್ಲಿ ಆರೋಪಿಗಳ ಸಂಖ್ಯೆ ಹೆಚ್ಚಾಗಿತ್ತು. ಪೊಲೀಸ್ ಸಿಬ್ಬಂದಿ ಸಂಖ್ಯೆ ಕಡಿಮೆಯಿತ್ತು. ಈ ಕಾರಣಕ್ಕೆ ತಪ್ಪಿಸಿಕೊಂಡಿದ್ದಾನೆ. ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹೇಳಿದರು.