Advertisement
ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ, ಅಕ್ಷರ ದಾಸೋಹ ಯೋಜನೆಯಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ಆಯುಕ್ತಾಲಯದ ವ್ಯಾಪ್ತಿಯ ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ಧಾರವಾಡ ಆಯುಕ್ತಾಲಯದ ವ್ಯಾಪ್ತಿಯ ವಿಜಯಪುರ ಜಿಲ್ಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ನೂತನ ಜಿಲ್ಲೆ ವಿಜಯನಗರ ಸೇರಿ ಎಂಟು ಜಿಲ್ಲೆಗಳಲ್ಲಿ ಒಟ್ಟಾರೆ 14.44 ಲಕ್ಷ ಮಕ್ಕಳು ಇದರ ಫಲಾನುಭವಿಗಳಾಗಿದ್ದಾರೆ.
ಕಾರ್ಯಕ್ರಮ ಅನುಷ್ಠಾನಕ್ಕೆ ಸರ್ಕಾರದ ಮಾರ್ಗಸೂಚಿ ನೀಡಲಾಗಿದ್ದು, ಪ್ರತಿ ತಿಂಗಳು ಒಬ್ಬ ವಿದ್ಯಾರ್ಥಿಗೆ 10ರಿಂದ 12 ಬೇಯಿಸಿದ ಮೊಟ್ಟೆಗಳು ಹಾಗೂ ಮೊಟ್ಟೆ ಸೇವಿಸಿದ ಮಕ್ಕಳಿಗೆ ಬಾಳೆಹಣ್ಣು ವಿತರಣೆಗೆ ಸೂಚಿಸಲಾಗಿದೆ. ಅದರಂತೆ ವಾರದಲ್ಲಿ ಮೂರು ದಿನ ವಿತರಣೆಗೆ ಶಿಕ್ಷಕರು ಕ್ರಮ ವಹಿಸಿದ್ದಾರೆ. ಈಗಾಗಲೇ ಸೋಮವಾರದಿಂದ ಶುಕ್ರವಾರದ ವರೆಗೆ ಮಕ್ಕಳಿಗೆ ಹಾಲು ಕೂಡ ವಿತರಣೆ ಮಾಡುತ್ತಿರುವುದರಿಂದ ದಿನಗಳ ನಿಗದಿ ಮಾಡುವ ಹೊಣೆಯನ್ನು ಆಯಾ ಶಾಲೆಗಳ ಶಿಕ್ಷಕರಿಗೆ ನೀಡಲಾಗಿದೆ. ಇಲ್ಲಿನ ಆದರ್ಶ ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ (ಅಕ್ಷರ ದಾಸೋಹ ಯೋಜನೆ) ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಡಿಪಿಐ ಅಶೋಕ ಭಜಂತ್ರಿ ಅವರು ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆ ಹಣ್ಣು ವಿತರಣೆ ಮಾಡಿದರು.
Related Articles
Advertisement
ಮಧ್ಯಾಹ್ನದ ಬಿಸಿಯೂಟ ಜತೆಗೆ ಒಬ್ಬ ವಿದ್ಯಾರ್ಥಿಗೆ ಒಂದು ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ಸೇವಿಸದವರಿಗೆ ಬಾಳೆಹಣ್ಣು ಕೊಡಲಾಗುತ್ತದೆ. ಮೊಟ್ಟೆ ಅಥವಾ ಬಾಳೆ ಹಣ್ಣು ವಿತರಣೆ ವೆಚ್ಚ 6ರೂ. ನಿಗದಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ದರ ಕಡಿಮೆ ಇದ್ದಾಗ ಎರಡು ಬಾಳೆ ಹಣ್ಣು ಖರೀದಿಸಿ ವಿತರಿಸಬಹುದಾಗಿದೆ ಎಂದು ತಿಳಿಸಿದರು.
ಖರೀದಿ ಸಮಿತಿ ರಚನೆ: ಶಾಲಾ ಹಂತದಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ಖರೀದಿ ಮತ್ತು ವಿತರಣೆ ಸೂಕ್ತ ಪ್ರಕ್ರಿಯೆ ಕೈಗೊಳ್ಳಲು ಎಸ್‌ಡಿಎಂಸಿ ಅಧ್ಯಕ್ಷರ ನೇತೃತ್ವದಲ್ಲಿ ಖರೀದಿ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯಲ್ಲಿ ಮುಖ್ಯ ಶಿಕ್ಷಕರು ಕಾರ್ಯದರ್ಶಿಯಾಗಿರಲಿದ್ದು, ಸದಸ್ಯರಾಗಿ ಇಬ್ಬರು ಪೋಷಕರು, ಇಬ್ಬರು ಹಿರಿಯ ಮಹಿಳಾ ಶಿಕ್ಷಕರು ಹಾಗೂ ಇಬ್ಬರು ತಾಯಂದಿರು ಇರಲಿದ್ದಾರೆ ಎಂದು ಮುಖ್ಯ ಶಿಕ್ಷಕಿ ಮಡಿವಾಳಮ್ಮ ಪಾಟೀಲ ಹೇಳಿದರು.
ಮಕ್ಕಳಿಗೆ ಅಗತ್ಯವಾದಷ್ಟು ಮೊಟ್ಟೆ ಹಾಗೂ ಬಾಳೆ ಹಣ್ಣನ್ನು ಆಯಾ ಶಾಲೆಯವರೇ ಪ್ರತ್ಯೇಕವಾಗಿ ಖರೀದಿಸಬೇಕು. ಮತ್ತೂಂದು ಶಾಲೆಯ ಜತೆಗೆ ಒಟ್ಟಿಗೆ ಖರೀದಿ ಮಾಡುವಂತಿಲ್ಲ ಎಂದು ಇಲಾಖೆಯಿಂದ ನಿರ್ದೇಶನ ನೀಡಲಾಗಿದೆ ಎಂದರು. ಮೊಟ್ಟೆ ಸವಿದ ಮಕ್ಕಳು: ಮಧ್ಯಾಹ್ನದ ಬಿಸಿಯೂಟ ಜತೆಗೆ ಮಕ್ಕಳು ಸಂತಸದಿಂದ ಮೊಟ್ಟೆ, ಬಾಳೆ ಹಣ್ಣು ಸೇವಿಸಿದರು. ಈ ಶಾಲೆಯಲ್ಲಿ ಒಟ್ಟಾರೆ 403 ಮಕ್ಕಳು ಹಾಜರಾತಿ ಇದ್ದು, ಬುಧವಾರ ಸುಮಾರು 300 ಮಕ್ಕಳು ಮೊಟ್ಟೆ ಸೇವಿಸಿದರು. 65ಕ್ಕೂ ಹೆಚ್ಚು ಮಕ್ಕಳು ಬಾಳೆ ಹಣ್ಣು ತಿಂದರು.
ಮೊಟ್ಟೆ ಸೇವನೆಯಿಂದ ದೇಹದಲ್ಲಿ ಪೌಷ್ಟಿಕಾಂಶ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಮೊಟ್ಟೆ ವಿತರಣೆಗೆ ಚಾಲನೆ ನೀಡಿರುವುದು ಖುಷಿ ಕೊಟ್ಟಿದೆ ಎಂದು 8ನೇ ತರಗತಿ ವಿದ್ಯಾರ್ಥಿನಿಗಳಾದ ಆರತಿ, ಪ್ರೀತಿ ಮತ್ತು ದೇವಮ್ಮ ಸಂತಸ ವ್ಯಕ್ತಪಡಿಸಿದರು. ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಳ್ಳಿ, ಮಧ್ಯಾಹ್ನ ಬಿಸಿಯೂಟ ಯೋಜನೆಯ ಶಿಕ್ಷಣಾ ಧಿಕಾರಿ ರಾಮಲಿಂಗಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ಶಿಕ್ಷಕರ ಸಂಘದ ಅಧ್ಯಕ್ಷ ಶೇಖ್ ಮುಜೀಬ್, ಶಿಕ್ಷಣ ಸಂಯೋಜಕ ಸಾಯಬಣ್ಣ ಹಾಗೂ ಶಿಕ್ಷಕರು ಇದ್ದರು.