ವಿಧಾನ ಪರಿಷತ್: ಕೊರೊನಾ ವೈರಸ್ ವಿಚಾರವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಜಿಲ್ಲೆಗಳಲ್ಲೂ ತಪಾಸಣಾ ಲ್ಯಾಬ್ ತೆರೆಯಲು ಚಿಂತನೆ ನಡೆಸುತ್ತಿದ್ದೇವೆ. ಕೊರೊನಾ ಮುಂಜಾಗೃತಾ ಕ್ರಮಕ್ಕೆ ಹಣಕಾಸಿನ ಕೊರತೆ ಇಲ್ಲ ಹಾಗೂ ಮಾಸ್ಕ್ ಗಳನ್ನು ಕಾಳಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಕೊೂರೊನಾ ವೈರಸ್ ಸೃಷ್ಟಿಸಿರುವ ಆತಂಕದ ಕುರಿತ ಚರ್ಚೆಗೆ ಉತ್ತರಿಸಿ, ರಾಜೀವ್ ಗಾಂಧಿ ಎದೆರೋಗಗಳ ಚಿಕಿತ್ಸಾ ಆಸ್ಪತ್ರೆ, ನಿಮ್ಹಾನ್ಸ್, ಬೆಂಗಳೂರು ವೈದ್ಯಕೀಯ ಕಾಲೇಜು ಆವರಣದಲ್ಲಿ ಕೊರೊನಾ ಸೋಂಕು ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ತಪಾಸಣಾ ಲ್ಯಾಬ್ ಆರಂಭಿಸುತ್ತೇವೆ. ಈ ಸಂಬಂಧ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಲಾಗಿದೆ. ಲ್ಯಾಬ್‌ಗಳನ್ನು ತುಂಬಾ ಸೂಕ್ಷ್ಮವಾಗಿ ನಿರ್ವಹಿಸಬೇಕಾಗಿರುವುದರಿಂದ ತಾಂತ್ರಿಕ ಸಮಸ್ಯೆಯೂ ಇದೆ. ಎಲ್ಲವನ್ನೂ ಸರಿಪಡಿಸುತ್ತೇವೆ ಎಂದರು.
ಮಾಸ್ಕ್ ಕೊರತೆಯಿಲ್ಲ: ರಾಜ್ಯದಲ್ಲಿ ಮಾಸ್ಕ್ ಕೊರತೆಯಿಲ್ಲ. ಕನಿಷ್ಠ 3 ತಿಂಗಳಿಗೆ ಬೇಕಾಗುವಷ್ಟು ಮಾಸ್ಕ್ ಲಭ್ಯತೆಯಿದೆ. ಜನೌಷಧ ಕೇಂದ್ರದ ಮೂಲಕ ಮಾಸ್ಕ್ ಮಾರಾಟ ಮಾಡಲಿದ್ದೇವೆ. ಕಾಳಸಂತೆ ಅಥವಾ ದುಪ್ಪಟ್ಟು ದರಗಳಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಜತೆಗೆ ಪರವಾನಗಿ ರದ್ದುಗೊಳಿಸುವ ಚಿಂತನೆ ನಡೆಸುತ್ತಿದ್ದೇವೆ. ಜ್ವರ, ಕೆಮ್ಮು ಅಥವಾ ಶೀತ ಇದ್ದವರು ಮಾತ್ರ ಮಾಸ್ಕ್ ಧರಿಸಿದರೆ ಸಾಕು. ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಮಾಸ್ಕ್ ಬದಲಿ ಕರವಸ್ತ್ರ ಅಥವಾ ಮನೆಯಲ್ಲೇ ಲಭ್ಯವಿರುವ ಶುದ್ಧವಿರುವ ಕಾಟನ್ ಬಟ್ಟೆಗಳನ್ನು ಮುಖಕ್ಕೆ ಕಟ್ಟಿಕೊಳ್ಳಬಹುದು ಎಂದರು.
ಅನುದಾನದ ಕೊರತೆಯಿಲ್ಲ: ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಉತ್ತಮ ಸಹಕಾರ ಸಿಗುತ್ತಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮ ಮತ್ತು ಇತರೆ ಅಗತ್ಯ ಕಾರ್ಯಕ್ಕಾಗಿ ಈಗಾಗಲೇ 36 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಅದ ರಲ್ಲಿಯೇ ತುರ್ತು ಕಾರ್ಯಗಳು ನಡೆಯುತ್ತಿವೆ. ಯಾವುದೇ ರೀತಿಯ ಅನುದಾನದ ಕೊರತೆಯಿಲ್ಲ ಎಂದು ಹೇಳಿದರು.
ಕಲಬುರಗಿ ವ್ಯಕ್ತಿಗೆ ಆರಂಭದಲ್ಲಿ ಇದು ಕೊರೋನಾ ಅಂತ ಸಾಬೀತಾಗಿರಲಿಲ್ಲ. ಕಫ, ರಕ್ತದ ಮಾದರಿ ತಪಾಸಣೆ ನಂತರ ಕೊರೊನಾ ಇರುವುದು ದೃಢಪಟ್ಟಿತ್ತು. ಸಾವಿನ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ಮಾಡಿದ್ದೇವೆ. ನಂತರ ಇವರ ಸಂಪರ್ಕದಲ್ಲಿದ್ದ 71 ಮಂದಿಯನ್ನು ತಪಾಸಣೆಗೆ ಒಳಪಡಿಸಿದ್ದೇವೆ. ಮೃತರ ಕುಟುಂಬದ ನಾಲ್ವರಲ್ಲಿ ಒಬ್ಬರಿಗೆ ಕೊರೊನಾ ಇರುವುದು ದೃಢಪಟ್ಟಿದೆ ಎಂದರು.
ಕೊರೊನಾ ಒಮ್ಮೆಗೇ ವ್ಯಾಪಿಸಿದ್ದರಿಂದ ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ ಮತ್ತು ಈ ಕಾಯಿಲೆಯ ಸುಳಿವು ಸಿಗುತ್ತಿಲ್ಲ. ಆದರೂ, ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ.
-ಬಿ.ಶ್ರೀರಾಮುಲು, ಆರೋಗ್ಯ ಸಚಿವ