ದೇಹತೂಕವು ವಿವಿಧ ಕ್ರೀಡೆಗಳು, ಮುಖ್ಯವಾಗಿ ಕುಸ್ತಿಯಲ್ಲಿ ಕ್ರೀಡಾಳುವಿನ ಅರ್ಹತೆಯನ್ನು ನಿರ್ಧರಿಸುವ ಒಂದು ಅಂಶವಾಗಿದೆ. ವಿನೇಶ್ ಪೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪಂದ್ಯದಿಂದ ಅನರ್ಹರಾಗಿರುವ ಸುದ್ದಿಯು ದೇಹತೂಕವನ್ನು ಅತ್ಯಂತ ತರಾತುರಿಯಲ್ಲಿ ಹೆಚ್ಚು-ಕಡಿಮೆ ಮಾಡುವ ತಂತ್ರಗಳ ವಿಷಯದಲ್ಲಿ ವ್ಯಾಪಕ ಚರ್ಚೆ ನಡೆಯಲು ಕಾರಣವಾಗಿದೆ. ಕ್ರೀಡಾಳು ಒಬ್ಬರ ದೇಹತೂಕವನ್ನು ನಿಗದಿತ ಮಟ್ಟಕ್ಕೆ ಅತ್ಯಂತ ಸನಿಹದಲ್ಲಿ ಇರಿಸಿಕೊಳ್ಳುವ ಕ್ರೀಡಾ ಮತ್ತು ಆರೋಗ್ಯ ಸೇವಾ ವೃತ್ತಿಪರರ ಸಾಮರ್ಥ್ಯದ ಬಗ್ಗೆಯೂ ಇದರಿಂದ ಪ್ರಶ್ನೆಗಳು ಉದ್ಭವಿಸುವಂತಾಗಿದೆ.
ವ್ಯಕ್ತಿಯೊಬ್ಬರ ದೇಹತೂಕದ ಮೇಲೆ ಅನೇಕ ಅಂಶಗಳು ಪ್ರಭಾವ ಬೀರುತ್ತವೆ. ಅವರ ವಂಶವಾಹಿ ಸ್ವರೂಪ, ಆಹಾರ ಕ್ರಮ, ದೇಹರಚನೆ, ದೈನಿಕ ಕೆಲಸ ಕಾರ್ಯಗಳು ಮತ್ತು ವ್ಯಾಯಾಮ ಹಾಗೂ ಮಹಿಳೆಯರಲ್ಲಿ ಒತ್ತಡದ ಹಾರ್ಮೋನ್ ಮತ್ತು ಮಾಸಿಕ ಋತುಸ್ರಾವದಂತಹ ಅನೇಕ ಸಂಕೀರ್ಣ ಅಂಶಗಳು ದೇಹತೂಕದ ಮೇಲೆ ಪ್ರಭಾವ ಹೊಂದಿರುತ್ತವೆ. ಗಾಯವಾದ ಸಂದರ್ಭದಲ್ಲಿ ಅದರಿಂದ ನೇರ ಪರಿಣಾಮ ಇಲ್ಲದಿದ್ದರೂ ದೈನಿಕ ವ್ಯಾಯಾಮ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿ ಅದು ಚಯಾಪಚಯ ಕ್ರಿಯೆ ಮತ್ತು ದೇಹ ಪರಿಮಾಣದ ಮೇಲೆ ಪ್ರಭಾವ ಬೀರುವುದರಿಂದ ದೇಹತೂಕದ ಮೇಲೆ ಪರಿಣಾಮವಾಗುತ್ತದೆ.
ನಿರ್ದಿಷ್ಟ ಕ್ರೀಡೆಗಳ ತರಬೇತಿಯಲ್ಲಿ ನಿರ್ದಿಷ್ಟ ಸ್ನಾಯುಗಳ ಬೆಳವಣಿಗೆ ಅಗತ್ಯವಾಗಿರುತ್ತದೆ. ಉದಾಹರಣೆಗೆ, ಕಿರು ದೂರದ ವೇಗದ ಓಟ ಮತ್ತು ಹರ್ಡಲ್ಸ್ ಗಳಿಗೆ ವೈಟ್ ಮಸಲ್ ಫೈಬರ್ ಮತ್ತು ಕ್ಷಿಪ್ರವಾಗಿ ವೇಗ ಹೆಚ್ಚಿಸಿಕೊಳ್ಳಲು ಏರೋಬಿಕ್ ಮೆಟಬಾಲಿಸಂ ಅಗತ್ಯವಾಗಿರುತ್ತವೆ. ಅದೇ ದೀರ್ಘ ದೂರದ ಓಟಕ್ಕೆ ರೆಡ್ ಮಸಲ್ ಫೈಬರ್ ಹಾಗೂ ಅಗತ್ಯವಾದ ತಾಳಿಕೊಳ್ಳುವಿಕೆ ಮತ್ತು ಸಾಮರ್ಥ್ಯ ವೃದ್ಧಿಗೆ ಏರೋಬಿಕ್ ಮೆಟಬಾಲಿಸಂ ಆವಶ್ಯಕವಾಗಿರುತ್ತದೆ.
ಕ್ರೀಡಾಳು ತನ್ನ ತಾಯ್ನೆಲದಲ್ಲಿ ಪಡೆಯುವ ತರಬೇತಿಗೂ ಸ್ಪರ್ಧೆ ಆಯೋಜನೆಯಾಗಿರುವ ಊರು ಅಥವಾ ದೇಶಕ್ಕೂ ಹವಾಮಾನ, ವಾತಾವರಣ ವಿಷಯಗಳಲ್ಲಿ ವ್ಯತ್ಯಾಸ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ದೇಹದ ದ್ರವಾಂಶ ಕಾಪಾಡಿಕೊಳ್ಳುವುದು ಮತ್ತು ಉಪ್ಪಿನಂಶ ಸಮತೋಲನ ಕಾಪಾಡಿಕೊಳ್ಳುವ ವಿಷಯದಲ್ಲಿ ಹೆಚ್ಚು ಕ್ರಿಪ್ರವಾಗಿ ಹೊಂದಾಣಿಕೆ ಮಾಡಿಕೊಂಡು ಪ್ರದರ್ಶನ ನೀಡಬೇಕಾಗಿರುವುದು ಮತ್ತು ಪ್ರದರ್ಶನದ ಚಿಂತೆಗಳು ಕೂಡ ಉಂಟಾಗಬಹುದಾದ ಹಿನ್ನೆಲೆಯಲ್ಲಿ ಇದೊಂದು ಬಹಳ ಮುಖ್ಯ ಅಂಶವಾಗಿರುತ್ತದೆ.
ಹೀಗಾಗಿ ಅತ್ಯುಚ್ಚ ಪ್ರದರ್ಶನ ನೀಡಿ ಸಾಧನೆ ನಡೆಸಬೇಕಾಗಿರುವ ಕ್ರೀಡಾಳುಗಳು ಸತತ ನಿಗಾ ಇರಿಸಿಕೊಳ್ಳಬೇಕಾಗುತ್ತದೆ ಮತ್ತು ಈ ವಿವರಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿರಬೇಕಾಗುತ್ತದೆ. ಕ್ರೀಡಾಕೂಟಕ್ಕೆ ಮುಂಚಿತ ತಯಾರಿಯಾಗಿ ತೀವ್ರತರಹದ ದೇಹದಂಡನೆ ನಡೆಸಿದರೆ ಅದರಿಂದ ನಿರ್ಜಲೀಕರಣ ಉಂಟಾಗಿ ಪ್ರದರ್ಶನ ಕಳಪೆಯಾಗಬಹುದು.
ಬೆವರುವಿಕೆಯಿಂದಾಗಿ ದೇಹದದಿಂದ ದ್ರವಾಂಶ ನಷ್ಟ ಮತ್ತು ಅದನ್ನು ಸರಿದೂಗಿಸಲು ದ್ರವಾಹಾರ ಸೇವನೆಯಿಂದ ಉಂಟಾಗುವ ತೂಕ ವ್ಯತ್ಯಯ ಕನಿಷ್ಠ ಮಟ್ಟದಲ್ಲಿ ಇರುತ್ತದೆಯಾದರೂ ಇತ್ತೀಚೆಗೆ ವಿನೇಶ್ ಪೋಗಟ್ ಅವರ ಉದಾಹರಣೆಯಲ್ಲಿ ಆಗಿರುವಂತೆ ಈ ಸೂಕ್ಷ್ಮ ಪ್ರಮಾಣದ ತೂಕ ನಷ್ಟ-ಗಳಿಕೆಯನ್ನು ಸರಿದೂಗಿಸಲು ಹತಾಶೆ ಮತ್ತು ಕೊನೆಯ ಕ್ಷಣದ ಪ್ರಯತ್ನವಾಗಿ ಇಂಜೆಕ್ಷನ್ ರೂಪದಲ್ಲಿ ದ್ರವಾಂಶವನ್ನು ಪಡೆಯುವುದು, ಕೂದಲು ಕತ್ತರಿಸಿಕೊಳ್ಳುವುದು, ಉಡುಗೆ-ತೊಡುಗೆಗಳನ್ನು ಕನಿಷ್ಠ ಮಟ್ಟಕ್ಕಿಳಿಸುವಂತಹ ವಿಪರೀಪ ಕ್ರಮಗಳನ್ನು ಅವಲಂಬಿಸುವಂತೆ ಮಾಡಬಹುದಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಯಾವುದೇ ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದಕ್ಕೆ ಪೂರ್ವಭಾವಿಯಾಗಿ ವ್ಯವಸ್ಥಿತವಾದ ತರಬೇತಿ ಮತ್ತು ಸಮರ್ಪಕವಾದ ಪೂರ್ವ ತಯಾರಿಗೆ ಇರುವ ಮಹತ್ವವನ್ನು ಅವಗಣಿಸಲಾಗದು.
ಸ್ಪರ್ಧೆಗೆ ಹಲವು ತಿಂಗಳುಗಳಷ್ಟು ಮುಂಚಿತವಾಗಿ ಅಗತ್ಯವಾದ ಎಲ್ಲ ಅಂಶಗಳ ಬಗ್ಗೆ ಕೂಲಂಕಷ ಗಮನ ಇರಿಸಿಕೊಂಡು ಜಾಗರೂಕರಾಗಿ ಸಮತೋಲನವನ್ನು ಕಾಯ್ದುಕೊಳ್ಳುತ್ತ ಪೂರ್ವತಯಾರಿ ನಡೆಸಿದ್ದೇ ಆದರೆ ಕೊನೆಯ ಕ್ಷಣದಲ್ಲಿ ವಿಪರೀತ ಕ್ರಮಗಳನ್ನು ಅನುಸರಿಸುವಂತಹ ಪರಿಸ್ಥಿತಿ ಒದಗಲಾರದು. ನಮ್ಮ ಬಗ್ಗೆ ನಾವು ಗಮನ ಇರಿಸಿಕೊಂಡು ಸರಿಯಾದ ವಿಭಾಗದಲ್ಲಿ ಸ್ಪರ್ಧಿಸುವುದು ಸರಿಯಾದ ಕ್ರಮವೇ ಹೊರತು ಸಂಕೀರ್ಣವಾದ ದೈಹಿಕ ಅಂಶಗಳನ್ನು ಹೊಂದಾಣಿಕೆ ಮಾಡಿಕೊಳ್ಳುವಂತಹ ವಿಪರೀತ ಕ್ರಮಗಳಿಗೆ ಮುಂದಾಗುವುದು ಸರಿಯಲ್ಲ.
ಇದಕ್ಕೆ ಪೂರಕವಾಗಿ ಕ್ರೀಡಾಸಂಸ್ಥೆಗಳು, ಸರಕಾರಗಳ ನೆಲೆಯಲ್ಲಿ ಕ್ರೀಡಾ ಪಥ್ಯಾಹಾರ ತಜ್ಞರು, ಮನಶ್ಶಾಸ್ತ್ರಜ್ಞರು, ಆಪ್ತಸಮಾಲೋಚಕರು, ಫಿಸಿಯೋಥೆರಪಿಸ್ಟ್‌ಗಳು ಮತ್ತು ತರಬೇತಿ ಒದಗಿಸುವ ಕೋಚ್ ಹಾಗೂ ಕ್ರೀಡಾವೈದ್ಯರ ಸಹಿತ ಕ್ರೀಡಾಳುಗಳಿಗೆ ಪೂರಕವಾದ ಸರ್ವಸನ್ನದ್ದ ತಂಡವನ್ನು ರೂಪಿಸಿ ಒದಗಿಸುವ ಮೂಲಕ ಸರ್ವಾಂಗೀಣ ಮಾರ್ಗದರ್ಶನ ಒದಗಿಸುವಂತಾಗಬೇಕು.
ಕ್ರೀಡಾಳುಗಳ ಸಾಮರ್ಥ್ಯ ಗುರುತಿಸಿ ಅವರು ನಿರ್ದಿಷ್ಟ ಕ್ರೀಡೆಯಲ್ಲಿ ಸ್ಪರ್ಧಿಸಲು ಸಿದ್ಧರಾದ ಬಳಿಕ ಸಾಧನ- ಸಲಕರಣೆಗಳನ್ನು ಒದಗಿಸುವುದಕ್ಕಷ್ಟೇ ವ್ಯವಸ್ಥೆಗಳು ಸೀಮಿತವಾಗದೆ, ಮೇಲೆ ಹೇಳಲಾಗಿರುವ ಸರ್ವತೋಮುಖವಾದ ಪೂರಕ ಸಿಬಂದಿಯ ತಂಡದಿಂದ ಕ್ರೀಡಾಳುವಿಗೆ ಸಮಗ್ರ ವಿಶ್ಲೇಷಣೆ, ಆಪ್ತಸಮಾಲೋಚನೆ ಮತ್ತು ಅಗತ್ಯವಾದ ಎಲ್ಲ ಪೂರಕ ವಾತಾವರಣವನ್ನು ನಿರ್ಮಿಸಿಕೊಡುವುದರ ಮೂಲಕ ವ್ಯವಸ್ಥಿತವಾದ ತರಬೇತಿಯನ್ನು ನೀಡುವುದಕ್ಕೆ ಇರುವ ಮಹತ್ವವನ್ನು ಗುರುತಿಸುವಂತಾಗಬೇಕು.
ಇದರಿಂದ ಯುವ ಪೀಳಿಗೆಯು ಕ್ಷಿಪ್ರ ಕ್ರೀಡಾಸಾಧನೆಯನ್ನು ಸಾಧ್ಯವಾಗಿಸಬಲ್ಲ ಅಡ್ಡಹಾದಿಯ ಆಹಾರ ಕ್ರಮ ಮತ್ತು ವ್ಯಾಯಾಮ ಚಟುವಟಿಕೆಗಳ ಮೊರೆಹೋಗಿ ಒಮ್ಮೆಗೆ ಸಾಧನೆಯ ಉತ್ತುಂಗಕ್ಕೇರಿ ಆ ಬಳಿಕ ತಮ್ಮ ದೀರ್ಘಕಾಲೀನ ಆರೋಗ್ಯಕ್ಕೆ ಮಾರಕವಾಗಬಲ್ಲ ಕಳಪೆ ಆಹಾರ-ಜೀವನ ಶೈಲಿಯನ್ನು ಅನುಸರಿಸುವಂತೆ ಮಾಡುವುದನ್ನು ತಡೆಯಬಹುದಾಗಿದೆ.
ಸ್ಪೋರ್ಟ್ ಕ್ಲಿನಿಕ್ ಎನ್ನುವುದು ಕೇವಲ ಕ್ರೀಡಾಸಂದರ್ಭ ಉಂಟಾಗುವ ಗಾಯಗಳಿಗೆ ಚಿಕಿತ್ಸೆ ನೀಡುವುದಕ್ಕೆ ಬೇಕಾದ ಅತ್ಯಾಧುನಿಕ ಸಾಧನ-ಸಲಕರಣೆಗಳನ್ನು ಹೊಂದಿರುವ ಕೇಂದ್ರವಷ್ಟೇ ಅಲ್ಲ; ಈ ಕೆಲಸವನ್ನು ಆಯಾ ತಜ್ಞ ಸರ್ಜನ್‌ಗಳು ಮಾಡಬಲ್ಲರು. ಈ ಸೌಲಭ್ಯ ಸ್ಪೋರ್ಟ್ ಕ್ಲಿನಿಕ್‌ನ ಒಂದು ಆಯಾಮ ಮಾತ್ರವಾಗಿದೆ. ಕ್ರೀಡಾ ಪ್ರತಿಭೆಗಳ ಸರ್ವಾಂಗೀಣ ಬೆಳವಣಿಗೆ, ಅಭಿವೃದ್ಧಿ ಮತ್ತು ಸಾಧನೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಕೂಡ ಸೂಕ್ಷ್ಮವಾಗಿ ಗಮನಿಸಿ ಸಮಗ್ರ ಆರೈಕೆ-ಚಿಕಿತ್ಸೆ ಮತ್ತು ಪೂರಕ ವ್ಯವಸ್ಥೆಯನ್ನು ಒದಗಿಸುವಂತಹ ಕಾರ್ಯ ಸ್ಪೋರ್ಟ್ ಕ್ಲಿನಿಕ್‌ಗಳಿಂದ ಆಗಬೇಕಾಗಿದೆ.
–
ಡಾ| ಯೋಗೀಶ್ ಕಾಮತ್
ಆರ್ಥೋಪೆಡಿಕ್ ವೈದ್ಯರು
–
ಬಿಶ್ವರಂಜನ್ ದಾಸ್
ಆರ್ಥೋಪೆಡಿಕ್ ವೈದ್ಯರು
ಕಾಂಪ್ರಹೆನ್ಸಿವ್ ಸೆಂಟರ್
ಫಾರ್ ನೀ ಆ್ಯಂಡ್ ಹಿಪ್ ಕೇರ್
ಕೆಎಂಸಿ ಆಸ್ಪತ್ರೆ,
ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆರ್ಥೋಪೆಡಿಕ್ ವಿಭಾಗ, ಕೆಎಂಸಿ, ಮಂಗಳೂರು)