ಬಳ್ಳಾರಿ: ವಿಧಾನಸಭಾ ಚುನಾವಣೆ ಮುಕ್ತ, ಪಾರದರ್ಶಕ, ನಿಷ್ಪಕ್ಷಪಾತ ಹಾಗೂ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಒಂದು ವೇಳೆ ಈ ವಿಷಯದಲ್ಲಿ ನಿರ್ಲಕ್ಷ ತೋರಿದ್ದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ
ಡಾ| ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಎಚ್ಚರಿಸಿದರು.
ನಗರದ ಬಿಡಿಎಎ ಸಭಾಂಗಣದಲ್ಲಿ ಚುನಾವಣಾ ವೆಚ್ಚದ ನಿರ್ವಹಣೆ ಕುರಿತು ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಚುನಾವಣೆಗೆ ಸಂಬಂಧಿಸಿದಂತೆ ಹಲವಾರು ತಂಡಗಳನ್ನು ರಚಿಸಲಾಗಿದೆ. ಅವುಗಳೆಲ್ಲವುಗಳ ಮುಖ್ಯ ಉದ್ದೇಶ ಮುಕ್ತ, ಪಾರದರ್ಶಕ ಮತ್ತು
ನಿಷ್ಪಕ್ಷಪಾತ ಚುನಾವಣೆಯಾಗಿದ್ದು, ಅದನ್ನು ಯಶಸ್ವಿಯಾಗಿ ನಡೆಸಬೇಕು. 5 ವರ್ಷಗಳಿಗೊಮ್ಮೆ ಸಿಗುವ ಅದ್ಭುತ ಅವಕಾಶ ಇದಾಗಿದೆ. ಚುನಾವಣೆ ಯಶಸ್ವಿ ಮಾಡುವ ನಿಟ್ಟಿನಲ್ಲಿ ಕಾರ್ಯದಕ್ಷತೆ ಕೂಡ ಪ್ರಮುಖವಾಗಿದೆ ಎಂದು ಸಲಹೆ ನೀಡಿದರು.
ರಿಟರ್ನಿಂಗ್ ಆಫಿಸರ್, ಸೆಕ್ಟರಲ್ ಆಫಿಸರ್, ಫ್ಲೆಯಿಂಗ್ ಸ್ಕ್ವಾಡ್, ವಿಎಸ್‌ಟಿ, ಎಸ್‌ಎಸ್‌ಟಿ ಸೇರಿದಂತೆ ಚುನಾವಣೆಗೆ ನಿಯೋಜಿತರಾದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಾಗುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು ಮತ್ತು ಇದರೊಂದಿಗೆ ತಮ್ಮ ಮೊಬೈಲ್ ನಂಬರ್ ಗಳನ್ನು ಜೊಡಿಸಲಾಗುವುದು. ಆಗಾಗ ರ್‍ಯಾಂಡಮ್ ಆಗಿ ಪರಿಶೀಲಿಸಲಾಗುವುದು. ತಮ್ಮ ವಾಹನ ಮತ್ತು ತಾವು ಯಾವ ಸ್ಥಳದಲ್ಲಿದ್ದೀರಿ ಎಂಬುದು ಗೊತ್ತಾಗುತ್ತದೆ ಎಂದರು.
ದೂರು ಬಂದ 30 ನಿಮಿಷಗಳಲ್ಲಿ ಸ್ಥಳಕ್ಕೆ ತೆರಳಿ ಸ್ಪಂದಿಸುವ ಕೆಲಸ ಫ್ಲೆಯಿಂಗ್ ಸ್ಕ್ವಾಡ್‌ಗಳು ಮಾಡಬೇಕು. ಸ್ಥಳಕ್ಕೆ ತೆರಳಿ ಕ್ರಮ ವಹಿಸದಿದ್ದರೆ ಅಂತಹ ನಿಯೋಜಿತರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ ಮಾತನಾಡಿ, ನೈತಿಕ ಮತದಾನದ ಬಗ್ಗೆ ಸಾಮೂಹಿಕ ಕ್ಯಾಂಪೇನ್ ಆಗಬೇಕು. ಬೂತ್‌ಲೆವಲ್ ಜಾಗೃತಿ
ಗುಂಪುಗಳು ರಚನೆಯಾಗಬೇಕು ಎಂದರು. ಈ ಕಾರ್ಯಾಗಾರದಲ್ಲಿ ಚುನಾವಣಾ ವೆಚ್ಚ ನಿರ್ವಹಣೆ, ಮಾದರಿ ನೀತಿ ಸಂಹಿತೆ ಹಾಗೂ ವಿವಿಧ ತಂಡಗಳ ಕರ್ತವ್ಯಗಳ ಕುರಿತು ಎಂಸಿಸಿ, ಪೊಲೀಸ್, ಅಬಕಾರಿ, ಆದಾಯ ತೆರಿಗೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಎಂಸಿಎಂಸಿ, ಕಂಪ್ಲೆಟ್ ಮಾನಿಟರಿಂಗ್ ನೋಡಲ್ ಅಧಿಕಾರಿಗಳು ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ರಿಟರ್ನಿಂಗ್, ಸಹಾಯಕ ರಿಟರ್ನಿಂಗ್ ಅಧಿಕಾರಿಗಳು, ಸಹಾಯಕ ವೆಚ್ಚ ಪರಿಶೀಲಕರು, ವಿಡಿಯೋ ಸರ್ವಲೆನ್ಸ್ ಟೀಮ್ ಮುಖ್ಯಸ್ಥರು, ವಿಡಿಯೋ ವೀಕ್ಷಣಾ ತಂಡದ ಮುಖ್ಯಸ್ಥರು, ಫ್ಲೆಯಿಂಗ್ ಸ್ಕ್ವಾಡ್ ಮುಖ್ಯಸ್ಥರು, ಸ್ಟಾಟಿಸ್ಟಿಕ್ ಸರ್ವಲೆನ್ಸ್ ಟೀಮ್ ಮುಖ್ಯಸ್ಥರು, ಅಕೌಂಟಿಂಗ್ ಟೀಮ್ ಮುಖ್ಯಸ್ಥರು, ದೂರು ನಿರ್ವಹಣಾ ಮತ್ತು ನಿಯಂತ್ರಣಾ ಕೋಶದ ಮುಖ್ಯಸ್ಥರು ಹಾಗೂ ಕಾಲ್ ಸೆಂಟರ್ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಚುನಾವಣೆಗೆ ಸಂಬಂಧಿಸಿದಂತೆ ಹಲವಾರು ತಂಡ ರಚಿಸಲಾಗಿದೆ. ಅವುಗಳೆಲ್ಲವುಗಳ ಮುಖ್ಯ ಉದ್ದೇಶ ಮುಕ್ತ, ಪಾರದರ್ಶಕ ಮತ್ತು
ನಿಷ್ಪಕ್ಷಪಾತ ಚುನಾವಣೆಯಾಗಿದ್ದು, ಅದನ್ನು ಯಶಸ್ವಿಯಾಗಿ ನಡೆಸಬೇಕು. 5 ವರ್ಷಗಳಿಗೊಮ್ಮೆ ಸಿಗುವ ಅದ್ಭುತ ಅವಕಾಶ ಇದಾಗಿದೆ. ಚುನಾವಣೆ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾರ್ಯದಕ್ಷತೆ ಕೂಡ ಪ್ರಮುಖವಾಗಿದೆ. ಡಾ| ರಾಮ್ ಪ್ರಸಾತ್ ಮನೋಹರ್,
ಜಿಲ್ಲಾ ಚುನಾವಣಾಧಿಕಾರಿ