Advertisement

ಬಿಜೆಪಿ ನಾಯಕರ ಪ್ರತ್ಯೇಕ ಸಭೆಯ ಎಫೆಕ್ಟ್

11:09 PM Feb 05, 2020 | Lakshmi GovindaRaj |

ಬೆಂಗಳೂರು: ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡುವುದಕ್ಕೆ ವಿರೋಧ ಬಿರುಸಾಗಿದೆ.  ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಶಾಸಕರು ಸೋಮವಾರ ಶಾಸಕರ ಭವನದಲ್ಲೇ ಸಭೆ ನಡೆಸಿದ್ದರು. ಕಲ್ಯಾಣ ಕರ್ನಾಟಕಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಡ ಹೇರಲು ನಿರ್ಧರಿಸಿದ್ದ ಶಾಸಕರು,

Advertisement

ಸಿ.ಪಿ. ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡುವುದಕ್ಕೂ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಮಂಗಳವಾರ ಇನ್ನೂ ಕೆಲ ಶಾಸಕರು ಸಭೆ ನಡೆಸಿ ಪ್ರತಿರೋಧ ಮುಂದು ವರಿಸಿದ್ದರು. ಇದರಿಂದ ಪಕ್ಷದಲ್ಲಿ ಅತೃಪ್ತಿ, ಭಿನ್ನಮತೀಯ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಉಪಚುನಾವಣೆಯಲ್ಲಿ ಗೆದ್ದವರನ್ನಷ್ಟೇ ಸಚಿವರನ್ನಾಗಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ತಪ್ಪಿದ ಲೆಕ್ಕಾಚಾರ: ಉಪಚುನಾವಣೆಯಲ್ಲಿ ಗೆದ್ದ 10 ಮಂದಿ ಹಾಗೂ ಮೂಲ ಬಿಜೆಪಿಯ ಮೂವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಳೆದ ಭಾನುವಾರ ಸುಳಿವು ನೀಡಿದ್ದರು. ಮೂಲ ಬಿಜೆಪಿ ಕೋಟಾದಡಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ವರಿಷ್ಠರ ಸೂಚನೆ ಎಂಬಂತಿತ್ತು. ಆದರೆ ಈ ಬಗ್ಗೆ ಮೂಲ ಬಿಜೆಪಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದು ಸಂಪುಟ ವಿಸ್ತರಣೆಯ ಲೆಕ್ಕಾಚಾರವನ್ನೇ ತಲೆ ಕೆಳಗು ಮಾಡಿ ಮೂಲ ಬಿಜೆಪಿಯಿಂದ ಯಾರೊಬ್ಬರೂ ಸದ್ಯ ಸಚಿವರಾಗದಂತಹ ಸ್ಥಿತಿ ನಿರ್ಮಾಣವಾಯಿತು.

ಹೈಕಮಾಂಡ್‌ ಸೂಚನೆ: ಉಪಚುನಾವಣೆಯಲ್ಲಿ ಗೆದ್ದ 10 ಶಾಸಕರು ಹಾಗೂ ಮೂಲ ಬಿಜೆಪಿಯಿಂದ ಉಮೇಶ್‌ ಕತ್ತಿ, ಅರವಿಂದ ಲಿಂಬಾವಳಿ, ಸಿ.ಪಿ.ಯೋಗೇಶ್ವರ್‌, ಹಾಲಪ್ಪ ಆಚಾರ್‌ ಪೈಕಿ ಮೂರು ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರ ಬುಧವಾರ ಬೆಳಗ್ಗೆವರೆಗೆ ಇತ್ತು. ಇದೇ ನಿರೀಕ್ಷೆಯಲ್ಲಿ ಉಮೇಶ್‌ ಕತ್ತಿ, ಅರವಿಂದ ಲಿಂಬಾವಳಿ, ಸಿ.ಪಿ.ಯೋಗೇಶ್ವರ್‌ ಅವರು ಬುಧವಾರ ಬೆಳಗ್ಗೆ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ ಹೈಕಮಾಂಡ್‌ 10 ಮಂದಿಯನ್ನಷ್ಟೇ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಲೆಕ್ಕಾಚಾರ ಬದಲಾಗಿವೆ ಎಂದು ಮೂಲಗಳು ಹೇಳಿವೆ.

ಮೂಲ ಬಿಜೆಪಿಗರಲ್ಲಿ ನಿರಾಸೆ ಮೂಲ ಬಿಜೆಪಿ ಕೋಟಾದಡಿ ಸಚಿವರಾಗುವ ನಿರೀಕ್ಷೆಯಲ್ಲಿದ್ದ ಉಮೇಶ್‌ ಕತ್ತಿ, ಅರವಿಂದ ಲಿಂಬಾವಳಿ, ಸಿ.ಪಿ. ಯೋಗೇಶ್ವರ್‌ ಅವರು ಬುಧವಾರ ಬೆಳಗ್ಗೆ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ನಡುವೆ ಹೈಕಮಾಂಡ್‌ನ‌ ಸೂಚನೆಯೂ ಮುಖ್ಯಮಂತ್ರಿಗಳಿಗೆ ರವಾನೆಯಾಗಿತ್ತು ಎನ್ನಲಾಗಿದೆ. ಹಾಗಿದ್ದರೂ ಯಡಿಯೂರಪ್ಪ ಅವರು ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಹಾಗಾಗಿ ಸಂಜೆವರೆಗೂ ಪ್ರಮಾಣ ವಚನ ಸ್ವೀಕಾರಕ್ಕೆ ಆಹ್ವಾನ ಬರುವ ನಿರೀಕ್ಷೆಯಲ್ಲೇ ಸಚಿವಾಕಾಂಕ್ಷಿಗಳಿದ್ದರು. ಆದರೆ ಕೊನೆಗೆ 10 ಮಂದಿಗಷ್ಟೇ ಸಚಿವ ಸ್ಥಾನ ಎಂದು ಯಡಿಯೂರಪ್ಪ ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆ ಸಚಿವಾಕಾಂಕ್ಷಿಗಳು ನಿರಾಶರಾದರು.

Advertisement

ಅಸಮಾಧಾನ ಸರ್ಕಾರದ ವಿರುದ್ಧವಲ್ಲ: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ತಮ್ಮ ಅಸಮಾಧಾನ ಸೋತವರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೇ ಹೊರತು ಪಕ್ಷ, ನಾಯಕತ್ವ, ಸರ್ಕಾರದ ವಿರುದ್ಧವಲ್ಲ ಎಂಬ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

ಮಂಗಳವಾರ ರಾತ್ರಿ ಟ್ವೀಟ್‌ ಮಾಡಿರುವ ರೇಣುಕಾಚಾರ್ಯ, “ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನಮ್ಮ ನಾಯಕರು. ನಾಯಕತ್ವ, ಪಕ್ಷ ಮತ್ತು ಸರ್ಕಾರದ ವಿರುದ್ಧ ಯಾರು ಧ್ವನಿ ಎತ್ತಿಲ್ಲ ಮತ್ತು ಎತ್ತುವುದು ಇಲ್ಲ. ಸೋತವರಿಗೆ ಮಂತ್ರಿ ಸ್ಥಾನ ನೀಡುತ್ತ ಹೋದರೆ ಪಕ್ಷಕ್ಕೆ ಮುಜುಗರವಾಗುತ್ತದೆ. ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕರಾವಳಿ ಭಾಗದವರಿಗೆ ಅವಕಾಶ ನೀಡಿ ಪ್ರಾದೇಶಿಕ ಅಸಮತೋಲನ ಕಾಪಾಡಬೇಕಿದೆ ಎಂಬುದಾಗಿ ಮುಖ್ಯ’ ಎಂದು ಹೇಳಿದ್ದಾರೆ.

ಇಡೀ ದಿನ ಕುತೂಹಲ: ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಸಚಿವಾಕಾಂಕ್ಷಿಗಳೊಂದಿಗೆ ಮಾತುಕತೆ ನಡೆಸಿದ ಯಡಿಯೂರಪ್ಪ ಅವರು ಬಳಿಕ ಕಲಬುರಗಿಗೆ ತೆರಳಿದ್ದರು. ಅಲ್ಲಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಉಪಚುನಾವಣೆಯಲ್ಲಿ ಗೆದ್ದ 10 ಮಂದಿ ಸಚಿವರಾಗುವುದು ಖಚಿತವಾಗಿದೆ. ಉಳಿದವರ ಹೈಕಮಾಂಡ್‌ ಸೂಚನೆಗೆ ಕಾಯುತ್ತಿರುವುದಾಗಿ ಹೇಳಿದ್ದರು. ರಾತ್ರಿ 8.30ರ ವೇಳೆಗೆ ಬೆಂಗಳೂರಿನ ಡಾಲರ್ ಕಾಲೋನಿ ನಿವಾಸದ ಬಳಿ 10 ಮಂದಿಯಷ್ಟೇ ಸಚಿವರಾಗಲಿದ್ದಾರೆ ಎಂದು ಘೋಷಿಸಿದರು. ಆ ಮೂಲಕ ಇಡೀ ದಿನ ಮೂಡಿದ್ದ ಕುತೂಹಲಕ್ಕೆ ತೆರೆಬಿತ್ತು.

ಕತ್ತಿಗೆ ಅವಕಾಶ ಜೀವಂತ?: ಎಂಟು ಬಾರಿ ಶಾಸಕರಾಗಿರುವ ಉಮೇಶ್‌ ಕತ್ತಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದು ಯಡಿಯೂರಪ್ಪ ಅವರು ಬಯಕೆ. ಹಾಗಾಗಿ ಆರಂಭದಿಂದಲೂ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನೂ ನೀಡುತ್ತಾ ಬಂದಿ ದ್ದರು. ಆದರೆ ಸದ್ಯ ಮೂಲ ಬಿಜೆಪಿಯಿಂದ ಯಾರಿಗೂ ಸಚಿವ ಸ್ಥಾನ ಬೇಡ ಎಂದು ಹೈಕಮಾಂಡ್‌ ಸೂಚಿಸಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಉಮೇಶ್‌ ಕತ್ತಿ ಅವರು ಸಚಿವರಾಗುವ ಅವಕಾಶ ತಪ್ಪಿದೆ. ಹಾಗಿದ್ದರೂ ಬೆಳಗಾವಿ ಜಿಲ್ಲೆಯ ಅಥಣಿಯಿಂದ ಗೆದ್ದ ಮಹೇಶ್‌ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಿಲ್ಲ. ಹಾಗಾಗಿ ಮುಂದೆ ಲಿಂಗಾಯಿತ ಕೋಟಾದಲ್ಲಿ ಮತ್ತೂಬ್ಬರಿಗೆ ಸಚಿವ ಸ್ಥಾನ ನೀಡುವುದಾದರೆ ಆಗ ಉಮೇಶ್‌ ಕತ್ತಿಯವರನ್ನೇ ಪರಿಗಣಿಸಲು ಅವಕಾಶವಿದ್ದು, ಅವರಿಗೆ ಸಚಿವರಾಗುವ ಅವಕಾಶ ಇನ್ನೂ ಜೀವಂತವಾದಂತಿದೆ.

ದೆಹಲಿಯಿಂದ ರಾಷ್ಟ್ರ ನಾಯಕರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮಾತನಾಡಿದ್ದು, 10 ಮಂದಿಯನ್ನಷ್ಟೇ ಗುರುವಾರ ಸಂಪುಟಕ್ಕೆ ತೆಗೆದುಕೊಳ್ಳಿ. ಉಳಿದ ವಿಚಾರಗಳ ಬಗ್ಗೆ ದೆಹಲಿಗೆ ಬನ್ನಿ ಎಂದು ಸೂಚಿಸಿದ್ದಾರೆ. 100ಕ್ಕೆ 100 ಉಮೇಶ್‌ ಕತ್ತಿಯವರನ್ನು ಮಂತ್ರಿ ಮಾಡುತ್ತೇವೆ. ಈ ಭರವಸೆಯನ್ನು ಉಮೇಶ್‌ ಕತ್ತಿಯವರಿಗೂ ನೀಡಿದ್ದೇನೆ. ಶಾಸಕ ಮಹೇಶ್‌ ಕುಮಟಳ್ಳಿ ಅವರನ್ನು ಸಚಿವರನ್ನಾಗಿ ಮಾಡುವುದು ಕಷ್ಟವಾಗಲಿದೆ. ಅವರನ್ನು ಕರೆದು ಮಾತನಾಡುತ್ತಿದ್ದೇನೆ. ಅವರಿಗೆ ಬೇರೆ ಜವಾಬ್ದಾರಿ ಕೊಡುವ ಪ್ರಯತ್ನ ಮಾಡುತ್ತೇನೆ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ದಿನಾಂಕ 05-02-2020ನೇ ಸಾಯಂಕಾಲ 4.34 ಗಂಟೆ. ಈ ದಿನ ಈ ಸಮಯ ಮಧುರ ಕ್ಷಣ. ಬೆಳಗ್ಗೆ 10.30ಕ್ಕೆ ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಂದ ಖುದ್ದು ಕರೆ. ಆತ್ಮೀಯರೆ, ನಾಳೆ ಬೆಳಗ್ಗೆ 10.30ಕ್ಕೆ ಕರ್ನಾಟಕ ಸರ್ಕಾರದ ಸಂಪುಟ ದರ್ಜೆಯ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ.
-ಬಿ.ಸಿ. ಪಾಟೀಲ್‌

Advertisement

Udayavani is now on Telegram. Click here to join our channel and stay updated with the latest news.

Next