ಚನ್ನಪಟ್ಟಣ: ”ಸಚಿವ ಜಮೀರ್ ಅಹಮದ್ ಖಾನ್ ಅವರ ಹೇಳಿಕೆಯಿಂದ ಒಂದಷ್ಟು ಲಾಭ ಆದರೂ ಒಂದಷ್ಟು ನಷ್ಟವೂ ಆಗಿದ್ದು, ಹೇಳಿಕೆ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು” ಎಂದು ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿಪಿ.ಯೋಗೇಶ್ವರ್ ಅವರು ಹೇಳಿಕೆ ನೀಡಿ ಪರೋಕ್ಷವಾಗಿ ಸೋಲಿನ ಆತಂಕ ಹೊರ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ(ನ14 )ಮಾತನಾಡಿದ ಯೋಗೇಶ್ವರ್ ‘ ಚನ್ನಪಟ್ಟಣದಲ್ಲಿ ಎರಡೂ ಪಕ್ಷಗಳೂ ಸಮಬಲದ ಹೋರಾಟ ನೀಡಿವೆ. ಆದರೆ ದೇವೇಗೌಡ ಅವರು ಪ್ರಬಲ ಶಕ್ತಿ, ಅದರಲ್ಲಿ ಎರಡು ಮಾತಿಲ್ಲ. ದೇವೇಗೌಡರನ್ನು, ಕುಮಾರಸ್ವಾಮಿ ಅವರನ್ನು ಬೈದರೆ ಸಹಿಸಿಕೊಳ್ಳದವರು ಇದ್ದಾರೆ. ಹಾಗಾಗಿ, ಜಮೀರ್ ಅವರ ಹೇಳಿಕೆ ನಮ್ಮ ಮೇಲೆ ಪರಿಣಾಮ ಬೀರಬಹುದು, ನಮಗೆ ತೊಂದರೆ ಆಗಬಹುದು ‘ ಎಂದರು.
‘ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಚನ್ನಪಟ್ಟಣದಲ್ಲಿ ಪಡೆದ ಮತಗಳು 15 ಸಾವಿರ. ನಾವು ಈ ಬಾರಿ ಗೆಲ್ಲಬೇಕಾದರೆ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ದಾಟಬೇಕಾಗುತ್ತದೆ. ಹಿಂದಿನ ಚುನಾವಣೆಗಳಲ್ಲಿ ನಾನು ಅತೀ ಹೆಚ್ಚು ಅಂದರೆ 85 ಸಾವಿರ ಮತ ಪಡೆದಿದ್ದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ -ಬಿಜೆಪಿ ಒಂದಾದ ಮೇಲೆ ಮೇಲೆ ಚನ್ನಪಟ್ಟಣದಲ್ಲಿ 25 ಸಾವಿರ ಲೀಡ್ ಬಂದಿತ್ತು’ ಎಂದು ಮತಗಳ ಲೆಕ್ಕಾಚಾರವನ್ನೂ ಯೋಗೇಶ್ವರ್ ಮುಂದಿಟ್ಟರು.
‘ನಾನು ಕಾಂಗ್ರೆಸ್ ಗೆ ಸೇರಲೇಬೇಕಾದ ಅನಿವಾರ್ಯತೆಯನ್ನು ಕುಮಾರಸ್ವಾಮಿ ಅವರು ನಿರ್ಮಾಣ ಮಾಡಿದರು. ನಾನು ಕ್ಷೇತ್ರದಲ್ಲಿ ಕಟ್ಟಿದಂತ ಪಕ್ಷ ಬಿಟ್ಟು ಮಾತೃ ಪಕ್ಷಕ್ಕೆ ಮರಳಿದ್ದೇನೆ. ಸಂಘಟಿತ ಹೋರಾಟ ಮಾಡಿದ್ದು, ಕಳೆದ ಎರಡು ಚುನಾವಣೆಗಳ ಫಲಿತಾಂಶ ನೋಡಿದರೆ, ಕಾಂಗ್ರೆಸ್ ಅಸ್ತಿತ್ವವಿಲ್ಲ. ಸರಿ-ತಪ್ಪುಗಳನ್ನು ಈ ಚುನಾವಣೆ ತೀರ್ಮಾನ ಮಾಡಲಿದೆ. ನಮಗಿದ್ದ ಸಮಯದಲ್ಲಿ ಎಲ್ಲಾ ಹೋರಾಟ ಮಾಡಿದ್ದೇವೆ’ ಎಂದರು.
‘ನಾನು ಎರಡು ಬಾರಿ ಕಾಂಗ್ರೆಸ್ ನಿಂದ ಗೆದ್ದಿದ್ದೆ.ನಾನು ಪಕ್ಷ ಬಿಟ್ಟಿದ್ದ ನಂತರ ಕಾಂಗ್ರೆಸ್ ಇಲ್ಲಿ ಚೇತರಿಸಿಕೊಂಡಿರಲಿಲ್ಲ. ಲೋಕಸಭಾ ಚುನಾವಣೆ ವೇಳೆ ಡಿ.ಕೆ.ಸುರೇಶ್ ಅವರಿಗೆ ಒಂದಷ್ಟು ಮತಗಳು ಬಂದಿರಬಹುದು. ಬೇರೆ ಬೇರೆ ಕಾರಣಗಳಿಂದ ದೇವೇಗೌಡರ ವಿರೋಧಿ ಮನಸ್ಥಿತಿಯುಳ್ಳವರ ಮತಗಳು ಬಂದಿರಬಹುದು. ಲೋಕಸಭಾ ಚುನಾವಣೆ ಬೇರೆ, ವಿಧಾನಸಭಾ ಚುನಾವಣೆ ಬೇರೆ. ಒಂದು ತರ ಐಪಿಎಲ್ ತರ. ಆಟಗಾರನ ಟೀಮ್ ಬದಲಾದ ಹಾಗೆ ಇಲ್ಲಿಯೂ ಆಗಿದೆ.ಸದ್ಯ ಪರಿಸ್ಥಿತಿ ವಿಚಿತ್ರವಾಗಿದೆ. ಮಿಶ್ರಣವಾಗಿದೆ. ನನ್ನ ಆತ್ಮ ವಿಶ್ವಾಸ ಕುಗ್ಗಿಲ್ಲ’ ಎಂದರು.
ನಾವು ಲೋಕಸಭಾ ಚುನಾವಣೆಯಲ್ಲಿ ಅವರ ವಿರುದ್ಧ ಕೆಲಸ ಮಾಡಿ ಈಗ ಅವರೊಂದಿಗೆ ಸೇರಿದ್ದೇವೆ. ಮತದಾರ ಯಾವ ತೀರ್ಮಾನ ಕೈಗೊಳ್ಳುತ್ತಾನೆ ಎನ್ನುವುದು ನನಗೀಗ ಯಕ್ಷ ಪ್ರಶ್ನೆ. ನಿಖಿಲ್ ಪರ ಪ್ರಭಾವಿ ನಾಯಕರು ಬಂದು ಪ್ರಚಾರ ಮಾಡಿದರೆ, ನನ್ನ ಪರ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಹೋರಾಟ ಮಾಡಿದ್ದಾರೆ. ಫಲಿತಾಂಶ ಭದ್ರವಾಗಿದೆ. ಕಾದು ನೋಡೋಣ’ ಎಂದು ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.
ಜಮೀರ್ ಅವರು ಕರಿಯ ಕುಮಾರಸ್ವಾಮಿ ಎಂದು ಹೇಳಿಕೆ ನೀಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ವಿವಾದ ತಾರಕಕ್ಕೇರಿದ ನಂತರ ಜಮೀರ್ ಬಹಿರಂಗ ಕ್ಷಮೆಯಾಚನೆಯನ್ನೂ ಮಾಡಿದ್ದರು.