ರಾಯಚೂರು: ಕಳೆದ ಕೆಲ ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಶೈಕ್ಷಣಿಕ ಸಂಸ್ಥೆಗಳು ಹುಟ್ಟಿಕೊಂಡಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಾಣಗೊಳ್ಳುತ್ತಿರುವುದು ಸಮಾಧಾನಕರ ಸಂಗತಿ ಎಂದು ಎಐಸಿಸಿ ಕಾರ್ಯಕಾರಿಣಿ ಸದಸ್ಯ ಎನ್.ಎಸ್. ಬೋಸರಾಜ್ ತಿಳಿಸಿದರು.
ನಗರದ ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಏರ್ಪಡಿಸಿದ್ದ ಎಸ್‌ಕೆಇಎಸ್ ಮತ್ತು ನರ್ಸಿಂಗ್ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 371(ಜೆ) ವಿಶೇಷ ಸ್ಥಾನಮಾನದಡಿ ಸಿಗುವ ಶೈಕ್ಷಣಿಕ ಮೀಸಲಾತಿ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ಉನ್ನತ ವ್ಯಾಸಂಗ ಮಾಡುವ ಮೂಲಕ ಈ ಭಾಗದ ಏಳ್ಗೆಗೆ ಯುವಕರು ಶ್ರಮಿಸಬೇಕು ಎಂದು ಹೇಳಿದರು.
ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ| ಸುರೇಂದ್ರ ಬಾಬು ಮಾತನಾಡಿ, ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಗಲಿರುಳು ಸೈನಿಕರಂತೆ ಕೋವಿಡ್ ಕೆಲಸದಲ್ಲಿ ತೊಡಗಿದ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳ ಶ್ರಮ ಮರೆಯುವಂತಿಲ್ಲ. ಅವರ ಈ ಸೇವೆ ಮುಂದೆ ವೃತ್ತಿಯಲ್ಲಿ ಸಾಕಷ್ಟು ಅನುಕೂಲವಾಗಲಿದೆ ಎಂದರು.
ತಾಲೂಕು ಆರೋಗ್ಯಾಧಿ ಕಾರಿ ಡಾ| ಶಾಕೀರ್ ಮೋಹಿನುದ್ದಿನ್ ಮಾತನಾಡಿ, ಎಲ್ಲ ವಿದ್ಯಾರ್ಥಿಗಳು ಚೆನ್ನಾಗಿ ಅಧ್ಯಯನ ಮಾಡುವ ಮೂಲಕ ಪ್ಯಾರಾ ಮೆಡಿಕಲ್ ಶಿಕ್ಷಣ ಪಡೆದು ವೈದ್ಯಕೀಯ ಸೇವೆಗೆ ಬೆನ್ನೆಲುಬಾಗಿ ನಿಲ್ಲುವಂತಾಗಬೇಕು ಎಂದರು.
ಅಮರೇಶ್ ರಾಯಕೋಟಿ, ದಂಡೆಪ್ಪ ಬಿರಾದಾರ, ಶಿವರಾಚಯ್ಯ, ಬಿ. ವಿಜಯ ಮಾತನಾಡಿದರು. ಬಾಳಪ್ಪ, ಮಂಜುಳಾ ಕಾರ್ಯಕ್ರಮ ನಡೆಸಿಕೊಟ್ಟರು. ಸಂಸ್ಥೆ ಕಾರ್ಯದರ್ಶಿ ಡಾ| ಬಾಬುರಾವ್ ಎಂ. ಶೇಗುಣಿಸಿ ಅಧ್ಯಕ್ಷತೆ ವಹಿಸಿದ್ದರು.