ಬೆಂಗಳೂರು: ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ. ಖಾಸಗಿಯವರ ಅತಿಯಾದ ಪಾಲ್ಗೊಳ್ಳುವಿಕೆಯನ್ನು ತಡೆದು ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಅಗತ್ಯವಿದೆ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ನವ ಕರ್ನಾಟಕ ನಿರ್ಮಾಣ ಮಂಥನ ಸಭೆಯಲ್ಲಿ ಶಿಕ್ಷಣ ಹಾಗೂ ಆರೋಗ್ಯ ವಿಷಯವಾಗಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ನವ್ಯ ಶ್ರೀಮಂತಿಕೆಯ ವ್ಯವಸ್ಥೆ ಸೃಷ್ಟಿಯಾಗಿದೆ. ಸರ್ಕಾರಿ ಶಾಲೆಗಳು ಬಡವರಿಗೆ ಮತ್ತು ಖಾಸಗಿ ಶಾಲೆಗಳು ಶ್ರೀಮಂತರಿಗೆ ಎಂಬುದಾಗಿದೆ. ಇದನ್ನು ತಪ್ಪಿಸಿ, 2025ರ ವೇಳೆಗೆ ಶಿಕ್ಷಣ ಸಾಮಾನ್ಯರ ಸೊತ್ತಾಗುವಂತೆ ಮಾಡಬೇಕು ಎಂದರು.
ಉದ್ಯೋಗಕ್ಕಾಗಿ ಕೆಲಸ ಮಾಡುವ ಶಿಕ್ಷಕರ ಮಾನಸಿಕತೆ ಬದಲಿಸಬೇಕು. ಮಕ್ಕಳಿಗೆ ಶಿಕ್ಷಣ ವ್ಯವಸ್ಥೆಯ ಪರಿಕಲ್ಪನೆಯನ್ನು ನೀಡಿ ಸುಶಿಕ್ಷಿತರನ್ನಾಗಿ ಮಾಡಬೇಕು. ರಾಜ್ಯದ 53 ವೈದ್ಯಕೀಯ ಕಾಲೇಜಿಂದ ಪ್ರತಿ ವರ್ಷ ಕನಿಷ್ಠ 500 ವೈದ್ಯರು ಹೊರಬರುತ್ತಾರೆ. ಆದರೂ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ವೈದ್ಯಕೀಯ ಪದವೀಧರರು ಸರ್ಕಾರಿ ಸೇವೆಗೆ ಮನಸ್ಸು ಮಾಡುತ್ತಿಲ್ಲ.
900 ತಜ್ಞ ವೈದ್ಯರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಬದಲಿಗೆ ಹರಾಜು ಮೂಲಕ ನೇಮಕ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸರ್ಕಾರಿ ಸೀಟು ಪಡೆದು ವೈದ್ಯಕೀಯ ಶಿಕ್ಷಣ ಪೂರೈಸಿದವರು ವಿದೇಶದಲ್ಲಿ ಸೇವೆ ಮಾಡುತ್ತಾರೆ. ಕರ್ನಾಟಕ ವೈದ್ಯರನ್ನು ರಫ್ತು ಮಾಡುವ ಕೇಂದ್ರವಲ್ಲ. ಇದಕ್ಕೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಬೇಕಿದೆ ಎಂದರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಸರ್ಕಾರಿ ಶಾಲೆ ಮುಚ್ಚುವುದನ್ನು ನಿಲ್ಲಿಸಬೇಕು. ಬುಡಕಟ್ಟು ಸಮುದಾಯದ ಮಕ್ಕಳಿಗೆ ಶಿಕ್ಷಣವನ್ನು ಆದ್ಯತೆಯಿಂದ ನೀಡಬೇಕು ಎಂದು ಸಲಹೆ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಹನುಮಂತಯ್ಯ, ತಜ್ಞ ಡಾ.ಸುದರ್ಶನ್, ರಾಜ್ಯಸಭಾ ಸದಸ್ಯ ರಾಜೀವ್‌ಗೌಡ ಹಾಜರಿದ್ದರು.
ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ: ವಿಷನ್-2025 ಸಂಬಂಧಿಸಿದಂತೆ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಾದ ಡಿ.ಎನ್.ಭುವನ್, ಎಂ.ಎಲ್.ಅಭಯ್, ವರುಣ, ಲಕ್ಷ್ಮೀ, ಪೂಜಾ ಜಾಹುದ್ದಾರ್ ಮತ್ತು ಮಧುಕೀರ್ತಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಾದ ಇಬ್ರಾಹಿಂ ಕಲಿಲೂಲ್ಲ, ಆನಂದ್, ಪ್ರದೀಪ್, ಶೃತಿ, ಶ್ವೇತಾ, ಮೇರಿ ಡಿಸೋಜಾ, ಮುಬಾರಕ್ ಬಾನು ಹಾಗೂ ಮಮತ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರೆ ಗಣ್ಯರು ನಗದು ಬಹುಮಾನ ವಿತರಿಸಿದರು.