ಈ ನಾಡಿನ ಎಸೆಸೆಲ್ಸಿ ಮಕ್ಕಳಾದ ನೀವು ಇನ್ನು 24 ತಾಸುಗಳ ಒಳಗಾಗಿ ಪರೀಕ್ಷಾಂಗಣಕ್ಕೆ ಕಾಲಿಡಲಿದ್ದೀರಿ. ಇಡೀ ವರ್ಷ ಕಾತರದಿಂದ ಕಾಯುತ್ತಿದ್ದ ಆ ಘಳಿಗೆ ಬಂದೇ ಬಿಟ್ಟಿದೆ. ಕಳೆದ ಮಾರ್ಚ್‌ನಲ್ಲೇ ನೀವು ಪರೀಕ್ಷೆ ಬರೆದು ಇಷ್ಟು ಹೊತ್ತಿಗೆ ಮುಂದಿನ ತರಗತಿಯನ್ನು ಹುಡುಕಿಕೊಳ್ಳಬೇಕಿತ್ತು. ಆದರೆ ಇಡೀ ವಿಶ್ವವನ್ನು ಕಾಡುತ್ತಿರುವ ಕೋವಿಡ್ 19 ಸೋಂಕು ನಮ್ಮನ್ನು ಕೆಲವು ತಿಂಗಳ ಕಾಲ ಸಂಯಮದಿಂದ ಕಾಯುವಂತೆ ಮಾಡಿತು.
Advertisement
ಈ ಸುದೀರ್ಘ ಅವಧಿಯಲ್ಲಿ ನಿಮ್ಮನ್ನು ಯಾವ ರೀತಿಯ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯಿಸಬೇಕೆಂದು ಈ ತನಕವೂ ಹಗಲು ರಾತ್ರಿ ಎನ್ನದೇ ಹೆತ್ತವರು, ತಜ್ಞರು, ಅಧಿಕಾರಿಗಳು, ಪ್ರಾಜ್ಞರು, ಮುಖ್ಯಮಂತ್ರಿ, ಸಚಿವರು, ಶಾಸಕರ ಸಹಿತ ನಾಡಿನ ಹಲವಾರು ಮಂದಿ ಪ್ರಮುಖರೊಂದಿಗೆ ಚರ್ಚಿಸಲಾಗಿದೆ. ನಿಮ್ಮ ಭವಿಷ್ಯದ ಹಿತ ದೃಷ್ಟಿಯಿಂದ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಸಬೇಕೆನ್ನುವ ನಿರ್ಣಯವನ್ನು ಶಿಕ್ಷಣ ಇಲಾಖೆ ತೆಗೆದುಕೊಂಡಿದೆ. ಯಾವುದೇ ರೀತಿಯಲ್ಲಿಯೂ ನಿಮಗೆ ತೊಂದರೆಯಾಗದ ಸುರಕ್ಷಿತ ವಾತಾವರಣ ಪರೀಕ್ಷಾ ಕೇಂದ್ರದಲ್ಲಿ ಇರಲಿದೆ ಎಂಬ ಭರವಸೆಯನ್ನು ನಮ್ಮ ಇಲಾಖೆ ಈ ಮೂಲಕ ನಿಮಗೆ ನೀಡ ಬಯಸುತ್ತದೆ.
ಪ್ರತಿ ವರ್ಷ ಈ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ಮಾತ್ರವೇ ನಿರ್ವಹಿಸುತ್ತಿತ್ತು. ಆದರೆ ಈ ಬಾರಿ ಇಡೀ ಸರಕಾರ ಇದನ್ನು ನಿರ್ವಹಿಸಲು ಟೊಂಕ ಕಟ್ಟಿ ನಿಂತಿದೆ. ಆರೋಗ್ಯ ಇಲಾಖೆ, ಗೃಹ ಇಲಾಖೆ, ಸಾರಿಗೆ ಇಲಾಖೆ, ಸ್ಥಳೀಯ ಆಡಳಿತಗಳು ಪರೀಕ್ಷೆಯನ್ನು ನಿರ್ವಹಿಸಲು ಸನ್ನದ್ಧವಾಗಿ ನಿಂತಿವೆ. ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ ಮತ್ತು ಹೋಂ ಗಾರ್ಡ್ ಗಳು ನಿಮ್ಮ ಸುರಕ್ಷೆಗಾಗಿ ಸ್ವಯಂಸೇವಕರಾಗಿದ್ದಾರೆ. ನಿಮ್ಮ ಇಚ್ಛೆಯಂತೆ, ನಿಮ್ಮ ಹಿತಕ್ಕಾಗಿ ಈ ಪರೀಕ್ಷೆ ನಡೆಯುತ್ತಿದೆ. ಸುರಕ್ಷಿತವಾಗಿ ನಡೆಸುವ ನಮ್ಮ ಪರೀಕ್ಷೆಯನ್ನು ಇಡೀ ದೇಶ ಎದುರು ನೋಡುತ್ತಿದೆ. ರಾಜ್ಯದ ಘನ ಉಚ್ಚ ನ್ಯಾಯಾಲಯ ಮತ್ತು ದೇಶದ ಸರ್ವೋಚ್ಚ ನ್ಯಾಯಾಲಯವೂ ಇತ್ತ ದೃಷ್ಟಿ ನೆಟ್ಟಿವೆ. ಪರೀಕ್ಷೆಯನ್ನು ಸುರಕ್ಷಿತ ವಾತಾವರಣದಲ್ಲಿ ನಡೆಸುವ ಸಂಬಂಧ ನಾನು ರಾಜ್ಯದ ಪ್ರತೀ ಜಿಲ್ಲೆಗೂ ಎರಡೆರಡು ಬಾರಿ ಭೇಟಿ ನೀಡಿದ್ದೇನೆ. ಅಧಿಕಾರಿಗಳ ಸಭೆ ನಡೆಸಿದ್ದೇನೆ. ಹತ್ತಾರು ಬಾರಿ ವೀಡಿಯೋ ಕಾನ್ಫರೆನ್ಸ್ ಮತ್ತು ದೂರವಾಣಿ ಮೂಲಕ ಮಾತನಾಡಿ ಖಚಿತ ಪಡಿಸಿಕೊಂಡಿದ್ದೇನೆ. ಕಟ್ಟಕಡೆಯ ಪರೀಕ್ಷಾ ಕೇಂದ್ರದಲ್ಲಿಯೂ ಕೈಗೊಂಡ ವ್ಯವಸ್ಥೆ ಗಳ ಇಂಚಿಂಚು ಮಾಹಿತಿಯನ್ನೂ ಪಡೆದಿದ್ದೇನೆ, ಪಡೆಯುತ್ತಲೇ ಇದ್ದೇನೆ.
Related Articles
Advertisement
ನೀವು ಬರುವಲ್ಲಿಂದ ತೊಡಗಿ ಪರೀಕ್ಷೆ ಮುಗಿಸಿ ಮನೆಗೆ ಹೋಗುವ ತನಕವೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈ ದೃಷ್ಟಿಯಿಂದ ಬೆಳಗ್ಗೆ 7.30ಕ್ಕೆ ಪರೀಕ್ಷಾ ಕೇಂದ್ರಗಳು ತೆರೆದಿರುತ್ತವೆ. ಆ ವೇಳೆಯೊಳಗೆ ವೈದ್ಯಕೀಯ ಸಹಿತ ಎಲ್ಲ ಸಿಬಂದಿ ಹಾಜರಿರುತ್ತಾರೆ. ನೀವು ಬೆಳಗ್ಗೆ ಬೇಗ ಬಂದು ಹೊರಗೆ ಕಾಯುವ ಅಗತ್ಯವಿಲ್ಲ. ಅಕಸ್ಮಾತ್ ಮಾಸ್ಕ್ ಮರೆತು ಬಂದರೆ ಆತಂಕಪಡುವ ಅಗತ್ಯವಿಲ್ಲ. ಆರೋಗ್ಯ ಸಿಬಂದಿ ನಿಮಗೆ ಮಾಸ್ಕ್ ಕೊಡುತ್ತಾರೆ. ಸೋಂಕುಪೀಡಿತರು, ಶಂಕಿತರು, ಕ್ವಾರಂಟೈನ್‌ನಲ್ಲಿರುವವರೊಂದಿಗೆ ಸಂಪರ್ಕದಲ್ಲಿರುವ ಮಕ್ಕಳಿಗೆ ಈ ಪರೀಕ್ಷೆಗೆ ಅನುಮತಿ ನಿರಾಕರಿಸಲಾಗಿದೆ. ಅವರೆಲ್ಲ ಮುಂದಿನ ತಿಂಗಳ ಪೂರಕ ಪರೀಕ್ಷೆಗೆ ಹಾಜರಾಗುತ್ತಾರೆ.
ಇಂದು ಅಣಕು ಪ್ರದರ್ಶನಪರೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳಲಾದ ಎಲ್ಲ ವ್ಯವಸ್ಥೆ ಮತ್ತು ಸಾಮಾಜಿಕ ಸುರಕ್ಷಾ ಕ್ರಮಗಳನ್ನು ಕಾಣಿಸುವುದಕ್ಕಾಗಿ ಜೂ. 24ರಂದು ಬೆಳಗ್ಗೆ 11ರಿಂದ 2ರ ವರೆಗೆ ಪರೀಕ್ಷಾ ಕೇಂದ್ರಗಳ ಅಣಕು ಪ್ರದರ್ಶನ ನಡೆಸಲಾಗುವುದು. ಇಲಾಖೆಗಳ ಬದ್ಧತೆಯನ್ನು ನೀವೇ ಪರೀಕ್ಷಿಸಿ ಖಚಿತ ಪಡಿಸಿಕೊಳ್ಳಬಹುದು. ಆಶೀರ್ವದಿಸಿ ಕಳುಹಿಸಿಕೊಡಿ
ಮಕ್ಕಳ ಹೆತ್ತವರೇ, ನಿಮ್ಮ ಮಕ್ಕಳ ಬೆನ್ನುತಟ್ಟಿ, ಆಶೀರ್ವದಿಸಿ ಧೈರ್ಯವಾಗಿ ಪರೀಕ್ಷಾ ಕೇಂದ್ರಕ್ಕೆ ಕಳಿಸಿ. ಅವರ ಸುರಕ್ಷೆಗೆ ಶಿಕ್ಷಣ ಇಲಾಖೆಯಿದೆ. ಈ ಪರೀಕ್ಷೆ ನಮ್ಮೆಲ್ಲ ಮಕ್ಕಳ ಭವ್ಯ ಭವಿಷ್ಯಕ್ಕೆ ನಾಂದಿಯಾಗಲಿ. ಕೊರೊನಾ ಕಾಲದಲ್ಲೂ ಅದನ್ನು ಧೈರ್ಯವಾಗಿ ಎದುರಿಸಿದ ಕೀರ್ತಿ, ಯಶಸ್ಸು ನಿಮ್ಮದಾಗಲಿ. ಪರೀಕ್ಷೆಯ ಜಯದೊಂದಿಗೆ ಕೋವಿಡ್ 19 ಎದುರಿಸಿದ ಗಟ್ಟಿತನ ನಿಮ್ಮ ದೆಂಬುದು ಈ ದೇಶದ ಇತಿಹಾಸದ ಪುಟದಲ್ಲಿ ದಾಖಲಾಗಲಿ.
ಮಕ್ಕಳೇ ಗುಡ್‌ಲಕ್…