Advertisement

ಅಸ್ಸಾಂ ಸಿಎಂ ಭೇಟಿಯಾದ ಅಶ್ವತ್ಥ ನಾರಾಯಣ

12:56 PM Nov 30, 2021 | Team Udayavani |

ಬೆಂಗಳೂರು: ರಾಜ್ಯದ ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಸೋಮವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರನ್ನು ಗುವಾಹಟಿಯಲ್ಲಿ ಭೇಟಿಯಾಗಿ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಹಾಗೂ ಐಟಿ- ಬಿಟಿ, ನವೋದ್ಯಮ ಬೆಳವಣಿಗೆ ಕುರಿತ ವಿಚಾರಗಳನ್ನು ಹಂಚಿಕೊಂಡರು.

Advertisement

ಹಿಮಂತ ಬಿಸ್ವ ಶರ್ಮ ಅವರು ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಶ್ವತ್ಥನಾರಾಯಣ ಅವರನ್ನು ಅಸ್ಸಾಂಗೆ ಆಹ್ವಾನಿಸಿದ್ದರು. ಆ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳ ತಂಡದೊಂದಿಗೆ ಗುವಾಹಟಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಹೊಸ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ಹೊರಟಾಗ ಎದುರಾದ ಪ್ರಶ್ನೆಗಳು, ಅನುಮಾನಗಳು, ಅವುಗಳಿಗೆ ಉತ್ತರ ಕಂಡುಕೊಳ್ಳಲಾದ ಬಗೆ ಇನ್ನಿತರ ವಿಷಯಗಳನ್ನು ಅವರು ವಿವರವಾಗಿ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.

ಇದನ್ನೂ ಓದಿ;- ಬಾಲಕಿ ಪರವಾಗಿ ನಿಂತ ಧಾರವಾಡ ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವುದಕ್ಕಾಗಿ ಕರ್ನಾಟಕದಲ್ಲಿ ಮಾಡಲಾಗಿರುವ ತಾಂತ್ರಿಕ ನೆರವುಗಳ ಕುರಿತು ಗಮನಸೆಳೆದ ಅವರು, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ , ಸ್ಮಾರ್ಟ್‌ ಕ್ಲಾಸ್‌ ರೂಮ್‌ಗಳ ಸ್ಥಾಪನೆ, ಡಿಜಿಟಲ್‌ ಬೋಧನೆ-ಕಲಿಕೆಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್‌ ನೀಡಿರುವುದು, ಕಲಿಕಾ ನಿರ್ವಹಣಾ ವ್ಯವಸ್ಥೆ , ಬೋಧನೆ-ಕಲಿಕೆ ಪ್ರಕ್ರಿಯೆಯ ಮೌಲ್ಯಮಾಪನಕ್ಕೆ ಕೊಡಲಾಗಿರುವ ಒತ್ತು, ಆ ಮೂಲಕ ಕಲಿಕಾ ಸರಪಳಿಯ ಯಾವ ಕೊಂಡಿಯೂ ತಪ್ಪಿಹೋಗದಂತೆ ಹೇಗೆ ಕ್ರಮ ವಹಿಸಲಾಗಿದೆ ಎಂಬ ಬಗ್ಗೆ ಸಚಿವರು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಮಾವೇಶಗಳು ಹಾಗೂ ಕಾರ್ಯಾಗಾರಗಳನ್ನು ಏರ್ಪಡಿಸಿದ್ದು, ಪ್ರಶ್ನಾವಳಿಗಳ ಮೂಲಕ ಅನುಮಾನಗಳನ್ನು ಪರಿಹರಿಸಲು ಗಮನ ಕೇಂದ್ರೀಕರಿಸಿದ್ದು ಇತ್ಯಾದಿ ಕುರಿತು ತಿಳಿಸಿದರು.

Advertisement

ಅಸ್ಸಾಂನ ಹೆಚ್ಚಿನ ಜನರು ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿದ್ದಾರೆ. ಈಗಿನ ಅಂಕಿ-ಅಂಶದ ಪ್ರಕಾರ ಬೆಂಗಳೂರೊಂದರಲ್ಲೇ ಅಸ್ಸಾಂನ 1.5 ಲಕ್ಷ ನಾಗರಿಕರು ನೆಲೆಸಿದ್ದಾರೆ. ಇವರಲ್ಲಿ ವಿದ್ಯಾರ್ಥಿಗಳು ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತು ಅದರ ಪ್ರಯೋಜನಗಳನ್ನು ಪಡೆಯಬಹು ದಾಗಿದೆ ಎಂದು ಸಚಿವರು ಇದೇ ವೇಳೆ ಹೇಳಿದರು.

ರೈತ ಉತ್ಪಾದಕ ಸಂಘಗಳ ಪ್ರಗತಿ ಬಗ್ಗೆ ರಾಜ್ಯ ನವೋದ್ಯಮಗಳ ದೂರದರ್ಶಿ ಮಂಡಳಿ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌ ಅವರು ಮಾಹಿತಿ ನೀಡಿದರು. ಕೃಷಿ ಕಲ್ಪ ಯೋಜನೆ ಬಗ್ಗೆಯೂ ಅವರು ವಿವರಿಸಿದರು. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಮಂಡಳಿ ಆಯುಕ್ತ ಪಿ. ಪ್ರದೀಪ್‌, ಐಟಿ-ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್‌ ಅವರು ಪ್ರಾತ್ಯಾಕ್ಷಿಕೆ ನೀಡಿದರು. ಅಸ್ಸಾಂನ ವಿವಿಧ ಇಲಾಖೆಗಳ ಮಂತ್ರಿಗಳು, ಹಿರಿಯ ಅಧಿಕಾರಿಗಳು ಈ ವೇಳೆ ಅವರ ಇಲಾಖೆಗಳ ಮಾಹಿತಿಯನ್ನು ವಿನಿಮಯ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next