Advertisement

ಬಡವರಿಗೆ ಶಿಕ್ಷಣ, ಆರೋಗ್ಯ ಗಗನ ಕುಸುಮ

07:29 AM Feb 25, 2019 | |

ಅರಸೀಕೆರೆ: ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕಾದ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳು ಇಂದು ಖಾಸಗಿ ರಂಗದ ಕಪಿ ಮುಷ್ಠಿಗೆ ಸಿಲುಕಿ ಬಡವರ್ಗದ ಜನರಿಗೆ ಅನ್ಯಾಯವಾಗುತ್ತಿರುವುದರಿಂದ ಈ ಬಗ್ಗೆ ವರ್ಗ ಸಂಘರ್ಷ ಉಂಟಾಗವ ಸಾಧ್ಯತೆ ಇದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಎಚ್ಚರಿಸಿದರು.

Advertisement

ಅರಸೀಕೆರೆ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವರ್ಧಮಾನ್‌ ಸ್ಥಾನಕ್‌ ವಾಸಿ ಜೈನ್‌ ಶ್ರಾವಕ ಸಂಘ ಹಾಗೂ ಕಣಚೂರು ಮೆಡಿಕಲ್‌ ಕಾಲೇಜು ಮತ್ತು ಸೊಂಶೋಧನಾ ಕೇಂದ್ರ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಸಂಯುಕ್ತಾಶ್ರದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಪ್ರಜೆಗೂ ಅಗತ್ಯವಾಗಿ ಬೇಕಾಗುವ ಶಿಕ್ಷಣ ಮತ್ತು ಆರೋಗ್ಯ ಇಂದು ಬಡವರ್ಗದ ಜನರಿಗೆ ಕೈಗೆಟುಕದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹಾ ಸಂದರ್ಭದಲ್ಲಿ ಸ್ವಯಂ ಸೇವಾ ಸಂಘ ಸಂಸ್ಥೆಗಳು ಯಾವುದೇ ಪ್ರತಿಫ‌ಲ ಅಪೇಕ್ಷೆ ಇಲ್ಲದೆ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಉಚಿತ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಪ್ರಶಂಸಿಸಿದರು.

ಆರೋಗ್ಯ ಕ್ಷೇತ್ರಕ್ಕೆ 18 ಸಾವಿರ ಕೋಟಿ ರೂ.: ಪ್ರತಿವರ್ಷ ಸರ್ಕಾರ 18 ಸಾವಿರ ಕೋಟಿ ರೂ.ಗಳನ್ನು ಆರೋಗ್ಯ ಕ್ಷೇತ್ರದ ಸರ್ಕಾರಿ ಆಸ್ಪತ್ರೆ ನಿರ್ವಹಣೆಗೆ ಖರ್ಚು ಮಾಡುತ್ತಿದ್ದು, ವೈದ್ಯರು ಮತ್ತು ಸಿಬ್ಬಂದಿ ವರ್ಗದವರಿಗೆ 17 ಸಾವಿರ ಕೋಟಿ ರೂ. ಸಂಬಳಕ್ಕೆ ವೆಚ್ಚ ಮಾಡುತ್ತಿದ್ದು 1ಸಾವಿರ ಕೋಟಿ ರೂಗಳಲ್ಲಿ ಆಸ್ಪತ್ರೆಗೆ ಬೇಕಾದ ಔಷದ ಮತ್ತು ಉಪಕರಣಗಳನ್ನು ಖರೀದಿಸಿ ಸೌಲಭ್ಯಗಳನ್ನು ನೀಡಲಾಗುತ್ತದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಗೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ತಮ ಸೌಲಭ್ಯಗಳನ್ನು ನೀಡಲಾಗುತ್ತದೆಯಾದರೂ ಬಡವರ್ಗದ ಜನ ಖಾಸಗಿ ಆಸ್ಪತ್ರೆಗಳತ್ತ ಹೋಗಿ ಸಣ್ಣ-ಪುಟ್ಟ ಕಾಯಿಲೆಗೂ ತಮ್ಮಲಿರುವ ಬಡವೆ-ವಸ್ತುಗಳನ್ನು ಕಳೆದುಕೊಂಡು ಸಾಲಮಾಡಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

Advertisement

ಶೈಕ್ಷಣಿಕ ಕ್ಷೇತ್ರ ದುಬಾರಿ: ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹಣ ಮಾಡುವ ಉದ್ದೇಶದಿಂದಲೇ ಖಾಸಗಿ ರಂಗ ಪ್ರವೇಶಿಸಿದ್ದು ಬಡವರ್ಗದ ಹಾಗೂ ಮಧ್ಯಮ ವರ್ಗದ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಗಗನ ಕುಸುಮವಾಗಿದೆ. ಪ್ರತಿವರ್ಷ ಸರ್ಕಾರದ ಸೌಲಭ್ಯಗಳನ್ನು ಪಡೆದು 5,600ಮಂದಿ ವೈದ್ಯಕೀಯ ಶಿಕ್ಷಣ ಮುಗಿಸಿ ಹೊರಬರುತ್ತಿದ್ದಾರೆ. ಈ ಪೈಕಿ ಒಬ್ಬರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಮಾಡಲು ಸಿದ್ಧರಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಹಣದ ಆಸೆಗಾಗಿ ಹೋಗುತ್ತಿರುವ ಪರಿಣಾಮ ರಾಜ್ಯದಲ್ಲೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞವೈದ್ಯರ ಕೊರತೆ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಂಬಿಬಿಎಸ್‌ ವೈದ್ಯರ ಕೊರತೆ: ಅರಸೀಕೆರೆ ನಗರ ಸೇರಿದಂತೆ ತಾಲೂಕಿನಲ್ಲಿ 28ಸರ್ಕಾರಿ ಆಸ್ಪತ್ರೆಗಳಿದ್ದು ಗಂಡಸಿ ಹಾಗೂ ಬಾಣಾವರ ಹೋಬಳಿ ಕೇಂದ್ರದ ಆಸ್ಪತ್ರೆಗಳಲ್ಲಿ ಎಂಬಿಬಿಎಸ್‌ ಪದವಿ ಪಡೆದ ವೈದ್ಯರು ಸಿಗದೇ ಆರ್ಯುವೇದ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅರಸೀಕೆರೆ ನಗರದ ಜೆ.ಸಿ. ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ವೈದ್ಯರಿಲ್ಲದೇ ಹಾಸನ ಜಿಲ್ಲಾ ಕೇಂದ್ರಕ್ಕೆ ರೋಗಿಗಳನ್ನು ಕಳುಹಿಸುವ ದುಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಬಹುತೇಕ ಆಸ್ಪತ್ರೆಗಲ್ಲಿ ತಜ್ಞ ವೈದ್ಯರ ಕೊರತೆ ಕಾಡುತ್ತಿದ್ದು, ನಮ್ಮದೇ ಸರ್ಕಾರವಿದ್ದರೂ ಆಸ್ಪತ್ರೆಗೆ ತಜ್ಞವೈದ್ಯರನ್ನು ನೇಮಕ ಮಾಡಿಕೊಳ್ಳಲಾಗದಂತಹ ವ್ಯವಸ್ಥೆ ಜಾರಿಯಲ್ಲಿರುವುದು ಜನಪ್ರತಿನಿಧಿಗಳ ಕೈಕಟ್ಟಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವರ್ಧಮಾನ್‌ ಸ್ಥಾನಕ್‌ ವಾಸಿ ಜೈನ್‌ ಶ್ರಾವಕ ಸಂಘದ ಅಧ್ಯಕ್ಷ ಮಹಾವೀರ್‌ ಬೋರಾ, ಮಹಿಳಾ ಘಟಕದ ಅಧ್ಯಕ್ಷೆ ವಸಂತಾ ಬಾಯಿ, ಯುವ ಘಟನಕದ ಅಧ್ಯಕ್ಷ ಪುನೀತ್‌, ಕಣಚೂರು ಮೆಡಿಕಲ್‌ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬದ್ರಿನಾಥ್‌,ಮಾನವ ಹಕ್ಕುಗಳ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸೋಮಶೇಖರ್‌,ಮಾಜಿ ಅಧ್ಯಕ್ಷ ಚಗನ್‌ಲಾಲ್‌ ಬೋರಾ, ನಗರಸಭಾ ಮಾಜಿ ಅಧ್ಯಕ್ಷ ವಿದ್ಯಾಧರ್‌, ಮಾಜಿ ಉಪಾಧ್ಯಕ್ಷ ಪಾರ್ಥಸಾರಥಿ , ಸದಸ್ಯರಾದ ಗಿರೀಶ್‌, ಬಿಜೆಪಿ ನಗರಾಧ್ಯಕ್ಷ ಮನೋಜ್‌ ಕುಮಾರ್‌,ಎಸ್ಸಿ ಮೋರ್ಚಾ ಅಧ್ಯಕ್ಷ ಶಿವನ್‌ರಾಜ್‌ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next