Advertisement

Editorial: ಕಾಮಗಾರಿಯ ವಿಳಂಬ ಸಲ್ಲದು

03:41 PM Jan 06, 2025 | Team Udayavani |

ಆಧುನಿಕತೆ ಬೆಳೆದಂತೆ ರಸ್ತೆ ವಿಸ್ತರಣೆ, ಹೊಸ ರಸ್ತೆ ನಿರ್ಮಾಣ ಸಹಿತ ವಿವಿಧ ಕಾಮಗಾರಿಗಳು ಸಾಮಾನ್ಯವಾಗಿರುತ್ತವೆ. ಮಂಗಳೂರು-ಕಾರವಾರ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಈಗಲೂ ನಡೆಯುತ್ತಲೇ ಇದೆ. ಉಡುಪಿಯಲ್ಲಿ ಕೆಲವು ವರ್ಷಗಳ ಹಿಂದೆಯೇ ಚತುಷ್ಪಥ ಕಾಮಗಾರಿ ಪೂರ್ಣಗೊಂಡು ಹೆಜಮಾಡಿ, ಸಾಸ್ತಾನ ಮತ್ತು ಶಿರೂರಿನಲ್ಲಿ ಟೋಲ್‌ ಸಂಗ್ರಹವೂ ಆರಂಭವಾಗಿದೆ. ಚತುಷ್ಪಥ ಕಾಮಗಾರಿ ಪೂರ್ಣಗೊಂಡು ಹಲವು ವರ್ಷಗಳ ಅನಂತರ ಸಂತೆಕಟ್ಟೆಯಲ್ಲಿ ಓವರ್‌ಪಾಸ್‌ ನಿರ್ಮಿಸಬೇಕು ಎಂಬ ಬೇಡಿಕೆ ಸ್ಥಳೀಯರಿಂದಲೇ ಬಂತು. ಮೊದಮೊದಲು ಅಧಿಕಾರಿಗಳು, ಜನಪ್ರತಿನಿಧಿಗಳು ಇದಕ್ಕೆ ಒಪ್ಪಲಿಲ್ಲ. ಇನ್ನೊಂದೆಡೆ ಅಪಘಾತಗಳ ಸಂಖ್ಯೆಯೂ ಸಂತೆಕಟ್ಟೆಯಲ್ಲಿ ಹೆಚ್ಚುತ್ತಲೇ ಹೋಯಿತು. ಜೀವಹಾನಿಯೂ ಆಯಿತು. ಸ್ಥಳೀಯರ ಒತ್ತಡ ಇನ್ನಷ್ಟು ಹೆಚ್ಚಿದಂತೆ ವೆಹಿಕ್ಯುಲರ್‌ ಓವರ್‌ಪಾಸ್‌ ನಿರ್ಮಾಣ ಕಾಮಗಾರಿಗೆ ಅನುಮೋದನೆ ದೊರೆಯಿತು. ಕಾಮಗಾರಿ ಆರಂಭದಲ್ಲಿ ರಾಜಕೀಯ ಹಸ್ತಕ್ಷೇಪದಿಂದ ಸ್ವಲ್ಪಕಾಲ ಸ್ಥಗಿತಗೊಂಡಿತ್ತು. ಅನಂತರ ಪುನರ್‌ ಆರಂಭಗೊಂಡ ಕಾಮಗಾರಿ ಒಂದು ವರ್ಷವಾದರೂ ಒಂದು ಭಾಗದ ಕೆಲಸವೇ ಪೂರ್ಣಗೊಂಡಿರಲಿಲ್ಲ. ಹೊಂಡಗುಂಡಿಗಳಿಂದ ಸಂತೆಕಟ್ಟೆ ರಸ್ತೆ ಸಮಸ್ಯೆಯ ಆಗರವಾಯಿತು. ಸ್ಥಳೀಯರ ಸಹಿತ ಸವಾರರಿಂದ ಇನ್ನಷ್ಟು ಒತ್ತಡ ಹೆಚ್ಚಿತು. ಪರಿಣಾಮವಾಗಿ ಸರ್ವಿಸ್‌ ರಸ್ತೆ ನಿರ್ಮಾಣವಾಯಿತಾದರೂ ಪೂರ್ಣ ಪ್ರಮಾಣದಲ್ಲಿ ಸಮರ್ಪಕ ರಸ್ತೆ ಸಿಗಲಿಲ್ಲ. ಕಾಮಗಾರಿ ಇಂದಿಗೂ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಮುಂದಿನ ಮಳೆಗಾಲಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳ್ಳುವುದೂ ಅನುಮಾನ.

Advertisement

ಇನ್ನು ಇಂದ್ರಾಳಿ ಸ್ಟೀಲ್‌ ಬ್ರಿಡ್ಜ್ ಕಥೆಯೂ ಹೀಗೆಯೇ. ಐದು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರೈಲ್ವೇ ಇಲಾಖೆಗಳ ಗುದ್ದಾಟದಿಂದ ಕಾಮಗಾರಿ ಸಮರ್ಪಕವಾಗಿ ನಡೆದೇ ಇಲ್ಲ. ಈಗಲೂ ಸಣ್ಣಸಣ್ಣ ವಿಚಾರಗಳಿಗೂ ರೈಲ್ವೇ ಮತ್ತು ಪ್ರಾಧಿಕಾರದ ಅಧಿಕಾರಿಗಳ ನಡುವೆ ತಕರಾರು ಏಳುತ್ತಲೇ ಇವೆ. ಗರ್ಡರ್‌ ಬಂದು ತಿಂಗಳು ಕಳೆದಿದ್ದರೂ ಕಾಮಗಾರಿ ಆರಂಭವಾಗಿರಲಿಲ್ಲ. ಸ್ಥಳೀಯರಿಂದ ಒತ್ತಡ ಹೆಚ್ಚಿದಂತೆ ಜನಪ್ರತಿನಿಧಿಗಳು ಜಾಗೃತರಾಗಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕಾರ್ಯ ಮಾಡಿದರು. ಆದರೆ ನಿರೀಕ್ಷಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೂ ಬ್ರಿಡ್ಜ್ ನಿರ್ಮಾಣ ಸಂಬಂಧ ಗರ್ಡರ್‌ ಜೋಡಣೆಯೇ ಆಗುತ್ತಿದೆ. ಮಳೆಗಾಲಕ್ಕೆ ಮುನ್ನ ಕಾಮಗಾರಿ ಮುಗಿದರೆ ಉಡುಪಿ ಜನರ ಪುಣ್ಯವೇ ಸರಿ.

ಈಗ ಅಂಬಲಪಾಡಿಯಲ್ಲಿ ಓವರ್‌ಪಾಸ್‌ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಮಳೆಗಾಲ ಹೊರತುಪಡಿಸಿ ಮುಂದಿನ ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆ ಪಡೆದ ಸಂಸ್ಥೆ ತಿಳಿಸಿದೆ. ಟ್ರಾಫಿಕ್‌ ಕಿರಿಕಿರಿ ಈಗಾಗಲೇ ಆರಂಭವಾಗಿದೆ. ಸ್ಥಳೀಯ ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತಿದೆ. ದೊಡ್ಡ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಇವೆಲ್ಲ ಇದ್ದೇ ಇರುತ್ತದೆ. ಆದರೆ ಇವುಗಳ ಸಮರ್ಪಕ ನಿರ್ವಹಣೆ ಅತೀ ಅಗತ್ಯ.

ಸಂತೆಕಟ್ಟೆ ವೆಹಿಕ್ಯುಲರ್‌ ಓವರ್‌ಪಾಸ್‌, ಇಂದ್ರಾಳಿ ಸ್ಟೀಲ್‌ ಬ್ರಿಡ್ಜ್ ಹಾಗೂ ಅಂಬಲಪಾಡಿ ಓವರ್‌ಪಾಸ್‌ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದು ಸರಿಯಲ್ಲ. ಇಂತಹ ಕಾಮಗಾರಿಗಳನ್ನು ವರ್ಷಗಷ್ಟಲೆ ಎಳೆಯುವುದು ನಿಲ್ಲಬೇಕು. ನಿರ್ದಿಷ್ಟ ಕಾಲಾವಧಿಯಲ್ಲಿ ಕಾಮಗಾರಿ ಮುಗಿಯಬೇಕು. ಇಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಾನ ಇಚ್ಛಾಶಕ್ತಿ ತೋರಿಸುವ ಅಗತ್ಯ ಹೆಚ್ಚಿದೆ. ಸಾರ್ವಜನಿಕ ಕಾಮಗಾರಿಗಳು ವಿಳಂಬ ಇಲ್ಲದೆ ಮುಗಿಯುವಂತೆ ಆಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next