ಯಾವುದೇ ಮೂಲ ಸೌಕರ್ಯ ಅಭಿವೃದ್ಧಿಯಾಗಬೇಕಾದರೂ ತೆರಿಗೆಯೇ ಪ್ರಮುಖ ಆರ್ಥಿಕ ಮೂಲವಾಗಿದ್ದು, ಅದರಲ್ಲೂ ಗ್ರಾಮೀಣ ಭಾಗದ ಅಭಿವೃದ್ಧಿಗೆ ಪಂಚಾಯತ್‌ಗಳಲ್ಲಿ ಸಂಗ್ರಹವಾಗುವ ತೆರಿಗೆ ಬಹಳ ಮುಖ್ಯವಾಗಿದೆ. ಸಾಕಷ್ಟು ಪಂಚಾಯತ್‌ಗಳು ತೆರಿಗೆ ಸಂಗ್ರಹದಲ್ಲಿ ಬಹಳ ಹಿಂದಿದ್ದು, ಶೇ. 100 ತೆರಿಗೆ ಸಂಗ್ರಹ ಪ್ರಗತಿಗಾಗಿ ಸರಕಾರ ಸ್ಪಷ್ಟ ಕಾನೂನು ರೂಪಿಸುವ ಅಗತ್ಯವಿದೆ.
ಪಂಚಾಯತ್‌ಗಳಿಗೆ ಕೇಂದ್ರ, ರಾಜ್ಯ ಸರಕಾರಗಳಿಂದ ದುಡ್ಡು ಬರುತ್ತದೆ, ನಾವು ತೆರಿಗೆ ಪಾವತಿಸದೆ ಇದ್ದರೂ ಚಿಂತೆ ಇಲ್ಲ ಎಂಬ ಭಾವನೆ ಸಾಕಷ್ಟು ಮಂದಿಯಲ್ಲಿದ್ದು, ಇದು ಖಂಡಿತವಾಗಿಯೂ ತಪ್ಪು. ನಮ್ಮ ಊರಿನ ಅಭಿವೃದ್ಧಿ ನಮ್ಮ ತೆರಿಗೆಯ ಮೇಲೆ ನಿಂತಿದೆ ಎಂಬ ಭಾವನೆ ಬರುವ ರೀತಿಯಲ್ಲಿ ಪ್ರತಿಯೊಬ್ಬರೂ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಪಂಚಾಯತ್‌ಗಳು ತೆರಿಗೆಯಲ್ಲಿ ಪ್ರಗತಿ ಸಾಧಿಸಿದ್ದೇ ಆದಲ್ಲಿ ಅಭಿವೃದ್ಧಿಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ.
ಪಂಚಾಯತ್‌ಗಳಿಗೆ ಬೇರೆ ಬೇರೆ ರೀತಿಯ ತೆರಿಗೆಗಳು ಸಂಗ್ರಹವಾಗಬೇಕಿದ್ದು, ಒಂದೊಂದು ಕುಟುಂಬಗಳು ಸಾವಿರಾರು ರೂಪಾಯಿ ತೆರಿಗೆ ಬಾಕಿ ಇಟ್ಟಿರುವುದನ್ನು ಕಾಣಬಹುದಾಗಿದೆ. ಅಂತಹ ಕುಟುಂಬಗಳ ಮನಃಪರಿವರ್ತಿಸಿ ತೆರಿಗೆ ಪಾವತಿಸುವ ನಿಟ್ಟಿನಲ್ಲಿ ಪ್ರೇರೇಪಿಸಬೇಕಿದೆ.
ಈ ನಿಟ್ಟಿನಲ್ಲಿ ಸರಕಾರ ಗಂಭೀರ ಚಿಂತನೆ ನಡೆಸಬೇಕಿದ್ದು, ತೆರಿಗೆ ಪಾವತಿಯ ನಿಟ್ಟಿನಲ್ಲಿ ಪಂಚಾಯತ್‌ಗಳಿಗೆ ಬೆಂಬಲವಾಗಿ ನಿಲ್ಲಬೇಕಿದೆ. ತೆರಿಗೆ ಪಾವತಿಸದೆ ಇರುವ ಕುಟುಂಬಗಳಿಗೆ ಒಂದೆರಡು ಬಾರಿ ಎಚ್ಚರಿಕೆ ನೀಡಿ ಬಳಿಕ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ತಡೆ ಹಿಡಿಯುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ. ಹೀಗೆ ಒಂದೆರಡು ಬಾರಿ ಎಚ್ಚರಿಕೆ ನೀಡಿದಾಗ ತೆರಿಗೆ ಪಾವತಿ ಸಹಜ ಸ್ಥಿತಿಗೆ ಬರುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆದಾಗ ತೆರಿಗೆ ಪಾವತಿದಾರರು ಕೂಡ ಜಾಗೃತರಾಗಿ ಕ್ಲಪ್ತ ಸಮಯಕ್ಕೆ ತೆರಿಗೆ ಪಾವತಿ ಮಾಡುತ್ತಾರೆ.
ಈ ನಿಟ್ಟಿನಲ್ಲಿ ಸಂಬಂಧಿಸಿದ ಅ—ಕಾರಿಗಳು ಗಂಭೀರ ಚಿಂತನೆಯ ನಡೆಸಿ ಪೂರ್ಣ ಪ್ರಮಾಣದ ತೆರಿಗೆ ಸಂಗ್ರಹದ ನಿಟ್ಟಿನಲ್ಲಿ ಇತರ ಯಾವ ಮಾರ್ಗವನ್ನು ಅನುಸರಿಸಬಹುದು ಎಂದು ಯೋಚನೆ ನಡೆಸಬೇಕಿದೆ. ಹೀಗೆ ಮಾಡಿದಾಗ ಮಾತ್ರ ಪಂಚಾಯತ್ ತೆರಿಗೆಯಲ್ಲಿ ಸ್ವಾವಲಂಬನೆ ಸಾಧಿಸಬಹುದು. ಇಲ್ಲದೇ ಇದ್ದಲ್ಲಿ ತೆರಿಗೆ ಬಾಕಿಯ ಪಟ್ಟಿ ಇನ್ನಷ್ಟು ಉದ್ದವಾಗಿ ಮುಂದುವರಿಯುವ ಸಾಧ್ಯತೆ ಇದೆ. ಸ್ಥಳೀಯವಾಗಿ ಪಂಚಾಯತ್‌ಗಳ ಆಡಳಿತ ಮಂಡಳಿಗಳು ಕೂಡ ತೆರಿಗೆ ಸಂಗ್ರಹದ ನಿಟ್ಟಿನಲ್ಲಿ ಯೋಚನೆಯನ್ನು ಮಾಡಬೇಕಿದ್ದು, ಪಂಚಾಯತ್ ಸದಸ್ಯರು ಸ್ಥಳೀಯರೇ ಆಗಿರುವುದರಿಂದ ಅವರ ಮಾತಿಗೆ ಮನ್ನಣೆ ಸಿಗುವ ಸಾಧ್ಯತೆ ಇದೆ.
ಪಂಚಾಯತ್ ಸದಸ್ಯರು ತಮ್ಮ ಗ್ರಾಮದಲ್ಲಿ ಯಾರ ತೆರಿಗೆ ಬಾಕಿ ಇದೆ, ಅವರನ್ನು ಹೇಗೆ ಮನವೊಲಿಸಬಹುದು ಎಂಬ ಆಲೋಚನೆ ಮಾಡಿದಾಗ ತೆರಿಗೆ ಸಂಗ್ರಹ ವೇಗವನ್ನು ಪಡೆಯಬಹುದು. ಇದರಿಂದ ತಾವು ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ನೀಡಿದ ಭರವಸೆಗಳ ಈಡೇರಿಕೆಗೂ ಅನುಕೂಲವಾಗಲಿದೆ.
ಸರಕಾರ, ಪಂಚಾಯತ್ ಜನಪ್ರತಿನಿಧಿಗಳು, ಪಂಚಾಯತ್ ಅಧಿಕಾರಿಗಳು ಸಂಘಟಿತ ಪ್ರಯತ್ನ ನಡೆಸಿದಾಗ ಪಂಚಾಯತ್‌ಗಳ ಆದಾಯದ ಮೂಲ ತೆರಿಗೆ ಪಾವತಿ ಹೆಚ್ಚಳವಾಗಬಹುದು.