Advertisement

Editorial: ಇಂಟರ್‌ನೆಟ್‌-ನೆಟ್‌ವರ್ಕ್‌ ಸುಧಾರಣೆಗೆ ಸರಕಾರ ಮುಂದಾಗಲಿ

01:31 PM Jan 13, 2025 | Team Udayavani |

ಇಂಟರ್‌ನೆಟ್‌ ಎಂಬುದು ಇಂದು ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಎಲ್ಲ ಕಾರ್ಯಗಳಿಗೂ ಇಂಟರ್‌ನೆಟ್‌ ಬಳಕೆ ಪೂರಕವಾಗುತ್ತಿದೆ. ಇಂಟರ್‌ನೆಟ್‌ ಇಲ್ಲದೆ ಪ್ರಮುಖ ಕೆಲಸಗಳು ಮುಂದಕ್ಕೆ ಸಾಗುವುದೇ ಇಲ್ಲ. ಇಂಟರ್‌ನೆಟ್‌ ಮತ್ತು ಮೊಬೈಲ್‌ ನೆಟ್‌ವರ್ಕ್‌ ಅಷ್ಟರಮಟ್ಟಿಗೆ ಇಂದು ಪ್ರಾಮುಖ್ಯತೆ ಪಡೆದುಕೊಂಡಿದೆ. ಹಲವು ವರ್ಷಗಳೂ ಕಳೆದರೂ ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್‌ ಮತ್ತು ನೆಟ್‌ವರ್ಕ್‌ ಸೇವೆ ಇನ್ನೂ ಸುಧಾರಣೆಗೊಳ್ಳದಿರುವುದು ಡಿಜಿಟಲ್‌ ಇಂಡಿಯ ಪರಿಕಲ್ಪನೆ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಲು ಮುಜುಗರಪಡುವ ಸ್ಥಿತಿ ಬರಬಹುದು.

Advertisement

ಉದಾಹರಣೆಗೆ ಕುಂದಾಪುರ, ಕಾರ್ಕಳ, ಬೈಂದೂರು, ಹೆಬ್ರಿ, ಅಜೆಕಾರು, ಮಾಳ, ಈದು ಸಹಿತ ಮೊದಲಾದ ಭಾಗದಲ್ಲಿ ಸಮರ್ಪಕ ಇಂಟರ್‌ನೆಟ್‌ ಸೇವೆ ಇಲ್ಲದೆ ಜನರು ತೀವ್ರ ಕಿರಿಕಿರಿ ಅನುಭವಿಸುವ ಸ್ಥಿತಿಯಲ್ಲಿ ದಿನ ದೂಡುತ್ತಿದ್ದಾರೆ. ನಗರ, ಮಹಾನಗರ ಭಾಗದಲ್ಲಿ ಜನರು 5ಜಿ ನೆಟ್‌ವರ್ಕ್‌, ಡಾಟ ಸೇವೆ ಪಡೆಯುತ್ತಿದ್ದರೆ ಕಾಡಂಚಿನ ಗ್ರಾಮೀಣ ಭಾಗದ ಜನರು ಎರಡು ಕಡ್ಡಿ ನೆಟ್‌ವರ್ಕ್‌ ಪಡೆಯುವುದು ಕಷ್ಟಸಾಧ್ಯವಾಗಿದೆ. ತುರ್ತು ಸಂದರ್ಭದಲ್ಲಿ ಎಲ್ಲಿಯೂ ಗುಡ್ಡ, ಮರದ ಮೇಲೆ ಹತ್ತಿಕೊಂಡು ಮಾತನಾಡುವ ಸಂಕಷ್ಟ ಜನರದ್ದು.

ಗ್ರಾಮೀಣ ಭಾಗದಲ್ಲಿಯೂ ಮನರಂಜನೆ ಮತ್ತು ಸಂವಹನಕ್ಕಾಗಿ ಮಾತ್ರವಷ್ಟೇ ಇಂಟರ್‌ನೆಟ್‌, ಮೊಬೈಲ್‌ ಎಂಬ ಕಾಲಘಟ್ಟ ಕಳೆದು ಹೋಗಿದೆ. ಇಂದು ನಗರ, ಪಟ್ಟಣ, ಗ್ರಾಮೀಣ ಭಾಗದ ಜನರೂ ಇಂಟರ್‌ನೆಟ್‌ ಸೇವೆಗೆ ಒಗ್ಗಿಕೊಂಡಿದ್ದಾರೆ. ಶಿಕ್ಷಣ, ಆರೋಗ್ಯ, ಸರಕಾರಿ ಯೋಜನೆ ಫ‌ಲಾನುಭವಿಗಳಾಗಲು ಈ ಕಾಲಘಟ್ಟದಲ್ಲಿ ಇಂಟರ್‌ನೆಟ್‌ ಸೇವೆ ಅಗತ್ಯವಾಗಿದೆ. ಗ್ರಾಮೀಣ ಭಾಗದಲ್ಲಿರುವ ಅಲ್ಲೊಂದು, ಇಲ್ಲೊಂದು ಟವರ್‌ ನಿರ್ಮಾಣ ಮಾಡಿರುವ ಬಿಎಸ್‌ಎನ್‌ಎಲ್‌ ಸಮರ್ಪಕ ನಿರ್ವಹಣೆ ಮತ್ತು ಸುಧಾರಣೆ ತೋರದೆ ಜನರಿಗೆ 3ಜಿ ಸೇವೆಯನ್ನು ಸರಿಯಾಗಿ ಕೊಡಲು ಸಾಧ್ಯವಾಗುತ್ತಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಜನರ ಯಾವ ದೂರುಗಳನ್ನು ಸರಿಯಾಗಿ ಕೇಳಿಸಿಕೊಳ್ಳುತ್ತಿಲ್ಲ. ಬಿಎಸ್‌ಎನ್‌ಎಲ್‌ ವ್ಯವಸ್ಥೆಯನ್ನು ಸಂಪೂರ್ಣ ಖಾಸಗಿ ಟೆಲಿಕಾಂ ವ್ಯವಸ್ಥೆಯಂತೆ ಸುಧಾರಣೆಗೊಳಿಸಬೇಕು. ನುರಿತ ತಾಂತ್ರಿಕ ಅಧಿಕಾರಿಗಳು, ತಂತ್ರಜ್ಞರು ಬಿಎಸ್‌ಎನ್‌ಎಲ್‌ ಸಂಸ್ಥೆಗೆ ನಿಯೋಜಿಸಬೇಕು. ಅತ್ಯಾಧುನಿಕ ಪರಿಕರಗಳನ್ನು ಅಳವಡಿಸಿ ಮೇಲ್ದರ್ಜೆಗೇರಿಸಿ ಗ್ರಾಮೀಣ ಭಾಗ ಸಹಿತ ನಗರ, ಪಟ್ಟಣ ಭಾಗದಲ್ಲಿಯೂ ಉತ್ತಮವಾಗಿ ಮೊಬೈಲ್‌ ನೆಟ್‌ವರ್ಕ್‌, ಇಂಟರ್‌ನೆಟ್‌ ಸೇವೆಯನ್ನು ಒದಗಿಸಬೇಕು.

ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು, ಸಂಸದರು ನರಕಾರಕ್ಕೆ ನಿರಂತರ ಒತ್ತಡ ಹೇರಬೇಕಿದೆ. ಕಳೆದ ನಾಲ್ಕೈದು ವರ್ಷಗಳ ಹಿಂದೆ ಶೇ.83 ಗ್ರಾಮೀಣ ಭಾರತೀಯರಿಗೆ ಇಂಟರ್‌ನೆಟ್‌ ಎಂಬ ಆಪ್ತಮಿತ್ರನ ಪರಿಚಯವೇ ಇಲ್ಲ ಎಂದು ಭಾರತೀಯ ಇಂಟರ್‌ನೆಟ್‌ ಮತ್ತು ಮೊಬೈಲ್‌ ಬಳಕೆದಾರರ ಒಕ್ಕೂಟದ ಅಧ್ಯಯನ ವರದಿ ಉಲ್ಲೇಖೀಸಿತ್ತು. ಜನರಿಗೆ ಮನರಂಜನೆಗಿಂತಲೂ ಶಿಕ್ಷಣ, ಆರೋಗ್ಯ, ಕೃಷಿ, ಯುಪಿಐ ವಹಿವಾಟು ಸಹಿತ ಮೊದಲಾದ ಅಗತ್ಯ ಸೇವೆಗಳನ್ನು ಪಡೆಯಲು ಜನರಿಗೆ ಇಂದು ಇಂಟರ್‌ನೆಟ್‌ ಅಗತ್ಯವಾಗಿದೆ. ಇದರ ಕಾಯಕಲ್ಪಕ್ಕೆ ಸರಕಾರ ಮುಂದಾಗಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.