Advertisement

ಕೋವಿಡ್ ಸಂಕಷ್ಟ: ಆರ್ಥಿಕತೆಗೆ ಬಲ ತುಂಬುವ ಪ್ರಯತ್ನ

01:44 AM May 16, 2020 | Hari Prasad |

ರಾಷ್ಟ್ರವನ್ನುದ್ದೇಶಿಸಿ ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡುತ್ತಾ ಲಾಕ್‌ಡೌನ್‌ ಅನ್ನು ಪೂರ್ಣವಾಗಿ ಸಮಾಪ್ತಿಗೊಳಿಸುವುದಿಲ್ಲ, ಇದರ ಮುಂದಿನ ಚರಣವೂ ಆರಂಭವಾಗಲಿದ್ದು, ಅದರ ರೂಪ ಈಗಿನದ್ದಕ್ಕಿಂತ ಭಿನ್ನವಾಗಿರಲಿದೆ ಎನ್ನುವ ಸೂಚನೆ ನೀಡಿದ್ದಾರೆ.

Advertisement

ಅದರ ಅವಧಿ ಎಷ್ಟು ದೀರ್ಘ‌ವಾಗಲಿದೆ ಎನ್ನುವುದು ಸ್ಪಷ್ಟವಿಲ್ಲವಾದರೂ, ಒಟ್ಟಲ್ಲಿ ಕೋವಿಡ್ ವಿರುದ್ಧದ ಹೋರಾಟದ ನಡುವೆಯೇ ದೇಶದ ಆರ್ಥಿಕತೆಯನ್ನೂ ಎತ್ತಿ ನಿಲ್ಲಿಸುವ ಪ್ರಯತ್ನಕ್ಕೆ ವೇಗ ನೀಡಲಾಗುತ್ತದೆ ಎಂದಾಯಿತು.

ಇದೇ ವೇಳೆಯಲ್ಲೇ, ಕೋವಿಡ್ ಸಂಕಷ್ಟದಿಂದ ತತ್ತರಿಸಿರುವ ದೇಶದ ಆರ್ಥಿಕತೆಗೆ ಬಲ ತುಂಬಲು ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತ ಮಿಷನ್‌ನಡಿಯಲ್ಲಿ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಿರುವುದು ಸ್ವಾಗತಾರ್ಹ. ಅದರಲ್ಲೂ ಲಾಕ್‌ಡೌನ್‌ ನಿಂದಾಗಿ ದೇಶದ ಅನೇಕ ಆರ್ಥಿಕ ಗತಿ ವಿಧಿಗಳೇ ನಿಂತುಹೋಗಿರುವಾಗ ಅಭಿವೃದ್ಧಿ ಚಕ್ರಕ್ಕೆ ಚಾಲನೆ ನೀಡಲು ಇಂಥ ಕ್ರಮ ಅಗತ್ಯವಾಗಿತ್ತು.

ಆದರೆ, ಇದರ ಅನುಷ್ಠಾನ ಅತ್ಯಂತ ತುರ್ತಾಗಿ, ಸಕ್ಷಮವಾಗಿ ಆಗಬೇಕಿದೆ. ಲಾಕ್‌ಡೌನ್‌ ನಿಂದಾಗಿ ದೇಶದ ವ್ಯಾಪಾರ-ಉದ್ಯೋಗ ವಲಯಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಹೀಗಾಗಿ, ಆರ್ಥಿಕತೆಗೆ ಬಲ ತುಂಬುವ ತುರ್ತು ಎದುರಾಗಿರುವುದು ಸಹಜವೇ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಪ್ಯಾಕೇಜು ಹೇಗೆ ವಿನಿಯೋಗವಾಗಲಿದೆ ಎನ್ನುವುದನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವಿವರಿಸಿದ್ದಾರೆ.

ಎಂಎಸ್‌ಎಂಇಗಳಿಗೆ ಬಲ ತುಂಬುವುದು, ಸ್ಥಳೀಯ ಬ್ರಾಂಡ್‌ಗಳನ್ನು ಬೆಳೆಸುವುದು, ಅವನ್ನು ಜಾಗತಿಕ ಮಟ್ಟಕ್ಕೆ ಬೆಳೆಸುವುದು, ದೇಶವನ್ನು ಸ್ವಾವಲಂಬಿಯಾಗಿಸುವ ಪರಿಕಲ್ಪನೆ ಅತ್ಯುತ್ತಮವಾದದ್ದು.

Advertisement

ಈ ರೀತಿಯ ಪ್ಯಾಕೇಜ್‌ ಘೋಷಿಸಬೇಕೆಂದು ವಿಶೇಷಜ್ಞರು ಆರಂಭದಿಂದಲೇ ಸಲಹೆ ನೀಡುತ್ತಾ ಬಂದಿದ್ದರು. ಯಾವಾಗ ವ್ಯಾಪಾರ-ವಹಿವಾಟು ಎಂದಿನ ರೂಪಕ್ಕೆ ಮರಳುತ್ತದೋ ತಿಳಿಯದು, ಆದರೆ ಅಲ್ಲಿಯವರೆಗೂ ಆರ್ಥಿಕತೆಯು ಕುಸಿದುಬೀಳದಂತೆ ನೋಡಿಕೊಳ್ಳಲು ಈ ಪ್ಯಾಕೇಜ್‌ ಸಹಾಯ ಮಾಡಬಹುದು.

ಸರ್ಕಾರ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಉದ್ಯೋಗದ ದಾರಿಗಳನ್ನು ತೆರೆದಿದೆ. ಲಾಕ್‌ ಡೌನ್‌ನ ಮುಂದಿನ ಚರಣದಲ್ಲಿ ಯಾವ ಪ್ರದೇಶಗಳಲ್ಲಿ ಸಾಂಕ್ರಾಮಿಕ ಹರಡುವ ಅಪಾಯ ಕಡಿಮೆ ಇದೆಯೋ ಅಲ್ಲೆಲ್ಲ ಇನ್ನೂ ಅನ್ಯ ಕ್ಷೇತ್ರಗಳೂ ಹಳಿಯೇರಬಹುದು. ಆದರೆ, ಕೋವಿಡ್ ವಿರುದ್ಧದ ಸಾಂಘಿಕ ಹೋರಾಟವಂತೂ ನಿಲ್ಲುವಂತಿಲ್ಲ.

ಕೆಲವೇ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಆರೋಗ್ಯ ಸಚಿವಾಲಯವು, ಇನ್ಮುಂದೆ ನಾವು ಕೋವಿಡ್ ನೊಂದಿಗೆ ಬದುಕುವುದನ್ನು ಕಲಿಯಬೇಕು ಎಂದು ಹೇಳಿದ್ದವು. ಇದು ಸತ್ಯವೂ ಹೌದು. ಇಂದು ವಿಶ್ವಆರೋಗ್ಯ ಸಂಸ್ಥೆಯೂ ಕೂಡ ಇದೇ ಧಾಟಿಯಲ್ಲೇ ಮಾತನಾಡಲಾರಂಭಿಸಿದೆ. ಲಸಿಕೆ ಸದ್ಯಕ್ಕೆ ದೊರೆಯುವ ಬಗ್ಗೆ ವೈಜ್ಞಾನಿಕ ವಲಯವೂ ಅನುಮಾನ ವ್ಯಕ್ತಪಡಿಸುತ್ತಿದೆ.

ಈ ಹೋರಾಟದಲ್ಲಿ ಸರ್ಕಾರ, ಆರೋಗ್ಯ ಇಲಾಖೆಗಳಷ್ಟೇ ಅಲ್ಲದೇ, ಕಂಪೆನಿಗಳು, ಉದ್ಯೋಗದಾತರೂ ಕೈಜೋಡಿಸಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರೂ ಸುರಕ್ಷತಾ ಕ್ರಮಗಳನ್ನು ದೈನಂದಿನ ಅಂಗವಾಗಿ ರೂಢಿಸಿಕೊಳ್ಳಲೇಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next