Advertisement

ಏತಕ್ಕೆ ಬೇಕು ಅಧಿವೇಶನ? 

09:13 PM Mar 26, 2018 | Karthik A |

ಬಜೆಟ್‌ ಅಧಿವೇಶನದ ದ್ವಿತೀಯಾರ್ಧದ ಎರಡು ವಾರಗಳ ಅಧಿವೇಶನ ಸಂಪೂರ್ಣ ವ್ಯರ್ಥವಾಗಿದೆ. ಹದಿನೈದು ದಿನಗಳಲ್ಲಿ ಬರೀ ಐದು ತಾಸಿನ ಕಲಾಪ ನಡೆಸಲಷ್ಟೇ ಸಾಧ್ಯವಾಗಿದೆ. ನಿತ್ಯ ಬೆಳಗ್ಗೆ ಅಧಿವೇಶನ ಪ್ರಾರಂಭವಾಗುತ್ತಿರುವಂತೆಯೇ ವಿಪಕ್ಷಗಳ ಸದಸ್ಯರು ಗಲಭೆಗೆ ತೊಡಗುತ್ತಾರೆ. ಪರಸ್ಪರರ ವಿರುದ್ಧ ಘೋಷಣೆ ಕೂಗುವುದು, ಪ್ರತಿಭಟಿಸುವುದು, ಕಿತ್ತಾಡುವುದು ನಡೆಯುತ್ತದೆ. ಯಾರು ಏನು ಹೇಳುತ್ತಿದ್ದಾರೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಕಡೆಗೆ ಸ್ಪೀಕರ್‌ ಕಲಾಪವನ್ನು ಮುಂದೂಡುತ್ತಾರೆ. ಇದು ಸಂಸತ್ತಿನ ಉಭಯ ಸದನಗಳಲ್ಲಿ ನಿತ್ಯ ಕಾಣುವ ದೃಶ್ಯ. ಒಟ್ಟಾರೆಯಾಗಿ, ಸಂಸದೀಯ ಪ್ರಜಾಪ್ರಭುತ್ವ ಎನ್ನುವುದು ನಗೆಪಾಟಲಾಗುತ್ತಿದೆ. 

Advertisement

ದೇಶದ ಅತ್ಯಂತ ಮಹತ್ವದ ಹಣಕಾಸು ದಾಖಲೆಯೆಂದೇ ಪರಿಗಣಿಸಲ್ಪಟ್ಟಿರುವ ಮುಂಗಡಪತ್ರ ಯಾವುದೇ ಚರ್ಚೆಯಿಲ್ಲದೆ ಗದ್ದಲದ ನಡುವೆಯೇ ಮಂಜೂರಾಗಿದೆ. ಜನರ ಹಣವನ್ನು ಹೇಗೆ ಖರ್ಚು ಮಾಡಬೇಕೆನ್ನುವುದರ ಬಗ್ಗೆ ಸಂಸತ್ತಿನಲ್ಲಿ ಒಂದು ತಾಸಿನ ಚರ್ಚೆಯೂ ಆಗಿಲ್ಲ. ಈ ರೀತಿ ಒಂದೆರಡು ಮಸೂದೆಗಳನ್ನು ಮಂಜೂರು ಮಾಡಿಕೊಂಡಿರುವುದು ಬಿಟ್ಟರೆ ಉಳಿದಂತೆ ಹದಿನೈದು ದಿನಗಳಲ್ಲಿ ಆಗಿರುವುದು ಪ್ರಜೆಗಳ ತೆರಿಗೆ ಹಣದ ಪೋಲು ಮಾತ್ರ. ಇದನ್ನು ನೋಡಿ ಯಾವ ಪುರುಷಾರ್ಥಕ್ಕೆ ಅಧಿವೇಶನ ನಡೆಸಬೇಕು ಎಂದು ಕೇಳುತ್ತಿದ್ದಾರೆ ಜನರು. 

ಸರಕಾರ ಮತ್ತು ವಿಪಕ್ಷಗಳ ನಡುವೆ ಸೌಹಾರ್ದ ಸಂಬಂಧ ಇಲ್ಲದಿರುವುದೇ ಅಧಿವೇಶನ ವ್ಯರ್ಥವಾಗಲು ಮುಖ್ಯ ಕಾರಣ. ಉಭಯತ್ರರು ಪಟ್ಟು ಬಿಡಲು ತಯಾರಿಲ್ಲದ ಕಾರಣ ಸಂಸತ್ತು ಎನ್ನುವುದು ಸಂತೆಗಿಂತಲೂ ಕಡೆಯಾಗಿದೆ. ಸರ್ವಪಕ್ಷ ಸಭೆ ಕರೆಯುವ ಪರಂಪರೆಯೂ ಕಡಿಮೆಯಾಗುತ್ತಿದೆ. ಕರೆದರೂ ವಿಪಕ್ಷಗಳು ಏನಾದರೊಂದು ಕುಂಟು ನೆಪ ತೆಗೆದು ಬಹಿಷ್ಕಾರ ಹಾಕುತ್ತಿವೆ. ಒಟ್ಟಾರೆಯಾಗಿ ಸರಕಾರಕ್ಕಾಗಲಿ ವಿಪಕ್ಷಗಳಿಗಾಗಲಿ ಅಧಿವೇಶನ ನಡೆಯಬೇಕೆಂಬ ಇಚ್ಛಾಶಕ್ತಿಯೇ ಇಲ್ಲ. ನಡೆದರೂ ಪ್ರಧಾನಿ, ವಿಪಕ್ಷ ನಾಯಕ ಸೇರಿದಂತೆ ಪ್ರಮುಖರ್ಯಾರೂ ಭಾಗವಹಿಸುವುದಿಲ್ಲ. 

ಸಂಸತ್ತಿನಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಪಟ್ಟ ಚರ್ಚೆ ನಡೆಯುವ ಬದಲು ಪ್ರಾದೇಶಿಕ ಹಿತಾಸಕ್ತಿಗಳಿಗೆ ಮಹತ್ವ ಸಿಗುತ್ತಿರುವುದು ಇನ್ನೊಂದು ಕಾರಣ. ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಗಳ ಹಿತಕ್ಕಾಗಿ ಸಂಸತ್ತನ್ನು ಹೋರಾಟದ ಕಣವನ್ನಾಗಿ ಮಾಡಿಕೊಳ್ಳುತ್ತಿವೆ. ಆಂಧ್ರಕ್ಕೆ ವಿಶೇಷ ಸ್ಥಾನಮಾನ, ಕಾವೇರಿ ನೀರು ಹಂಚಿಕೆ ಇತ್ಯಾದಿ ಪ್ರಾದೇಶಿಕ ವಿಚಾರಗಳೇ ಮೇಲುಗೈ ಸಾಧಿಸುತ್ತಿವೆ. ಇವುಗಳ ಬಗ್ಗೆ ಚರ್ಚೆಯಾಗಬಾರದು ಎಂದಲ್ಲ, ಆದರೆ ಈ ವಿಷಯಗಳೇ ಪ್ರಧಾನವಾಗಿ ಉಳಿದ ರಾಷ್ಟ್ರೀಯ ವಿಚಾರಗಳು ಗೌಣವಾಗುತ್ತಿರುವುದು ಕಳವಳಕಾರಿ ವಿಚಾರ. 

ಪ್ರಸ್ತುತ ಸಂಸದರ ಸಂಸದೀಯ ನಿರ್ವಹಣೆ ಮತ್ತು ಚುನಾವಣೆಗೆ ಯಾವ ಸಂಬಂಧವೂ ಇಲ್ಲ. ಸಂಸತ್ತಿನಲ್ಲಿ ಹೇಗೆ ವರ್ತಿಸಿದರೂ ಅವರಿಗೆ ಅದು ತಪ್ಪು ಎಂದು ಅನ್ನಿಸುವುದಿಲ್ಲ. ಏಕೆಂದರೆ ಜನರು ಅವರು ಸಂಸತ್ತಿನಲ್ಲಿ ಏನು ಸಾಧನೆ ಮಾಡಿದ್ದಾರೆ ಎಂದು ನೋಡಿ ಮತ ಹಾಕುವುದಿಲ್ಲ. ಧರ್ಮ, ಜಾತಿ, ಹಣ, ಅಧಿಕಾರ, ಸ್ಥಳೀಯ ವಿಚಾರಗಳೇ ಚುನಾವಣೆ ಗೆಲ್ಲುವ ಮಾನದಂಡಗಳಾಗಿರುವ ಸಂಸದೀಯ ವರ್ತನೆ ಯಾರಿಗೆ ಬೇಕು? ವಾಜಪೇಯಿ, ಜಾರ್ಜ್‌ ಫ‌ರ್ನಾಂಡಿಸ್‌, ಸೋಮನಾಥ ಚಟರ್ಜಿ ಮುಂತಾದ ಸಂಸದೀಯ ಪಟುಗಳಂತೆ ಪ್ರೌಢವಾಗಿ ವಿಚಾರ ಮಂಡಿಸುವ ವಾಕ್ಪಟುತ್ವ ಎಷ್ಟು ಮಂದಿ ಸಂಸದರಿಗಿದೆ? ಪ್ರಸ್ತುತ ಸಂಸತ್ತಿನಲ್ಲಿ ಮಾಡುವ ಭಾಷಣಕ್ಕೂ ಚುನಾವಣಾ ಭಾಷಣಕ್ಕೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ.

Advertisement

ಸಂಸದರ ಇಂತಹ ವರ್ತನೆಗೆ ಕಡಿವಾಣ ಹಾಕಬೇಕಾದರೆ ಸ್ಪೀಕರ್‌ ಇನ್ನಷ್ಟು ಕಠಿಣವಾಗುವುದು ಅನಿವಾರ್ಯ. ಗಲಭೆ ಮಾಡುವ ಸಂಸದರನ್ನು ನಿರ್ದಾಕ್ಷಿಣ್ಯವಾಗಿ ಸಂಸತ್ತಿನಿಂದ ಹೊರಗೆ ಹಾಕುವ ದಿಟ್ಟತವನ್ನು ಉಭಯ ಸದನಗಳ ಸಭಾಪತಿಗಳು ತೋರಿಸಬೇಕು. ಇದು ಅಸಾಂವಿಧಾನಿಕವಾಗಿದ್ದರೂ ಗದ್ದಲ ಮಾಡುವುದಕ್ಕಾಗಿಯೇ ಸಂಸತ್ತಿಗೆ ಬರುವವರಿಗೆ ಬುದ್ಧಿಕಲಿಸಲು ಇಂತಹ ಕ್ರಮ ಅನಿವಾರ್ಯ. 

ವಿರೋಧ ಮತ್ತು ಚರ್ಚೆಯಲ್ಲೇ ಪ್ರಜಾಸತ್ತೆಯ ಸೊಗಸಿರುವುದು. ಪ್ರತಿಭಟನೆ ಪ್ರಜಾತಂತ್ರದ ಅವಿಭಾಜ್ಯ ಅಂಗ. ಹಾಗೆಂದು ಅಧಿವೇಶನವನ್ನು ಭಂಗಪಡಿಸಬೇಕೆಂಬ ಏಕೈಕ ಉದ್ದೇಶದಿಂದ ಪ್ರತಿಭಟನೆ ನಡೆಸುವುದರಿಂದ ಪ್ರಜಾಪ್ರಭುತ್ವಕ್ಕೆ ಇನ್ನಿಲ್ಲದ ಹಾನಿಯಾಗುತ್ತಿದೆ. ಚರ್ಚಿಸಬೇಕಾದ ಸಂಸದರು ರಾಜಕೀಯ ಪಕ್ಷಗಳ ಕಾರ್ಯಕರ್ತರಂತೆ ಘೋಷಣೆಗಳನ್ನು ಕೂಗುತ್ತಾ ಗದ್ದಲವೆಬ್ಬಿಸುವುದರಿಂದ ಅವರ ಮೌಲ್ಯದೊಂದಿಗೆ ಸಂಸತ್ತಿನ ಮೌಲ್ಯವೂ ಕಡಿಮೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next