ಬೆಳ್ತಂಗಡಿ: ತೀವ್ರ ಮಳೆ ಯಿಂದಾಗಿ ತಾಲೂಕಿನ ರಾಜ್ಯ, ರಾಷ್ಟ್ರೀಯ ಸಹಿತ ನಗರದ ರಸ್ತೆಗಳು ಹದಗೆಟ್ಟಿವೆ. ಆದರೆ ನಿನ್ನೆಯಿಂದ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಹೊಂಡ ಗುಂಡಿಗೆ ತೇಪೆ ಕಾರ್ಯ ನಡೆಸಲು ಹೊರಟಿದೆ.
ಹದಗೆಟ್ಟ ರಸ್ತೆಯ ಕುರಿತು ಉದಯವಾಣಿ ಪ್ರಸ್ತಾವಿಸಿ ವಾಹನ ಸವಾರರ ಸಂಕಷ್ಟದ ಬಗ್ಗೆ ಇಲಾಖೆಯ ಗಮನ ಸೆಳೆದಿತ್ತು.
ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ 33 ಕಿ.ಮೀ. ದ್ವಿಪಥ ರಸ್ತೆ ಕಾಮಗಾರಿಯ ಟೆಂಡರ್ ಪಡೆದಿದ್ದ ಡಿ.ಪಿ.ಜೈನ್ ಕಂಪೆನಿ ಅರ್ಧದಲ್ಲೇ ಕಾಮಗಾರಿ ನಿಲ್ಲಿಸಿ ಹಿಂದಿರು ಗಿದಾಗ ಉಂಟಾದ ಅವ್ಯವಸ್ಥೆಯಿಂದ ವಾಹನ ಸವಾರರು ಹೈರಾಣಾಗಿದ್ದರು. ಬಳಿಕ ಮೊಗ್ರೋಡಿ ಕನ್‌ಸ್ಟ್ರಕ್ಷನ್‌ನಿಂದ ಮರು ಕಾಮಗಾರಿ ಆರಂಭಿಸಲಾಗಿತ್ತು. ಆದರೂ ಹೊಂಡ ಗುಂಡಿಗೆ ಪರಿಹಾರ ಸಿಕ್ಕಿರಲಿಲ್ಲ. ಇದೀಗ ಮಳೆ ಪ್ರಮಾಣ ಕಡಿಮೆಯಾಗುತ್ತಲೇ ಮೊದಲ ಹಂತವಾಗಿ ಗುರುವಾಯನಕೆರೆ, ಬೆಳ್ತಂಗಡಿ ಉಜಿರೆ ಮಾರ್ಗದಲ್ಲಿ ಹೊಂಡ ಗುಂಡಿಗಳನ್ನು ಮುಚ್ಚುವ ಕಾರ್ಯ ಅ.19 ರಿಂದ ನಡೆಯುತ್ತಿದೆ.
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಹೊಂಡ ಗುಂಡಿಯಿಂದಾಗಿ ಅನೇಕ ಅಪಘಾತಗಳು ಸಂಭವಿಸುತ್ತಿರುವುದರಿಂದ ವಾಹನ ಸವಾರರಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿತ್ತು. ಬೆಳ್ತಂಗಡಿ ಪಟ್ಟಣ ಪಂಚಾ ಯತ್ ವ್ಯಾಪ್ತಿಗೆ ಒಳಪಟ್ಟಂತೆ ನಗರದ ರಸ್ತೆಗಳು ಅಲ್ಲಲ್ಲಿ ಹೊಂಡಗುಂಡಿಗಳ ಬಗ್ಗೆಯೂ ಉದಯವಾಣಿ ಬೆಳಕು ಚೆಲ್ಲಿತ್ತು. ಪ್ರಸಕ್ತ ತೇಪೆ ಕಾರ್ಯ ಆರಂಭವಾಗಿದ್ದು, ಸವಾರರು ನಿಟ್ಟುಸಿರು ಬಿಡುವಂತಾಗಿದೆ.
ಬೆಳ್ತಂಗಡಿ ಸೋಮಾವತಿ ನದಿಗೆ ಸೇತುವೆ ನಿರ್ಮಾಣಗೊಳ್ಳಲಿದ್ದು, ಈಗಾಗಲೆ ಎರಡು ಬದಿ ಸಮತಟ್ಟು ಕಾರ್ಯ ನಡೆಸಲಾಗುತ್ತಿದೆ. ಪೂರಕ ಕಾಮಗಾರಿಗಳು ನಡೆಯುತ್ತಿದೆ. ಈಗಾಗಲೆ ಅರ್ಧಕ್ಕೆ ನಿಂತಿರುವ ರಸ್ತೆಗಳಿಗೆ ಡಾಮರೀಕರಣ ನಡೆಸಿದಲ್ಲಿ ವಾಹನ ಸವಾರರ ತ್ರಾಸದಾಯಕ ಪ್ರಯಾಣಕ್ಕೆ ಮುಕ್ತಿದೊರೆಯಲಿದೆ.
ಮಳೆ ಕಡಿಮೆಯಾದ್ದರಿಂದ ಗುರುವಾಯನಕೆರೆ, ಉಜಿರೆ, ಬೆಳ್ತಂಗಡಿ ಪಟ್ಟಣ ವ್ಯಾಪ್ತಿ ಯಲ್ಲಿ ಇದ್ದ ಹೊಂಡ ಗುಂಡಿಗಳಿಗೆ ಡಾಮರೀಕರಣ ಮಾಡಲಾಗುತ್ತಿದೆ.
-ಶಿವಪ್ರಸಾದ್ ಅಜಿಲ, ಕಾರ್ಯನಿರ್ವಾಹಕ ಎಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ