Advertisement

ಸಂಕಷ್ಟದಲ್ಲೂ ಭಾರತಕ್ಕೆ ಹೊಸ ಅವಕಾಶ : ಭಾರತದತ್ತ ಜಾಗತಿಕ ಕಂಪೆನಿಗಳು

10:04 PM May 01, 2020 | Hari Prasad |

ಪ್ರಪಂಚದ ಪ್ರಮುಖ ಉತ್ಪಾದನಾ ಕೇಂದ್ರವಾಗಿರುವ ಚೀನದಿಂದ ನಿಧಾನಕ್ಕೆ ವಿಶ್ವದ ಅನೇಕ ಕಂಪೆನಿಗಳು ಕಾಲು ಕೀಳಲಾರಂಭಿಸಿವೆ, ಇಲ್ಲವೇ ಆ ನಿಟ್ಟಿನಲ್ಲಿ ಚಿಂತನೆಯನ್ನಂತೂ ನಡೆಸಿವೆ.  ಹೀಗೆಂದಾಕ್ಷಣ, ಚೀನದಿಂದ ಎಲ್ಲಾ ವಿದೇಶಿ ಕಂಪೆನಿಗಳೂ ಮಾಯವಾಗಿಬಿಡುತ್ತವೆ ಎಂದೇನೂ ಅಲ್ಲ.

Advertisement

ಆದರೂ, ಚೀನಕ್ಕೆ ಪರ್ಯಾಯ ಸ್ಥಳ ಹುಡುಕುವ ಕೆಲಸವಂತೂ ಮುಂದಿನ ದಿನಗಳಲ್ಲಿ ವೇಗಪಡೆಯುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಚೀನ ಅಲ್ಲದಿದ್ದರೆ, ಇನ್ನೆಲ್ಲಿ ಎನ್ನುವ ಪ್ರಶ್ನೆಗೆ ‘ಭಾರತ’ ಎನ್ನುವ ಉತ್ತರವೇ ಮೊದಲು ಕೇಳಿಬರುತ್ತಿದೆ. ಇದಕ್ಕೆ ಪೂರಕವೆಂಬಂತೆ, ವಿದೇಶದ 1000ಕ್ಕೂ ಅಧಿಕ ಕಂಪೆನಿಗಳೀಗ ಭಾರತದತ್ತ ಚಿತ್ತ ಹರಿಸಿವೆ ಎನ್ನುವ ಸುದ್ದಿ ಇತ್ತೀಚೆಗಷ್ಟೇ ಸದ್ದು ಮಾಡಿತ್ತು. ಈಗ ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಾಗೂ ಈ ಕಂಪೆನಿಗಳ ನಡುವೆ ಮಾತುಕತೆ ವೇಗ ಪಡೆದಿದೆ.

ಈ ಸಾವಿರ ಕಂಪೆನಿಗಳಲ್ಲಿ ಕನಿಷ್ಠ 300 ಕಂಪೆನಿಗಳು ಮೊಬೈಲ್‌, ಎಲೆಕ್ಟ್ರಾನಿಕ್ಸ್‌, ವೈದ್ಯಕೀಯ ಉತ್ಪನ್ನಗಳು, ಟೆಕ್ಸ್‌ಟೈಲ್ಸ್‌ ಮತ್ತು ಸಿಂಥೆಟಿಕ್‌ ಫ್ಯಾಬ್ರಿಕ್ಸ್‌ ವಲಯದ ಕಾರ್ಖಾನೆಗಳನ್ನು ಸ್ಥಾಪಿಸಲು ಸರಕಾರದೊಂದಿಗೆ ಸಕ್ರಿಯ ಸಂವಾದ ನಡೆಸುತ್ತಿವೆ. ಒಂದು ವೇಳೆ ಈ ಮಾತುಕತೆಗಳೆಲ್ಲ ಸಫ‌ಲವಾದರೆ, ಕೋವಿಡ್ ಸಂಕಷ್ಟದಿಂದಾಗಿ ತತ್ತರಿಸಿರುವ ನಮ್ಮ ಅರ್ಥವ್ಯವಸ್ಥೆಗೆ ಹೊಸ ಶಕ್ತಿ ಬರುವುದರಲ್ಲಿ ಸಂಶಯವಿಲ್ಲ.

ಈಗಿನ ಸಮಯದಲ್ಲಿ ಜಪಾನ್‌, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾದ ಅನೇಕ ಕಂಪೆನಿಗಳು ಭಾರತವನ್ನು ನವ ಉತ್ಪಾದನಾ ಹಬ್‌ ಎಂಬಂತೆ ನೋಡುತ್ತಿವೆ. ಇವುಗಳಲ್ಲಿ ಮೊದಲ ಎರಡು ರಾಷ್ಟ್ರಗಳಲ್ಲಿ ಜಮೀನು ಹಾಗೂ ಮೂರನೇ ರಾಷ್ಟ್ರದಲ್ಲಿ ಮಾನವ ಸಂಪನ್ಮೂಲದ ಕೊರತೆಯಿದೆ.

ಭಾರತವು ಈಗಾಗಲೇ ಈ ರಾಷ್ಟ್ರಗಳ ಕಂಪೆನಿಗಳಿಗೆ ನೆಲೆ ಒದಗಿಸಿದ್ದು, ಮುಂದಿನ ದಿನಗಳಲ್ಲಿ ಪರ್ಯಾಯ ಸ್ಥಳ, ಕೌಶಲಯುತ ಮಾನವಸಂಪನ್ಮೂಲ ಮತ್ತು ಅತ್ಯುತ್ತಮ ಮಾರುಕಟ್ಟೆಯನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.

Advertisement

ವಿದೇಶಗಳ ಮನದಿಚ್ಛೆ ಅರಿತು ಭಾರತ ಸರಕಾರ, ಈಗಿನಿಂದಲೇ ಸಕ್ರಿಯತೆ ತೋರುತ್ತಿರುವುದು ಶುಭ ಸೂಚಕವಾಗಿದೆ. ಈ ಅಭಿಯಾನಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ಉದ್ಯೋಗ ಮತ್ತು ವಿತ್ತ ಸಚಿವಾಲಯದ ಜತೆ ಜತೆಗೆ ಆಯಾ ದೇಶಗಳಲ್ಲಿ ಇರುವ ಭಾರತೀಯ ದೂತವಾಸಗಳೂ ಗಂಭೀರ ಪ್ರಯತ್ನ ನಡೆಸಿವೆ.

ದೇಶದಲ್ಲಿ ಉತ್ಪಾದನೆಗೆ ಶಕ್ತಿ ತುಂಬಲು ಕೇಂದ್ರ ಸರಕಾರ ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಕಾರ್ಪೊರೇಟ್‌ ಟ್ಯಾಕ್ಸ್‌ ತಗ್ಗಿಸಿತ್ತು. ಅಲ್ಲದೇ, ಹೊಸ ಫ್ಯಾಕ್ಟ್ರಿ ಸ್ಥಾಪಿಸುವವರಿಗೂ ಟ್ಯಾಕ್ಸ್‌ ಪ್ರಮಾಣವನ್ನು ಕಡಿಮೆಗಳಿಸಿದೆ. ಈ ಪ್ರಮಾಣವು ದಕ್ಷಿಣ-ಪೂರ್ವ ಏಷ್ಯನ್‌ ರಾಷ್ಟ್ರಗಳಿಗಿಂತ ಕಡಿಮೆಯಿದೆ. ಇದರ ಹೊರತಾಗಿ, ನಮ್ಮಲ್ಲಿರುವ ಮಾನವಸಂಪನ್ಮೂಲವು ಬಹುದೊಡ್ಡ ಪ್ಲಸ್‌ಪಾಯಿಂಟ್‌ ಎನ್ನುವುದನ್ನು ನಾವು ಮರೆಯುವಂತಿಲ್ಲ.

ನಮ್ಮ ದೇಶದಲ್ಲಿ 35ಕ್ಕೂ ಕಡಿಮೆ ವಯೋಮಾನದವರ ಸಂಖ್ಯೆ ಅಧಿಕವಿದೆ. ಅಷ್ಟೇ ಅಲ್ಲದೇ, ವಿಜ್ಞಾನ – ಇಂಜಿನಿಯರಿಂಗ್‌ ಪದವೀಧರರ ಸಂಖ್ಯೆಯೂ ಗಮನಾರ್ಹವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ಭಾರತ ಇತರ  ರಾಷ್ಟ್ರಗಳಿಗಿಂತಲೂ ಉತ್ತಮವಾಗಿ ಪೂರೈಸಬಲ್ಲದು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತವು ಎಲ್ಲ ದೇಶಗಳಿಗೂ ಸಹಯೋಗ ನೀಡುತ್ತಾ, ಪ್ರಪಂಚದ ಭರವಸೆಯನ್ನು ಗೆದ್ದಿದೆ. ಇದೇ ವೇಳೆಯಲ್ಲೇ ಚೀನದ ವರ್ಚಸ್ಸಿಗಂತೂ ದೊಡ್ಡ ಪೆಟ್ಟು ಬಿದ್ದಿದೆ. ಕೋವಿಡ್ ಅನಂತರದ ದಿನಗಳಲ್ಲಿ ಭಾರತಕ್ಕೆ ಈ ಗುಣವು ಸಹಾಯಕ್ಕೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next