Advertisement

ಈಡಿಗರ ಅಭಿವೃದ್ಧಿ ನಿಗಮ, ಎಸ್ಟಿ ಮೀಸಲಾತಿ; ಮಾತು ತಪ್ಪಿದ ಸರಕಾರ: ಪ್ರಣವಾನಂದ ಸ್ವಾಮೀಜಿ

06:32 PM Dec 10, 2022 | Team Udayavani |

ಗಂಗಾವತಿ: ಈಡಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಸಮಾಜಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸುವಲ್ಲಿ ರಾಜ್ಯ ಸರಕಾರದ ನಿರ್ಲಕ್ಷ್ಯ ಖಂಡಿಸಿ ಜ.06 ರಿಂದ 658 ಕಿ.ಮೀ.ಪಾದಯಾತ್ರೆ ನಡೆಸಿ ಬೆಂಗಳೂರಿನಲ್ಲಿ ಈಡಿಗ-ಬಿಲ್ಲವ ಮತ್ತು ನಾಮಧಾರಿ ಸಮುದಾಯಗಳು ಇತರೆ ಹಿಂದುಳಿದ ವರ್ಗಗಳ ಸಹಕಾರದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಈಡಿಗ ಸಮಾಜದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಜಗದ್ಗುರು ಪೂಜ್ಯ ಪ್ರಣವಾನಂದ ಸ್ವಾಮೀಜಿ ಹೇಳಿದರು.

Advertisement

ಅವರು ಮಾಜಿ ಸಂಸದ ಎಚ್.ಜಿ.ರಾಮುಲು ನಿವಾಸದಲ್ಲಿ ಪ್ರತಿಭಟನೆಯ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.ಕಲಬುರ್ಗಿಯಲ್ಲಿ ಈಡಿಗ ಸಮುದಾಯದ ಹಲವು ಬೇಡಿಕೆ ಈಡೇರಿಸುವಂತೆ ನಡೆಸಿದ ಅನಿರ್ಧಿಷ್ಠ ಧರಣಿ ಹೋರಾಟದ ಸ್ಥಳಕ್ಕೆ ಸಚಿವ ಮುರುಗೇಶ ನಿರಾಣಿ ಭೇಟಿ ನೀಡಿ 6 ತಿಂಗಳೊಳಗೆ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಹಲವು ತಿಂಗಳುಗಳು ಕಳೆದರೂ ಸರಕಾರ ನಿರ್ಲಕ್ಷ್ಯ ವಹಿಸಿದೆ. ಹಲವು ದಶಕಗಳಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿನಲ್ಲಿ 500 ಕೋಟಿ ಮೀಸಲಿಟ್ಟು ಈಡಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಶೇಂದಿ ಮಾರಾಟ ನಿಷೇಧ ಮಾಡಿದ್ದರಿಂದ ಈಡಿಗ ಸಮುದಾಯ ಉದ್ಯೋಗವಿಲ್ಲದೇ ಬೀದಿಗೆ ಬಿದ್ದಿದೆ. ಇದರಿಂದ ಕುಟುಂಬ ನಿರ್ವಾಹಣೆ ಬಹಳ ಕಷ್ಟವಾಗಿದೆ. ಸರಕಾರ ಪ್ರತಿ ಕುಟುಂಬಕ್ಕೂ ಆಂದ್ರಪ್ರದೇಶ ,ತೆಲಂಗಾಣ, ಕೇರಳ ಮತ್ತು ತಮಿಳುನಾಡು ಮಾದರಿಯಲ್ಲಿ ಮದ್ಯ ಮಾರಾಟದ ಲೈಸೆನ್ಸ್ ವಯೋವೃದ್ಧರಿಗೆ ಮಾಸಿಕ ಪಿಂಚಣಿ ಸೇರಿ ಹಲವು ಸೌಲಭ್ಯ ಕೊಡಬೇಕು. ಹೆಂಡದ ಮಾರಯ್ಯ ಜಯಂತಿ ಆಚರಣೆ ಸರಕಾರ ಸುತ್ತೋಲೆ ಹೊರಡಿಸುವುದು ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಹೋರಾಟ ನಡೆಸಲಾಗುತ್ತಿದ್ದು ಕಾಂಗ್ರೆಸ್ ಬಿಜೆಪಿಯ ಕೆಲ ಪಟ್ಟಭದ್ರರು ಈಡಿಗ ಸಮಾಜವನ್ನು ಆರ್ಥಿಕ ದಿವಾಳಿ ಮಾಡಿದ್ದು ಸಮಾಜವು ಬಹಳ ಸಂಕಷ್ಟದಲ್ಲಿದೆ ಎಂದು ಕಿಡಿ ಕಾರಿದರು.

ಸಮಾಜದಿಂದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸುನಿಲ್ ಕುಮಾರ್ ಸೇರಿ 7 ಜನ ಶಾಸಕರಿದ್ದರೂ ಈಡಿಗರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಇವರೆಲ್ಲ ಹುಟ್ಟಿದ ಸಮಾಜವನ್ನು ಮರೆತು ರಾಜಕೀಯ ಮಾಡುತ್ತಿದ್ದಾರೆ. ಹಿಂದೂ ಧರ್ಮದ ಸಂರಕ್ಷಣೆಗಾಗಿ ಕರಾವಳಿ ಭಾಗದಲ್ಲಿ 22 ಜನ ಬಿಲ್ಲವ ಸಮಾಜದ ಯುವಕರು ಕೊಲೆಯಾಗಿದ್ದು ಸಮಾಜಕ್ಕೆ ಬಿಜೆಪಿ ಸರಕಾರ ಯಾವುದೇ ಶಾಶ್ವತ ಉಪಯೋಗವಾಗುವಂತಹ ಯೋಜನೆ ಮಾಡಿಲ್ಲ. ಹೋರಾಟ ಚುನಾವಣೆಯಲ್ಲಿ ಗೆಲುವು ಪಡೆಯಲು ಬಿಲ್ಲವ ಈಡಿಗ ಸಮುದಾಯದ ಯುವಕರು ಮತ್ತು ಮತಗಳು ಬೇಕು. ಈಡಿಗ ಸಮಾಜವನ್ನು ಸ್ವತಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುಳಿಯುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಘೋಷಣೆ ಮಾಡಿದ್ದು ನಾರಾಯಣಗುರುಗಳ ಜಯಂತಿಯನ್ನು ನಿರ್ಲಕ್ಷಿಸಿ ದೊಡ್ಡಬಳ್ಳಾಪೂರದ ಬಿಜೆಪಿ ಸಮಾವೇಶಕ್ಕೆ ತೆರಳಿ ಈಡಿಗ ಬಿಲ್ಲವ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದರು.

ಪ್ರಧಾನಿ ಮೋದಿಯವರು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿ ಕನಕದಾಸ, ವಾಲ್ಮೀಕಿ ಮಹರ್ಷಿ ಹಾಗು ಕೆಂಪೇಗೌಡರಿಗೆ ನಮಿಸಿ ನಾರಾಯಣ ಗುರುಗಳ ಸ್ಮರಣೆ ಮಾಡದೇ ಇರುವುದು ಖಂಡನೀಯವಾಗಿದೆ. ಈಡಿಗಸಮಾಜದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸುನಿಲ್ ಕುಮಾರ ಇತರೆ ಸಮಾಜಗಳ ಉದ್ದಾರದ ಮಾತನಾಡುತ್ತಿದ್ದು ಜನ್ಮ ನೀಡಿದ ಈಡಿಗ ಬಿಲ್ಲವ ಸಮಾಜವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇವುಗಳನ್ನು ಸಮಸ್ತ ರಾಜ್ಯದ ಜನರಿಗೆ ತಿಳಿಸಲು ಜ.06 ರಿಂದ ಮಂಗಳೂರಿನಿಂದ ಬೆಂಗಳೂರಿನ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಸರಕಾರ ಶೋಷಣೆಗೆ ಒಳಗಾಗಿರುವ ಸಮಾಜಗಳಿಗೆ ಮೀಸಲಾತಿ ಕಲ್ಪಿಸುವುದನ್ನು ಬಿಟ್ಟು ಯಾವುದೇ ಹೋರಾಟ ಮಾಡದೇ ಇರುವ ಸಾಮಾಜಿಕವಾಗಿ ಅತ್ಯುತ್ತಮ ಸ್ಥಾನದಲ್ಲಿರುವ ಶೇ2 ರಷ್ಟು ಜನರಿಗೆ ಅವೈಜ್ಞಾನಿಕವಾಗಿ ಶೇ.10 ರಷ್ಟು ಮೀಸಲಾತಿ ನೀಡುವ ಮೂಲಕ ಸಂವಿಧಾನಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ತಿರುಚುವ ಕಾರ್ಯ ಮಾಡುತ್ತಿರುವುದು ಖಂಡನೀಯವಾಗಿದೆ. ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳು ಈಡಿಗ, ಬಿಲ್ಲವ ಹಾಗೂ ನಾಮಧಾರಿ ಜಾತಿಯವರಿಗೆ ಪಕ್ಷದ ಬೀ ಫಾರಂ ನೀಡಿ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ಈಗಾಗಲೇ ಸಮಾಜದ ವತಿಯಿಂದ ಪಕ್ಷಗಳ ಮುಖಂಡರಿಗೆ ಮನವಿ ಮಾಡಲಾಗುತ್ತಿದೆ.

ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ, ಈಡಿಗ ಸಮಾಜದ ಬಿಚ್ಚಾಲಿ ಕಾಶಿನಾಥ, ಮರಕುಂಬಿ ತಿರುಮಲ, ಹನುಮಂತರಾಯ, ಭುವನೇಶಪ್ಪ, ಟಿ.ಬಸವರಾಜ, ಪರಮೇಶ್ವರ, ನಾಗರಾಜ, ಶ್ರವಣ್, ಸೇರಿ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next