Advertisement

ಚೀನದ ಸಾಲ ಆ್ಯಪ್‌ ಗಳಿಗೆ ಇ.ಡಿ. ಶಾಕ್‌; ತತ್‌ಕ್ಷಣ ಸಾಲ ನೀಡುವುದಾಗಿ ವಂಚನೆ

11:54 PM Sep 03, 2022 | Team Udayavani |

ಬೆಂಗಳೂರು: ಕೆಲವೇ ಕ್ಷಣಗಳಲ್ಲೇ ಸಾಲ ಮಂಜೂರು ಮಾಡುತ್ತೇವೆ ಎಂದು ಸಾರ್ವಜನಿಕರನ್ನು ನಂಬಿಸಿ, ಸಾಲ ಕೊಟ್ಟು ಕಿರುಕುಳ ನೀಡುತ್ತಿದ್ದ ಚೀನ ಮೂಲದ ಆ್ಯಪ್‌ ಸಂಸ್ಥೆಗಳಿಗೆ ಸೇರಿದ ಆರು ಕಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

Advertisement

ರೇಜರ್‌ಪೇ ಪ್ರೈವೇಟ್‌ ಲಿಮಿಟೆಡ್‌, ಕ್ಯಾಶ್‌ಫ್ರೀ ಪೇಮೆಂಟ್ಸ್‌ ಮತ್ತು ಪೇಟಿಎಂ ಪೇಮೆಂಟ್‌ ಸರ್ವೀಸ್‌ ಲಿಮಿಟೆಡ್‌ಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ಕಂಪೆನಿಗಳ ಮೂಲಕ ಚೀನದ ವ್ಯಕ್ತಿಗಳು ಪರೋಕ್ಷವಾಗಿ ಸಾಲ ನೀಡಿ ಜನರಿಗೆ ಕಿರುಕುಳ ನೀಡುತ್ತಿದ್ದ ಆರೋಪ ಗಳಿದ್ದವು. ಹೀಗಾಗಿ ದಾಳಿ ನಡೆಸಿ 17 ಕೋಟಿ ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಸಾಲ ಕೊಟ್ಟು ಕಿರುಕುಳ ನೀಡುತ್ತಿದ್ದ ಬಗ್ಗೆ ಬೆಂಗಳೂರು ಸೈಬರ್‌ ಕ್ರೈಂ ಠಾಣೆಯಲ್ಲಿ 18 ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಹಣ ವಹಿವಾಟು ಹಾಗೂ ಸಾರ್ವಜನಿಕರಿಗೆ ಕಿರುಕುಳ, ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಇ.ಡಿ. ಅಕ್ರಮ ಲೇವಾದೇವಿ ನಿಯಂತ್ರಣ ಕಾಯ್ದೆ (ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು.

ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ರೇಜರ್‌ಪೇ ಮತ್ತು ಕ್ಯಾಶ್‌ಫ್ರೀ ಕಂಪೆನಿಗಳು, ಜಾರಿ ನಿರ್ದೇಶನಾಲಯದ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿರುವುದಾಗಿ ಹೇಳಿವೆ. ನಮ್ಮ ಕೆಲವು ಮರ್ಚೆಂಟ್‌ಗಳ ಮೇಲೆ ಒಂದೂವರೆ ವರ್ಷದಿಂದಲೂ ಇ.ಡಿ. ತನಿಖೆ ನಡೆಸುತ್ತಿದೆ. ಅದರ ಅಂಗವಾಗಿಯೇ ಈ ಶೋಧ ಕಾರ್ಯ ನಡೆಸಿದೆ. ನಾವು ಇಕೆವೈಸಿ  ಸಹಿತ ಎಲ್ಲ ದಾಖಲೆಗಳನ್ನು ನೀಡಿದ್ದೇವೆ ಎಂದಿವೆ. ಜತೆಗೆ ತನಿಖಾ ಸಂಸ್ಥೆ ಕೇಳಿದ ಎಲ್ಲ ಮಾಹಿತಿಗಳನ್ನೂ ತತ್‌ಕ್ಷಣವೇ ಒದಗಿಸಿದ್ದೇವೆ ಎಂದು ಹೇಳಿವೆ.

ಚೀನ ಮೂಲದ ವ್ಯಕ್ತಿಗಳ ನಿಯಂತ್ರಣ
ಸ್ಥಳೀಯ ವ್ಯಕ್ತಿಗಳ ಹೆಸರಿನಲ್ಲಿ ನಡೆಯುತ್ತಿರುವ ಕಂಪೆನಿಗಳನ್ನು ಚೀನ ಮೂಲದ ವ್ಯಕ್ತಿ ನಿಯಂತ್ರಿಸುತ್ತಿದ್ದಾನೆ. ಚೀನದ ವ್ಯಕ್ತಿಗಳನ್ನು ಭಾರತೀಯರಂತೆಯೇ ಬಿಂಬಿಸಿ ಸತ್ಯವನ್ನು ಮರೆಮಾಚಲು, ಸ್ಥಳೀಯ ವ್ಯಕ್ತಿಗಳಿಗೆ ಇಂತಿಷ್ಟು ಕಮಿಷನ್‌ ನಿಗದಿಪಡಿಸಿ ಅವರ ದಾಖಲೆಗಳನ್ನು ಪಡೆಯುತ್ತಿದ್ದರು. ಅವರ ಹೆಸರಿನಲ್ಲಿಯೂ ಕಂಪೆನಿಗಳನ್ನು ತೆರೆದು, ಸ್ಥಳೀಯ ವ್ಯಕ್ತಿಗಳಿಗೆ ಕಡಿಮೆ ಬಡ್ಡಿಗೆ ಕೆಲ ನಿಮಿಷಗಳಲ್ಲೇ ಸಣ್ಣ ಪ್ರಮಾಣದ ಸಾಲ ಕೊಡಲಾಗುತ್ತಿತ್ತು. ಜತೆಗೆ ಸ್ಥಳೀಯರನ್ನೇ ಕಂಪೆನಿ ಡಮ್ಮಿ ನಿರ್ದೇಶಕರನ್ನಾಗಿಸಿ, ಅಪರಾಧ ಎಸಗುತ್ತಿದ್ದರೆಂದು ಇ.ಡಿ. ಹೇಳಿದೆ. ಅಲ್ಲದೆ, ತನಿಖೆ ವೇಳೆ ಕಂಪೆನಿಗಳ ನಕಲಿ ವಿಳಾಸ ಪತ್ತೆಯಾಗಿದೆ ಎಂದು ತಿಳಿಸಿದೆ.

Advertisement

ಗ್ರಾಹಕರಿಗೆ ಕಿರಿಕಿರಿ
ಸಾಲ ಪಡೆದ ಗ್ರಾಹಕರು ನಿಗದಿತ ಸಮಯಕ್ಕೆ ಸಾಲ ಮರುಪಾವತಿಸಿದರೂ, ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡಲಾಗುತ್ತಿತ್ತು. ಅಲ್ಲದೆ, ಗ್ರಾಹಕರ ಸಾಮಾಜಿಕ ಜಾಲತಾಣದ ಮಾಹಿತಿ ಪಡೆದು, ಅವರ ಸ್ನೇಹಿತರು, ಸಂಬಂಧಿಕರು ಹಾಗೂ ಇತರರಿಗೆ ಕರೆ ಮಾಡಿ, ಸಾಲ ಮರುಪಾವತಿ ಬಗ್ಗೆ ಒತ್ತಡ ಹೇರುತ್ತಿದ್ದರು. ಗ್ರಾಹಕರ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡುವುದಾಗಿ ಹೆದರಿಸುತ್ತಿದ್ದರು. ನಕಲಿ ವಿಳಾಸಗಳನ್ನು ನೀಡಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ವಂಚಿಸುತ್ತಿದ್ದರು ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next