Advertisement

ED Raid: ಲಾಭಕ್ಕಾಗಿ ಗಾಳ?ಕಾಂಗ್ರೆಸ್‌ಗೆ ಅನುಕಂಪದ ನಿರೀಕ್ಷೆ: ಬಿಜೆಪಿಗೆ ಯುವ ಮತಗಳ ಅಪೇಕ್ಷೆ

11:12 PM Oct 30, 2023 | Team Udayavani |

ಜೈಪುರ/ಹೊಸದಿಲ್ಲಿ: ಚುನಾವಣೆ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಇ.ಡಿ.(ಜಾರಿ ನಿರ್ದೇಶನಾಲಯ) ದಾಳಿಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳು “ರಾಜಕೀಯ ಬೇಳೆ’ ಬೇಯಿಸಿಕೊಳ್ಳಲು ಮುಂದಾಗಿವೆ.

Advertisement

ದಾಳಿಯ ಹೆಸರಲ್ಲೇ ಎರಡೂ ಪಕ್ಷಗಳ ನಡುವೆ ತೀವ್ರ ವಾಕ್ಸಮರ ಆರಂಭಿಸಿವೆ. ತಮ್ಮ ನಾಯಕರನ್ನು ಗುರಿಯಾಗಿಸಿ ನಡೆದ ಇ.ಡಿ. ದಾಳಿಯಿಂದ ನಮಗೆ ಅನುಕಂಪದ ಮತಗಳು ಲಭ್ಯವಾಗಲಿವೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದು. ಕರ್ನಾಟಕದಲ್ಲೂ ಚುನಾವಣೆಗೆ ಮುನ್ನ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವರ ಮನೆಗಳ ಮೇಲೆ ಇ.ಡಿ. ದಾಳಿ ನಡೆದಿತ್ತು. ಹೀಗಾಗಿ “ಇ.ಡಿ. ದಾಳಿ ಮೂಲಕ ಬಿಜೆಪಿಯು ಗೆಹ್ಲೋಟ್ ಸರಕಾರದ ವರ್ಚಸ್ಸಿಗೆ ಮಸಿ ಬಳಿಯುತ್ತಿದೆ ಮತ್ತು ಟಾರ್ಗೆಟ್‌ ಮಾಡುತ್ತಿದೆ’ ಎಂಬುದಾಗಿ ಬಿಂಬಿಸುವ ಮೂಲಕ ಅನುಕಂಪದ ಮತಗಳನ್ನು ಬಾಚಿಕೊಳ್ಳಲು ಕಾಂಗ್ರೆಸ್‌ ರಣತಂತ್ರ ಹೆಣೆದಿದೆ.

ಅಲ್ಲದೇ ಪಿಸಿಸಿ ಮುಖ್ಯಸ್ಥ ಗೋವಿಂದ್‌ ಸಿಂಗ್‌ ದೊರಾಸ್ರಾ ಅವರು ಜಾಟ್‌ನ ಪ್ರಭಾವಿ ನಾಯಕ. ಅವರ ಮನೆ ಮೇಲೆ ನಡೆದ ಇ.ಡಿ. ದಾಳಿಯನ್ನು ಬೆಂಬಲಿಗರು, “ಜಾಟ್‌ ಸಮುದಾಯದ ಮೇಲೆ ನಡೆದ ದಾಳಿ’ ಎಂಬಂತೆ ಬಿಂಬಿಸತೊಡಗಿದ್ದಾರೆ. ಅಲ್ಲದೇ ದಾಳಿ ವೇಳೆ ಏನೇನು ಸಿಕ್ಕಿತು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಲಿ ಎಂದು ದೊರಾಸ್ರಾ ಸವಾಲನ್ನೂ ಹಾಕಿದ್ದಾರೆ.

ಮತ್ತೊಂದೆಡೆ ಇ.ಡಿ. ದಾಳಿಯಿಂದ ರಾಜಕೀಯವಾಗಿ ನಮಗೇ ಲಾಭ ಎಂದು ಬಿಜೆಪಿ ಭಾವಿಸಿದೆ. ಅದರಂತೆ ಇ.ಡಿ. ದಾಳಿ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನೇ ಅಸ್ತ್ರವಾಗಿಸಿಕೊಂಡು, ರಾಜ್ಯದ 70 ಲಕ್ಷ ಯುವಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಪೇಪರ್‌ ಲೀಕ್‌ ಪ್ರಕರಣವು 70 ಲಕ್ಷ ಯುವಜನರ ಬದುಕನ್ನೇ ಡೋಲಾಯ ಮಾನವಾಗಿಸಿದೆ ಎಂದು ಬಿಜೆಪಿ ನಾಯಕರು ಪದೇ ಪದೆ ಪ್ರಸ್ತಾ ವಿಸುತ್ತಾ, ಕಾಂಗ್ರೆಸ್‌ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಒಟ್ಟಿ ನಲ್ಲಿ ಇ.ಡಿ. ದಾಳಿಯಿಂದ ನಿಜಕ್ಕೂ ಲಾಭವಾಗುವುದು ಯಾರಿಗೆ ಎಂದು ಗೊತ್ತಾಗಬೇಕೆಂದರೆ ಡಿ.3ರ ವರೆಗೂ ಕಾಯಬೇಕು.

ಸಿಎಂಗಳಿಂದ ನಾಮಪತ್ರ ಸಲ್ಲಿಕೆ: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹಾಗೂ ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌ ಅವರು ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬುಧಿ° ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಚೌಹಾಣ್‌ ಅವರು ರೋಡ್‌ಶೋ ಮೂಲಕ ಸಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇನ್ನು, ಬಘೇಲ್‌ ಅವರು ತಮ್ಮ ಸಾಂಪ್ರದಾಯಿಕ ಕ್ಷೇತ್ರ ಪಟಾಣ್‌ನ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಕಾಂಗ್ರೆಸ್‌ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಕಾಂಗ್ರೆಸ್‌ಗೆ ಬೆಂಬಲ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಬೆಂಬಲಿಸಲು ತೆಲಂಗಾಣ ಜನ ಸಮಿತಿ ನಿರ್ಧರಿಸಿದೆ. ಹೈದರಾಬಾದ್‌ನಲ್ಲಿ ಸೋಮವಾರ ಸಮಿತಿಯ ಅಧ್ಯಕ್ಷರು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ರೇವಂತ್‌ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರ ಘೋಷಿಸಿದ್ದಾರೆ.

ಆಯೋಗಕ್ಕೆ ಬಿಜೆಪಿ ದೂರು: ಚುನಾವಣ ನೀತಿ ಸಂಹಿತೆ ಉಲ್ಲಂಘನೆ ಎಂದು ಹೇಳಿಕೊಂಡು ಬಿಜೆಪಿ ಕಾರ್ಯಕರ್ತರ ವಾಹನಗಳು ಹಾಗೂ ಮನೆಗಳಲ್ಲಿರುವ ಪಕ್ಷದ ಧ್ವಜಗಳು ಹಾಗೂ ಚಿಹ್ನೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ತೆರವು ಮಾಡುತ್ತಿದ್ದಾರೆ. ಆದರೆ ಖಾಸಗಿ ವಾಹನಗಳು, ಮನೆಗಳಲ್ಲಿ ಪಕ್ಷದ ಧ್ವಜವನ್ನು ಇಟ್ಟು ಕೊಳ್ಳುವುದು ನೀತಿ ಸಂಹಿತೆ ಉಲ್ಲಂಘನೆ ಹೇಗಾಗುತ್ತದೆ ಎಂದು ಮಧ್ಯಪ್ರದೇಶ ಬಿಜೆಪಿ ಪ್ರಶ್ನಿಸಿದೆ. ಜತೆಗೆ ಈ ಕುರಿತು ಮುಖ್ಯ ಚುನಾವಣ ಅಧಿಕಾರಿಗೆ ಸೋಮವಾರ ದೂರನ್ನೂ ನೀಡಿದೆ.

ಸಿಲಿಂಡರ್‌ಗೆ 500ರೂ. ಸಬ್ಸಿಡಿ, ಸ್ವಸಹಾಯ ಸಂಘಗಳ ಸಾಲ ಮನ್ನಾ
ಛತ್ತೀಸ್‌ಗಢದಲ್ಲಿ ಮತ್ತೆ ಕಾಂಗ್ರೆಸ್‌ ಸರಕಾರವನ್ನು ಅಧಿಕಾರಕ್ಕೆ ತಂದರೆ, ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಲಾಗುವುದು, ಅಡುಗೆ ಅನಿಲ ಸಿಲಿಂಡರ್‌ಗೆ ತಲಾ 500ರೂ. ಸಬ್ಸಿಡಿ, ರಸ್ತೆ ಅಪಘಾತಗಳ ಸಂತ್ರಸ್ತರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಹಲವು ಆಶ್ವಾಸನೆಗಳನ್ನು ಘೋಷಿಸಿದ್ದಾರೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ. ಸೋಮವಾರ ಜಲಬಂಧಾದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಸುಮಾರು 6 ಸಾವಿರ ಸರಕಾರಿ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳನ್ನು ಸ್ವಾಮಿ ಆತ್ಮಾನಂದ ಆಂಗ್ಲ ಮತ್ತು ಹಿಂದಿ ಮಾಧ್ಯಮ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. 200 ಯೂನಿಟ್‌ವರೆಗೆ ವಿದ್ಯುತ್‌ ಉಚಿತವಾಗಿ ನೀಡಲಾಗುವುದು ಎಂದೂ ಹೇಳಿದ್ದಾರೆ.

ಬಿಆರ್‌ಎಸ್‌ ಸಂಸದನಿಗೆ ಪ್ರಚಾರದ ವೇಳೆ ಚೂರಿ ಇರಿತ!
ತೆಲಂಗಾಣದಲ್ಲಿ ಬಿಆರ್‌ಎಸ್‌ ಸಂಸದ ಹಾಗೂ ಡುಬ್ಬಕ್‌ ಅಸೆಂಬ್ಲಿ ಕ್ಷೇತ್ರದ ಅಭ್ಯರ್ಥಿ ಕೋಥಾ ಪ್ರಭಾಕರ್‌ ರೆಡ್ಡಿ ಅವರಿಗೆ ಸೋಮವಾರ ಹಾಡಹಗಲೇ ಚೂರಿ ಇರಿಯ ಲಾಗಿದೆ. ಸಿದ್ದಿಪೇಟ್‌ ಜಿಲ್ಲೆಯಲ್ಲಿ ಚುನಾವಣ ಪ್ರಚಾರ ನಡೆಸುತ್ತಿದ್ದಾಗಲೇ ಈ ಘಟನೆ ನಡೆದಿದೆ. 38 ವರ್ಷದ ರಾಜು ಎಂಬಾತ ಏಕಾಏಕಿ ರೆಡ್ಡಿ ಅವರ ಸಮೀಪಕ್ಕೆ ಬಂದು, ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ರೆಡ್ಡಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಪಿ ರಾಜುವನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಕೆ.ಚಂದ್ರ ಶೇಖರ್‌ ರಾವ್‌, “ನಮ್ಮ ಅಭ್ಯರ್ಥಿ ಮೇಲೆ ನಡೆದ ದಾಳಿಯು ನನ್ನ ಮೇಲೆ ನಡೆಸಿದ ದಾಳಿ. ನಮಗೂ ಧೈರ್ಯವಿದೆ. ಇಂಥ ದಾಳಿಯನ್ನು ನಿಲ್ಲಿಸದಿದ್ದರೆ, ನೀವು ಮಾತ್ರವಲ್ಲ ನಿಮ್ಮ ಧೂಳು ಕೂಡ ಉಳಿಯುವುದಿಲ್ಲ ನೆನಪಿರಲಿ’ ಎಂದು ವಿಪಕ್ಷಗಳನ್ನು ಉಲ್ಲೇಖಿಸಿ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಯ ಭ್ರಷ್ಟ ಆಡಳಿತದಡಿ, 50 ಎಕ್ರೆ ಭೂಮಿಯಿರುವವರೂ ಲಂಚ ನೀಡಿ ಬಿಪಿಎಲ್‌ ಕಾರ್ಡ್‌ ಮಾಡಿಸಿಕೊಳ್ಳ ಬಹುದು. ಹಣ ಕೊಟ್ಟರೆ, ಎಲ್ಲವೂ ಆಗುತ್ತದೆ
-ಕಮಲ್‌ನಾಥ್‌, ಮಧ್ಯ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ

ಛತ್ತೀಸ್‌ಗಢದಲ್ಲಿ 2018ರ ಚುನಾವಣೆ ವೇಳೆ ರಾಹುಲ್‌ ನೀಡಿದ್ದ ಯಾವ ಆಶ್ವಾಸನೆಯೂ ಈಡೇರಿಲ್ಲ. ಅವರ ರ‍್ಯಾಲಿ ನೋಡುವಾಗ “ಘಜಿನಿ’ಸಿನೆಮಾ ನೆನಪಾಗುತ್ತದೆ.
-ದೇವೇಂದ್ರ ಫ‌ಡ್ನವೀಸ್‌, ಮಹಾರಾಷ್ಟ್ರ ಡಿಸಿಎಂ

ಅಜ್ಜಿ ಇಂದಿರಾ ಗಾಂಧಿ ಮತ್ತು ಅಪ್ಪ ರಾಜೀವ್‌ ಗಾಂಧಿ ಅವರ ಘೋರ ಹತ್ಯೆಗೆ ಕೂಡ ನಮ್ಮೊಳಗಿನ ದೇಶಭಕ್ತಿಯನ್ನು ಅಲುಗಾಡಿಸಲು ಆಗಲಿಲ್ಲ.
-ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್‌ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next