ತೀರ್ಥಹಳ್ಳಿ: ಪಟ್ಟಣದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಇಡಿ ಮತ್ತು ಎನ್ ಐಎ ಕಾರ್ಯಾಚರಣೆ ನಡೆಸಿದ್ದು, ಶಂಕಿತ ಉಗ್ರರಾದ ಮಾಜ್ ಮುನೀರ್, ಶಾರಿಕ್, ಮತೀನ್ ಮನೆಗಳಲ್ಲಿ ಶೋಧ ಕಾರ್ಯ ನಡೆಸಿದ್ದು ಇದೆ ವೇಳೆ ಕಾಂಗ್ರೆಸ್ ಕಚೇರಿ ಇರುವ ಕಟ್ಟಡದಲ್ಲೂ ಶೋಧ ನಡೆಸಲಾಗಿದೆ.
ಶಂಕಿತ ಉಗ್ರ ಶಾರೀಕ್ ಅಜ್ಜನ ಒಡೆತನದ ಕಟ್ಟಡದಲ್ಲಿರುವ ಕಾಂಗ್ರೆಸ್ ಕಚೇರಿಗೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ಶಂಕಿತ ಉಗ್ರರ ಹಣದ ವಹಿವಾಟಿನ ತನಿಖೆ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ವಿವಿಧ ಭಾಗದಲ್ಲಿ ಅಧಿಕಾರಿಗಳು ಶೋಧ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ , ಮನೆಯ ಪಕ್ಕದ ಕಚೇರಿಯಲ್ಲಿರುವ ವೇಳೆ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಬೆಳಗ್ಗೆ 9 ಗಂಟೆಗೆ ಪಕ್ಷದ ಕಚೇರಿಯಿಂದ ಕರೆ ಬಂದಿದ್ದು ಎನ್ ಐಎ ಅಧಿಕಾರಿಗಳು ಪರಿಶೀಲನೆ ನಡೆಸಲು ಬಂದಿದ್ದಾರೆ ಎಂದು ತಿಳಿದು ಬಂದಿದೆ.
2015 ರಲ್ಲಿ 10 ಲಕ್ಷ ರೂ ಹಣ ನೀಡಿ 8 ವರ್ಷಗಳ ಕಾಲಕ್ಕೆ ಹಾಸಿಂ ಅವರಿಂದ ಕಚೇರಿಯನ್ನು ಲೀಸ್ ಗೆ ಪಡೆದಿದ್ದೆವು. ಪ್ರತಿ ತಿಂಗಳು 1 ಸಾವಿರ ರೂ ನೀಡಲಾಗುತ್ತಿತ್ತು ಎಂದರು. ನಮಗೆ ಮತ್ತು ಹಾಸಿಂ ಅವರಿಗೆ ಇರುವ ಸಂಬಂಧ ಮಾಲಕ ಮತ್ತು ಬಾಡಿಗೆ ದಾರರಿಗೆ ಇರುವ ಸಂಬಂಧ. ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕೆಲವು ಮಾಧ್ಯಮಗಳಲ್ಲೂ ಸುಳ್ಳು ಸುದ್ದಿ ಬರುತ್ತಿದೆ. ಚುನಾವಣೆ ಹತ್ತಿರ ಇರುವುದರಿಂದ ಬಿಜೆಪಿಯವರು ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೂ ಹಾಸಿಂಗೂ ಯಾವುದೇ ಸಂಬಂಧ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಿಡಿ ಕಾರಿದರು.
ಅವರು ಸಚಿವರಾಗಿದ್ದು ಹಾಸಿಂ ಅವರಿಗೂ ಆರಗ ಜ್ಞಾನೇಂದ್ರ ಅವರಿಗೂ ಏನು ಸಂಬಂಧ ಏನಿದೆಯೋ ಗೊತ್ತಿಲ್ಲ.ಉಳಿದ ಮಾಹಿತಿ ಅವರಿಗೆ ತಿಳಿದಿದೆ. ಅವರೇ ಹುಡುಕಿ ತೆಗೆಯಬೇಕು. ಅವರು ಕೋಮು ಗಲಭೆ ಮಾಡಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕಚೇರಿ ಯಾರು ಬಾಡಿಗೆ ನೀಡಿದ್ದಾರೆ ಎಂದು ಕೇಳಿದ್ದಾರೆ. ಅದಕ್ಕೆ ಮಾಹಿತಿ ನೀಡಿದ್ದೇನೆ ಅಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.