ಹುಣಸೂರು: ಕೃಷಿಯಲ್ಲಿ ಏಕಬೆಳೆ ಪದ್ಧತಿಯನ್ನು ಅನುಸರಿಸುವ ಬದಲು ಬಹುಬೆಳೆ ಪದ್ಧತಿಯೊಂದಿಗೆ ಹೈನುಗಾರಿಕೆ, ಕೋಳಿ ಸಾಕಣೆ ಮತ್ತಿತರೆ ಕೃಷಿ ಉಪಕಸುಬು ಕೈಗೊಂಡಲ್ಲಿ ರೈತರು ಆರ್ಥಿಕ ಸುಧಾರಣೆ ಕಂಡುಕೊಳ್ಳಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ ಹೇಳಿದರು.
ನಗರದ ಕಲ್ಕುಣಿಕೆ ಶ್ರೀ ರಾಘವೇಂದ್ರ ಸ್ವಾಮಿಮಠದ ಸಭಾಂಗಣದಲ್ಲಿ ಯೋಜನೆಯ ಪ್ರಗತಿಬಂಧು ಮತ್ತು ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಆಯೋಜಿಸಿದ್ದ ತಾಲೂಕು ಮಟದ ಕೋಳಿ ಸಾಕಣೆ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರೈತರು ಕೃಷಿಯನ್ನು ಅನಾದಿಕಾಲದಿಂದಲೂ ಅನುಸರಿಸಿಕೊಂಡು ಬಂದಿದ್ದಾರೆ. ಆದರೆ ಇಂದು ಮಕ್ಕಳಿಗೆ ಕೃಷಿ ಕಸುಬನ್ನು ಮುಂದುವರಿಸಿಕೊಂಡು ಹೋಗುವಂತೆ ಹೇಳುವ ಮನಸ್ಥಿತಿಯಲ್ಲಿಲ್ಲ. ಇದಕ್ಕೆ ಕಾರಣ ಕೃಷಿಯಲ್ಲಿನ ಆಧುನಿಕತೆ ಮತ್ತು ತಂತ್ರಜ್ಞಾನ ಬಳಸಿಕೊಳ್ಳುವಲ್ಲಿ ವಿಫಲರಾಗಿರುವುದು.
ರೈತರು ಕೃಷಿಯ ಉಪಕಸುಬುಗಳಾದ ಹೈನುಗಾರಿಕೆ, ಕೋಳಿ, ಕುರಿ ಸಾಕಣೆ ಕೈಗೊಂಡಲ್ಲಿ ಹೆಚ್ಚಿನ ಲಾಭ ಗಳಿಸುಬಹುದಾಗಿದೆ ಎಂದರು. ನಗರಸಭಾಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಮತ್ತು ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಯೋಜನೆಯ ಮಾಹಿತಿಯ ಕೊರತೆ ಇದೆ ಎಂದರು.
ಅಭಿಲಾಷ್ ಕಂಪನಿ ಯೋಜನಾಧಿಕಾರಿ ಸ್ಟಾನಿ ಲೋಬೋ ಮಾತನಾಡಿ, ರೈತರಿಗೆ ಕೋಳಿ ಸಾಕಣೆ ಸ್ವ ಉದ್ಯೋಗ ನೀಡುತ್ತದೆ. ಅ ಕಡಿಮೆ ಬಂಡವಾಳದಲ್ಲಿ ಅಧಿಕ ಲಾಭ ಗಳಿಸುವ ಸಾಧನವೂ ಆಗಿದೆ. ಪ್ರಮುಖವಾಗಿ ಬಿವಿ380 ತಳಿಯ ಕೋಳಿ ಉತ್ಪಾದನೆ ಗೃಹಾಧಾರಿತ ವ್ಯಾಪಾರಕ್ಕೆ ಸೂಕ್ತ ಎಂದರು.
ತಾಲೂಕು ಯೋಜನಾಧಿಕಾರಿ ಯಶೋಧಾಶೆಟ್ಟಿ, ನಗರಸಭಾ ಸದಸ್ಯೆ ಸುನೀತಾ ಜಯರಾಮೇಗೌಡ, ಅಭಿಲಾಷ್ ಕಂಪನಿ ಸುಧಾಕರ್, ಯೋಜನೆಯ ತಾಲೂಕು ಕೃಷಿ ಅಧಿಕಾರಿ ಯೋಗೀಶ್ ಇತರರು ಭಾಗವಹಿಸಿದ್ದರು.