ಮಣಿಪಾಲ: ಕೋವಿಡ್ ಸೋಂಕಿನಿಂದಾಗಿ ಜಾಗತಿಕ ಅರ್ಥವ್ಯವಸ್ಥೆಯೇ ಅಸ್ತವ್ಯಸ್ಥಗೊಂಡಿದ್ದು, ಬಹುತೇಕ ಉದ್ಯಮ ಕ್ಷೇತ್ರಗಳು ಶಾಶ್ವತವಾಗಿ ಮುಚ್ಚುವ ಭೀತಿಯಲ್ಲಿವೆ. ಆರ್ಥಿಕತೆಯ ಪ್ರಮುಖ ಆದಾಯ ಮೂಲಗಳೆಂದೇ ಗುರುತಿಸಿಕೊಂಡಿರುವ ಪ್ರವಾಸೋದ್ಯಮ ಹಾಗೂ ವಿಮಾನಯಾನ ಸಂಸ್ಥೆಗಳು ಹಿಂದೆಂದೂ ಕಾಣದ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ನಡುವೆ ಸಿಲುಕಿ ಒದ್ದಾಡುತ್ತಿವೆ. ಇಷ್ಟು ಮಾತ್ರವಲ್ಲದೇ ಭಾರಿ ನಷ್ಟ ಅನುಭವಿಸುತ್ತಿವೆ.
ಕೆಲವು ಕಂಪೆನಿಗಳು ನಷ್ಟದ ಹೊಡೆತವನ್ನು ತಗ್ಗಿಸಲು ಸಿಬಂದಿ, ಸಂಬಳ ಕಡಿತ ಹಾಗೂ ಸಂಬಳ ರಹಿತ ರಜೆ ಮೊದಲಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಷ್ಟೆಲ್ಲ ಸಂಕಷ್ಟಗಳ ನಡುವೆಯೇ ವಾಯುಯಾನ ಕ್ಷೇತ್ರಕ್ಕೆ ಮತ್ತೂಂದು ತಲೆನೋವು ಶುರುವಾಗಿದ್ದು, ವಿಮಾನ ಟೇಕ್ ಆಫ್ ಆಗದ ಕಾರಣ ಲೈಸನ್ಸ್ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಪ್ರಯಾಣಿಕರಿಲ್ಲದ ಹಾಗೂ ಪ್ರಯಾಣ ನಿರ್ಬಂಧದ ಕಾರಣದಿಂದ ಸದ್ಯ ನಿಗದಿಗಿಂತಲೂ ಶೇ.50ಕ್ಕೂ ಕಡಿಮೆ ಹಾರಾಟ ನಡೆಸುತ್ತಿರುವ ವಿಮಾನ ಸಂಸ್ಥೆಗಳಿಗೆ ಪ್ರಯಾಣಿಕರಿಲ್ಲದಿದ್ದರೂ ಟೇಕ್ ಆಫ್ ಆಗುವ ವಿಚಿತ್ರ ಸಮಸ್ಯೆಯೊಂದು ಸದ್ಯ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ಏರ್‌ಬಸ್ ಎಸ್‌ಇ ಎ380 ವಿಮಾನ ದಕ್ಷಿಣ ಕೊರಿಯಾದ ವಾಯು ಮಾರ್ಗದಲ್ಲಿ ಸತತ ಮೂರು ದಿನಗಳ ಕಾಲ ಹಲವು ಗಂಟೆಗಳವರೆಗೆ ಹಾರಾಟ ನಡೆಸಿದ್ದು, ಲೈಸನ್ಸ್ ಉಳಿಸಿಕೊಳ್ಳುವುದಕ್ಕಾಗಿ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್ ಪ್ರಕ್ರಿಯೆ ನಡೆಸಿದೆ. 495 ಆಸನ ಸಾಮರ್ಥ್ಯವಿರುವ ಈ ವಿಮಾನ ಒಮ್ಮೆ ಟೇಕ್ ಆಪ್ ಆದರೆ ಭಾರೀ ಹಣ ಖರ್ಚಾಗುತ್ತದೆ. ಆದರೂ ಲೈಸನ್ಸ್ ಕಳೆದುಕೊಳ್ಳದಿರಲು ವಿಮಾನ ಹಾರಾಟ ಅನಿವಾರ್ಯ ಎಂದು ಹೇಳಿವೆ.
ಇನ್ನು ಬೇರೆ ದೇಶಗಳಲ್ಲಿರುವ ಸಿಮ್ಯುಲೇಟರ್‌ಗಳಲ್ಲಿ ಅಭ್ಯಾಸ ನಡೆಸಬೇಕೆಂದರೆ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಗೊಳ್ಳ ಬೇಕಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಆರಂಭ ಅಸಾಧ್ಯವಾಗಿದ್ದರಿಂದ ಹಲವು ವಿಮಾನಯಾನ ಸಂಸ್ಥೆಗಳು ತೊಂದರೆಗೀಡಾಗಿವೆ. ಸೂಪರ್ ಜಂಬೋ ಜೆಟ್‌ಗಳ ಹಾರಾಟಕ್ಕೆ ಪರವಾನಗಿ ಚಾಲ್ತಿಯಲ್ಲಿ ಇರಬೇಕೆಂದರೆ, 90 ದಿನಗಳಲ್ಲಿ ಕನಿಷ್ಠ 3 ಬಾರಿಯಾದರೂ ಪೈಲಟ್ ಅಂತಹ ವಿಮಾನವನ್ನು ಟೇಕ್‌ಆಫ್ ಹಾಗೂ ಲ್ಯಾಂಡಿಂಗ್ ಮಾಡಿರಬೇಕು.