Advertisement

ಪರಿಸರವಿಡೀ ದುರ್ನಾತ: ಪುತ್ಯೆ ಭಾಗದಲ್ಲಿ ಸಾಂಕ್ರಾಮಿಕ ರೋಗ ಭೀತಿ

10:30 AM Jan 31, 2018 | Team Udayavani |

ನೆಲ್ಯಾಡಿ: ನೆಲ್ಯಾಡಿಯಿಂದ ಕೊಕ್ಕಡವನ್ನು ಸಂಪರ್ಕಿಸುವ ಅತೀ ಹತ್ತಿರದ ಸಂಪರ್ಕ ರಸ್ತೆಯಲ್ಲಿ ನೆಲ್ಯಾಡಿಯಿಂದ 1.5 ಕಿ.ಮೀ. ದೂರದ ಪುತ್ಯೆ ಎಂಬಲ್ಲಿ ರಸ್ತೆ ಬದಿಗೆ ತ್ಯಾಜ್ಯ ಎಸೆಯುವ ಕಿಡಿಗೇಡಿ ಕೃತ್ಯ ಮತ್ತೆ ಆರಂಭವಾಗಿದ್ದು, ಈ ಪರಿಸರದಲ್ಲಿ ದುರ್ನಾತ ಮೂಗಿಗೆ ರಾಚುತ್ತಿದೆ. ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

Advertisement

ರಸ್ತೆ ಬದಿಯಲ್ಲೇ ಎಸೆಯುವ ವಿಕೃತ ಜನರು
ಈ ಪರಿಸರದಲ್ಲಿ ರಾತ್ರಿ ವೇಳೆ ಮಾಂಸದಂಗಡಿಗಳಿಂದ ಗೋಣಿ ಚೀಲದಲ್ಲಿ ತ್ಯಾಜ್ಯಗಳನ್ನು ತಂದು ರಸ್ತೆ ಬದಿಯಲ್ಲೇ ಎಸೆದು ಹೋಗುತ್ತಾರೆ. ಹೀಗೆ ರಸ್ತೆಯ ಪಕ್ಕದಲ್ಲೇ ಎಸೆದು ಹೋಗುವ ತ್ಯಾಜ್ಯಗಳನ್ನು ಕಾಡುಪ್ರಾಣಿಗಳು, ಪಕ್ಷಿಗಳು ಹಾಗೂ ನಾಯಿಗಳು ಮಾರ್ಗಮಧ್ಯೆ ಎಳೆದು ಹಾಕುತ್ತದೆ. ಇಲ್ಲಿ ತ್ಯಾಜ್ಯವನ್ನು ತಂದು ಎಸೆಯುವುದಕ್ಕೆ ಬಾಡಿಗೆ ಕೊಟ್ಟು ವಾಹನಗಳನ್ನು ಗೊತ್ತು ಮಾಡಿರುತ್ತಾರೆ. ಹೀಗಾಗಿ ಬಾಡಿಗೆ ವಾಹನಗಳ ಮೇಲೆ ನಿಗಾ ವಹಿಸುವ ತೀರ್ಮಾನಕ್ಕೆ ಸ್ಥಳೀಯರು ಬಂದಿದ್ದಾರೆ. ನೆಲ್ಯಾಡಿ ಹಾಗೂ ಕೊಕ್ಕಡ ಭಾಗದ ಕೋಳಿ ಅಂಗಡಿಗಳ ಮೇಲೆ ಇಲ್ಲಿನ ಜನ ಅನುಮಾನ ವ್ಯಕ್ತಪಡಿಸುತ್ತಾರೆ. ಇದರೊಂದಿಗೆ ಕೋಳಿ ಅಂಗಡಿಗಳಿಗೆ ಕೋಳಿಗಳನ್ನು ಸರಬರಾಜು ಮಾಡುವ ವಾಹನಗಳ ಚಾಲಕರೂ ತಮ್ಮ ಕಾಣಿಕೆ ಸಲ್ಲಿಸುತ್ತಿದ್ದಾರೆ.

ಪುತ್ಯೆ ಸೇತುವೆಯಿಂದ 200 ಮೀಟರ್‌ ದೂರದ ಮಾಯಿಲಕೋಟೆ ವರೆಗೆ ಗೇರು ನೆಡುತೋಪು ಇದ್ದು, ಈ ಭಾಗದಲ್ಲಿ ಮನೆಗಳಿಲ್ಲದಿರುವುದು ತ್ಯಾಜ್ಯ ಎಸೆಯುವ ಜನರಿಗೆ ಅನುಕೂಲಕರವಾಗಿ ಪರಿಣಮಿಸಿದೆ.

ಹಲವು ವರ್ಷಗಳಿಂದ ಈ ಭಾಗದಲ್ಲಿ ನಿರಂತರವಾಗಿ ತ್ಯಾಜ್ಯಗಳನ್ನು ಎಸೆಯುತ್ತಿರುವ ಬಗ್ಗೆ ‘ಉದಯವಾಣಿ’ ಪತ್ರಿಕೆ ವರದಿ ಮಾಡಿದ ಬೆನ್ನಿಗೇ ನೆಲ್ಯಾಡಿ ಹಾಗೂ ಕೊಕ್ಕಡ ಪಂಚಾಯತ್‌ಗಳ ಆಡಳಿತ ಮಂಡಳಿಗಳು ಮಾಂಸದ ಅಂಗಡಿಗಳಿಗೆ ಸೂಕ್ತ ಎಚ್ಚರಿಕೆ ನೀಡಿದ ಬಳಿಕ ತ್ಯಾಜ್ಯ ಸಮಸ್ಯೆ ಪರಿಹಾರವಾಗಿತ್ತು. ಇದೀಗ ವಿಕೃತ ಮನಸ್ಸಿನ ಜನರು ಮತ್ತೆ ತ್ಯಾಜ್ಯ ಎಸೆಯುವ ಪರಿಪಾಠ ಆರಂಭಿಸಿದ್ದಾರೆ.

ಅಂಗಡಿ ತ್ಯಾಜ್ಯಗಳು ಹಾಗೂ ಸಭೆ ಸಮಾರಂಭಗಳ ಊಟದ ಹಾಳೆ ತಟ್ಟೆ, ಪ್ಲಾಸ್ಟಿಕ್‌ ತಟ್ಟೆಗಳಲ್ಲದೆ, ಮಿಕ್ಕುಳಿದ ಅನ್ನ, ಸಾಂಬಾರನ್ನೂ ಇಲ್ಲಿಯೇ ತಂದು ಸುರಿಯಲಾಗುತ್ತಿದೆ. ಮರಗಳ ತೊಗಟೆಗಳನ್ನೂ ಈ ಭಾಗದಲ್ಲಿ ಎಸೆಯುತ್ತಿದ್ದು, ಇತ್ತೀಚೆಗೆ ಈ ಪ್ರದೇಶದಲ್ಲಿ ಮದ್ಯಪಾನಿಗಳ ತಂಡಗಳೂ ಠಿಕಾಣಿ ಹೂಡುತ್ತಿವೆ. ರಾತ್ರಿ ವೇಳೆ ಗೇರು ನೆಡುತೋಪಿನಲ್ಲಿ ಇರುವ ಒಣಗಿದ ಮುಳಿಹುಲ್ಲಿಗೆ ಕಿಚ್ಚಿಡುವ ಕೆಲಸ ನಡೆಯುತ್ತಿದೆ. ಇವುಗಳ ಸನಿಹದಲ್ಲೇ ವಸತಿ ಪ್ರದೇಶವಿದ್ದು, ಹಲವಾರು ಸಲ ರಾತ್ರಿ ವೇಳೆ ಬೆಂಕಿಯನ್ನು ಆರಿಸಿದ್ದೇವೆ ಎಂದು ಸ್ಥಳೀಯರು ಹೇಳುತ್ತಾರೆ.

Advertisement

ಕಠಿನ ಕ್ರಮಕ್ಕೆ ಆಗ್ರಹ
ಪುತ್ಯೆ ಪರಿಸರದಲ್ಲಿ ಹೀಗೆ ಎಸೆದು ಹೋಗುವ ತ್ಯಾಜ್ಯ ಕೊಳೆತು ನಾರುತ್ತಿದ್ದು, ಪರಿಸರವಿಡೀ ದುರ್ನಾತ ಬೀರುತ್ತಿದೆ. ಈ ರಸ್ತೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳು ಹಾಗೂ ಸಾರ್ವಜನಿಕರು ಈ ತ್ಯಾಜ್ಯದ ದೆಸೆಯಿಂದ ರೋಗಭೀತಿ ಎದುರಿಸುತ್ತಿದ್ದಾರೆ. ಕಾಡುಪ್ರಾಣಿಗಳು ಹಾಗೂ ನಾಯಿಗಳೂ ಕೊಳೆತ ತ್ಯಾಜ್ಯವನ್ನು ತಿಂದು ಸಾಂಕ್ರಾಮಿಕ ರೋಗ ಹರಡುವ ಅಪಾಯ ಎದುರಾಗಿದೆ. ಕೊಕ್ಕಡ ಹಾಗೂ ನೆಲ್ಯಾಡಿ ಪರಿಸರದಲ್ಲಿ ನಾಯಿಗಳಿಗೆ ರೇಬೀಸ್‌, ಮೆದುಳುಜ್ವರ ಮೊದಲಾದ ಕಾಯಿಲೆಗಳು ಹರಡುತ್ತಿದ್ದು, ತ್ಯಾಜ್ಯ ಹಾಕುವವರನ್ನು ಪತ್ತೆಹಚ್ಚಿ ಅವರ ಮೇಲೆ ಕಠಿನ ಕ್ರಮ ಜರುಗಿಸುವಂತೆ ಜನ ಆಗ್ರಹಿಸುತ್ತಿದ್ದಾರೆ.

ಲೈಸೆನ್ಸ್‌ ರದ್ದು ಮಾಡುತ್ತೇವೆ
ಕಳೆದ ವರ್ಷ ಪುತ್ಯೆ ಪರಿಸರದಲ್ಲಿ ತ್ಯಾಜ್ಯ ಸಮಸ್ಯೆಯ ಬಗ್ಗೆ ‘ಉದಯವಾಣಿ’ ವರದಿ ಮಾಡಿ ಬೆಳಕು ಚೆಲ್ಲಿದ ತತ್‌ಕ್ಷಣ ಎಲ್ಲ ಮಾಂಸದಂಗಡಿಗಳಿಗೆ ಭೇಟಿ ನೀಡಿ, ತ್ಯಾಜ್ಯ ವಿಲೇವಾರಿಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಅನ್ನುವುದರ ಬಗ್ಗೆ ಪರಿಶೀಲಿಸಿ, ಮುಂದಿನ ದಿನಗಳಲ್ಲಿ ತ್ಯಾಜ್ಯ ಎಸೆಯುವ ಬಗ್ಗೆ ಮಾಹಿತಿ ದೊರಕಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಅನ್ನುವ ಎಚ್ಚರಿಕೆ ನೀಡಿದ್ದೆವು. ನಂತರ ತ್ಯಾಜ್ಯ ಎಸೆಯುವುದು ನಿಂತಿತ್ತು. ಇದೀಗ ಪುನಃ ಎಲ್ಲ ಅಂಗಡಿಗಳಿಗೆ ಭೇಟಿ ನೀಡಿ, ಸೂಕ್ತ ಎಚ್ಚರಿಕೆ ಕೊಟ್ಟು, ತ್ಯಾಜ್ಯ ಎಸೆಯುವುದು ಗಮನಕ್ಕೆ ಬಂದಲ್ಲಿ ಅಂಗಡಿ ಲೈಸೆನ್ಸ್‌ ರದ್ದು ಮಾಡುತ್ತೇವೆ.
ಜಯಾನಂದ ಬಂಟ್ರಿಯಾಲ್‌
  ಅಧ್ಯಕ್ಷರು, ನೆಲ್ಯಾಡಿ ಗ್ರಾ.ಪಂ

 ಗುರುಮೂರ್ತಿ ಎಸ್‌. ಕೊಕ್ಕಡ

Advertisement

Udayavani is now on Telegram. Click here to join our channel and stay updated with the latest news.

Next