ವಾಡಿ: ಪಟ್ಟಣದಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆ ಗೇರಿದ ಬರೋಬ್ಬರಿ 20 ವರ್ಷಗಳ ನಂತರ ಹೃದಯ ಕಾಯಿಲೆ ತಪಾ ಸಣೆ ಸೌಲಭ್ಯ ಜನರ ಸೇವೆಗೆ ಸಿದ್ಧವಾಗಿದೆ. ಎಚ್ಚೆತ್ತ ಜನರು ಪ್ರಶ್ನೆ ಕೇಳಿದ ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಜುಲೈ 16ರ ಗುರುವಾರದಿಂದಲೇ ಇಸಿಜಿ ಪರೀಕ್ಷೆ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ.
ಹೃದಯದ ಲಯ ವೈಪರಿತ್ಯ ಪರೀಕ್ಷಿಸುವ ಎಲೆಕ್ಟ್ರೋಕಾರ್ಡಿ ಯೋಗ್ರಾಮ್ ಎನ್ನುವ ಇಸಿಜಿ ತಪಾಸಣೆ ಯಂತ್ರ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೃದಯದ ಬಡಿತ ಮತ್ತು ವಿದ್ಯುತ್ ಚಟುವಟಿಕೆಗಳನ್ನು ಪರೀಕ್ಷಿಸಲು ಯುವಕರು ಇನ್ನುಮುಂದೆ ತಾಲೂಕು ಆಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಗೆ ಅಲೆಯುವ ಅಗತ್ಯವಿಲ್ಲ. ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ ಕೆಲ ಯುವಕರಿಗೆ ನಮ್ಮಲ್ಲಿ ಇಸಿಜಿ ಸೌಲಭ್ಯ ಲಭ್ಯವಿಲ್ಲ ಎಂದು ಉತ್ತರಿಸಿ ತಾಲೂಕು ಆಸ್ಪತೆಯತ್ತ ಬೆರಳು ತೋರಿಸಿದ್ದ ವೈದ್ಯರು, ಶುಕ್ರವಾರ ಇದೇ ಆಸ್ಪತ್ರೆಯಲ್ಲಿ ಇಸಿಜಿ ಪರೀಕ್ಷೆಗೆ ಚಾಲನೆ ನೀಡಿದ್ದಾರೆ.
ಆದರೆ ಇದಕ್ಕೂ ಮೊದಲು ಈ ಕೊರತೆ ಕುರಿತು ಮೇಲಧಿಕಾರಿಗೆ ಯುವಕರು ದೂರು ಕೊಟ್ಟ ತಕ್ಷಣ ಎಚ್ಚೆತ್ತ ತಾಲೂಕು ವೈದ್ಯಾಧಿಕಾರಿ ಡಾ| ಅಮರದೀಪ ಪವಾರ, ಸಮಸ್ಯೆ ಅರಿತು ಒಂದು ದಿನವೂ ತಡಮಾಡದೇ ವಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇಸಿಜಿ ಪರೀಕ್ಷಾ ಯಂತ್ರವನ್ನು ಕಳಿಸಿಕೊಟ್ಟು ಕರ್ತವ್ಯ ಪ್ರಜ್ಞೆ ಮೆರೆದರು.
ಡಾ| ಪುಷ್ಪಾ ತಿಳಗೂಳ ಹಾಗೂ ಡಾ| ನೋಮನ್, ಸಿಸ್ಟರ್ ವಿಲಾಸಿನಿ ಚಕ್ರವರ್ತಿ, ಸುಗಲಾದೇವಿ ಪೂಜಾರಿ ಶುಕ್ರವಾರ ಹಲವು ರೋಗಿಗಳ ಇಸಿಜಿ ಪರೀಕ್ಷೆ ನಡೆಸಿದರು.
ಹೃದಯದ ರೋಗ ನಿರ್ಣಯ ತಿಳಿಯಲು ಇಸಿಜಿ ಉತ್ತಮ ಪರೀಕ್ಷಾ ವಿಧಾನವಾಗಿದೆ. ಇಂತಹದ್ದೊಂದು ಅತ್ಯಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಿದ್ದು ಸ್ವಾಗತಾರ್ಹ. ಆದರೆ ಪರೀಕ್ಷೆ ನಡೆಸಲು ನುರಿತ ತಜ್ಞರ ಅವಶ್ಯಕತೆಯಿದೆ. ಆಸ್ಪತ್ರೆಯಲ್ಲಿ ಇದಕ್ಕೊಂದು ಪ್ರತ್ಯೇಕ ಕೋಣೆ ಮೀಸಲಿಟ್ಟು, ಅಗತ್ಯ ಸಿಬ್ಬಂದಿ ನೇಮಿಸಬೇಕು. ಸ್ಥಳೀಯ ಆರೋಗ್ಯ ಸಿಬ್ಬಂದಿಗೂ ಈ ಯಂತ್ರ ಬಳಸುವ ತರಬೇತಿ ಕೊಡಬೇಕು. ರಾತ್ರಿ ಪಾಳಿ ವೈದ್ಯರ ಕೊರತೆ ನೀಗಿದರೆ ಅನುಕೂಲವಾಗುತ್ತದೆ.
-ಸಂದೀಪ ಕಟ್ಟಿ , ಯುವ ಮುಖಂಡ