ನವದೆಹಲಿ: ಒಂದೇ ದಿನದಲ್ಲಿ ಮತ ಎಣಿಕೆ ನಡೆಯಲಿದ್ದರೂ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ಗೆ ಪ್ರತ್ಯೇಕ ದಿನಾಂಕದಂದು ಚುನಾವಣಾ ವೇಳಾಪಟ್ಟಿಯನ್ನು ಏಕೆ ಘೋಷಿಸಿತು ಎಂಬುದಕ್ಕೆ ಚುನಾವಣಾ ಆಯೋಗವು ದೇಶದ ಜನತೆಗೆ ವಿವರಣೆ ನೀಡಬೇಕು ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.
”ಹಲವಾರು ಸಮಾವೇಶಗಳನ್ನು ನಡೆಸಲು ಬಿಜೆಪಿಗೆ ಸಮಯ ಸಿಕ್ಕಿತು ಮತ್ತು ಗುಜರಾತ್‌ನಲ್ಲಿ ಸಾರ್ವಜನಿಕ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ” ಎಂದು ಕಾಂಗ್ರೆಸ್‌ನ ಗುಜರಾತ್ ಉಸ್ತುವಾರಿ ರಘು ಶರ್ಮಾ ಅವರು ಆರೋಪಿಸಿದರು.
ಇದನ್ನೂ ಓದಿ : ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ: ಎರಡು ಹಂತಗಳಲ್ಲಿ ಚುನಾವಣೆ
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಸರಕಾರದ ಒತ್ತಡದ ನಡುವೆಯೂ ಅಂತಿಮವಾಗಿ ಗುಜರಾತ್ ಚುನಾವಣೆಯನ್ನು ಘೋಷಿಸಿದ್ದಕ್ಕಾಗಿ ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. “ಎರಡೂ ರಾಜ್ಯಗಳ ಚುನಾವಣೆಯ ಮತ ಎಣಿಕೆ ಒಂದೇ ದಿನದಲ್ಲಿ ನಡೆಯಲಿದ್ದು, ಬೇರೆ ಬೇರೆ ದಿನಾಂಕಗಳಲ್ಲಿ ಚುನಾವಣೆಯನ್ನು ಏಕೆ ಘೋಷಿಸಲಾಯಿತು ಎಂಬುದಕ್ಕೆ ಸಾಂವಿಧಾನಿಕ ಸಂಸ್ಥೆಯಾಗಿ ಚುನಾವಣಾ ಆಯೋಗವು ವಿವರಣೆಯನ್ನು ನೀಡಬೇಕು” ಎಂದು ಶರ್ಮಾ ಹೇಳಿದರು.
ಮೋರ್ಬಿ ಸೇತುವೆ ಕುಸಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದುರಂತ ಸಂಭವಿಸಿದಾಗ ಕಾಂಗ್ರೆಸ್ ಎಲ್ಲಾ ರಾಜಕೀಯ ಕಾರ್ಯಕ್ರಮಗಳನ್ನು ರದ್ದುಗೊಳಿಸಿತ್ತು ಆದರೆ ಪ್ರಧಾನಿ “ಅಧಿಕೃತ ಕಾರ್ಯಕ್ರಮಗಳೊಂದಿಗೆ ಮುಂದಕ್ಕೆ ಹೋದರು” ಎಂದು ಕಿಡಿ ಕಾರಿದರು.