Advertisement

ಸುಲಭ ನಿರ್ಧಾರ ಮತ್ತು ಅಂಟಿಕೊಂಡ ಕಷ್ಟ

12:56 AM Aug 22, 2020 | mahesh |

ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನೇಕರಿಗೆ ಬಹಳ ಕಷ್ಟದ ಕೆಲಸ. ಉದ್ಯೋಗದ ಆಯ್ಕೆ, ಮದುವೆ, ಮಕ್ಕಳಾಗು ವುದು, ಅಧ್ಯಾತ್ಮಿಕ ಸಾಧನೆ – ಹೀಗೆ ಹೆಜ್ಜೆ ಹೆಜ್ಜೆಗೂ ದ್ವಂದ್ವಗಳಲ್ಲಿ ಸಿಕ್ಕಿಬೀಳುತ್ತಾರೆ. ಅದನ್ನು ಆರಿಸಿಕೊಳ್ಳುವುದೋ ಇದೋ ಎಂಬ ಗೊಂದಲ.

Advertisement

ಇಂತಹ ದ್ವಂದ್ವದಿಂದ ಪಾರಾಗಬೇಕು ಎಂದಾದರೆ, ನಿಮ್ಮ ಅಸ್ತಿತ್ವವನ್ನೇ ಒಂದಿಷ್ಟು ಗಮನಿಸಿ ನೋಡಿ ಎನ್ನುತ್ತಾರೆ ಸದ್ಗುರು. ಈ ಜಗತ್ತಿನಲ್ಲಿ ನಾವು ಇರಲಿಲ್ಲ; ನಮ್ಮ ತಾಯಿ-ತಂದೆಯಿಂದಾಗಿ ಅಸ್ತಿತ್ವಕ್ಕೆ ಬಂದವು. ಹುಟ್ಟುವಾಗ ಏಕಾಂಗಿಯಾಗಿ ದ್ದೆವು. ಆ ಬಳಿಕ ಒಂದೊಂದಾಗಿ ಒಂದೊಂದಾಗಿ ಎಲ್ಲದಕ್ಕೂ ಅಂಟಿಕೊಳ್ಳುತ್ತ ಬಂದೆವು, ಹಲವನ್ನು ನಮ್ಮ ಸುತ್ತ ಅಂಟಿಸಿಕೊಂಡೆವು. ವಿದ್ಯಾಭ್ಯಾಸ, ಉದ್ಯೋಗ, ಮಡದಿ, ಮಕ್ಕಳು, ಬಂಧು ಬಳಗ, ಅಂತಸ್ತು… ಹೀಗೆ.

ನಮ್ಮ ಸುತ್ತಮುತ್ತ ಹೀಗೆ ಬಂಧನಗಳನ್ನು ಸೃಷ್ಟಿಸಿಕೊಂಡದ್ದರಿಂದಲೇ ನಿರ್ಧಾರಗಳನ್ನು ತೆಗೆದು ಕೊಳ್ಳುವುದು ಕಷ್ಟವಾಗುತ್ತಿರುವುದು. ನಿಜಕ್ಕೂ ಅದು ದೊಡ್ಡ ವಿಷಯವೇ ಅಲ್ಲ. ಆದರೆ ನಮ್ಮ ಸುತ್ತ ಮುಳ್ಳುಬೇಲಿಯ ಹಾಗೆ ಸಾವಿರಾರು ಬಂಧನಗಳನ್ನು ನಾವೇ ಹಾಕಿಕೊಂಡಿದ್ದೇವೆ. ಮುಳ್ಳುತಂತಿಯ ಮುಳ್ಳುಗಳು ಎಲ್ಲ ದಿಕ್ಕಿಗೂ ಇರುತ್ತವೆ. ಹೀಗಾಗಿ ಎತ್ತ ತಿರುಗಿದರೂ ಎತ್ತ ಚಲಿಸಿದರೂ ನೋವೇ. ಹಾಗೆಂದು ಅಲ್ಲೇ ಇರಲಾಗದು, ಚಲಿಸಲೇ ಬೇಕು. ಬದುಕು ಕೂಡ ಹಾಗೆಯೇ ಸ್ಥಾವರವಲ್ಲ; ನಾವು ಮುಂದೆ ಹೋಗಲೇ ಬೇಕು, ಇದ್ದಲ್ಲಿಯೇ ನಿಲ್ಲಲಾಗದು. ಆದರೆ ನಮ್ಮ ಸುತ್ತ ನಾವೇ ಹೇರಿಕೊಂಡ ಬಂಧನಗಳು ಅಷ್ಟದಿಕ್ಕುಗಳಲ್ಲೂ ಇರುವ ಕಾರಣ ಈ ನಿರ್ಧಾರ ಅಥವಾ ಆ ನಿರ್ಧಾರ – ಎರಡರಿಂದಲೂ ನೋವು ಖಚಿತ.

ಹಾಗಾದರೆ ಈ ಮುಳ್ಳುತಂತಿಯ ಬೇಲಿಯಿಂದ ಹೊರಬರುವುದು ಹೇಗೆ?  ಬಹಳ ಸುಲಭ, ಅವು ಮಾಯದ ಮುಳ್ಳುಗಳು. ನಾವು ಯಾವುದರಿಂದ ಬಿಡುಗಡೆ ಹೊಂದಲು ಬಯಸಿದ್ದೇವೆಯೋ ಅದು ನಿಜಕ್ಕೂ ನಾವು ಬಯಸಿ, ಆಶಿಸಿ ಪಡೆದದ್ದು. ಉದ್ಯೋಗ ಇರಬಹುದು, ಪತ್ನಿಯೇ ಆಗಿರಬಹುದು, ಮಕ್ಕಳು ಇರಬಹುದು, ಈಗಿರುವ ಮನೆಯಾಗಿರ ಬಹುದು; ನಾವೇ ನಮ್ಮ ಸುತ್ತ ಮುತ್ತ ಕಟ್ಟಿಕೊಂಡದ್ದು ತಾನೇ! ನಿಜಕ್ಕೂ ಅದರ ಜತೆಗೆ ಇರುವುದು ನಮಗೆ ಸಂತೋಷದ ವಿಷಯ ಆಗಿರಬೇಕಿತ್ತು. ಆದರೆ ಈಗ ಏಕೆ ದುಃಖ ಆಗುತ್ತಿದೆ, ನಿರ್ಧಾರ ಕಷ್ಟ ಆಗುತ್ತಿದೆ ಎಂದರೆ, ನಾವು ಅದಕ್ಕೆ ಮಿತಿಮೀರಿ ಅಂಟಿ ಕೊಂಡಿದ್ದೇವೆ. ಇದ ರಿಂದಾಗಿಯೇ ಬದುಕಿನ ಸರಳ ತಿರುವುಗಳೂ ನಿರ್ಧಾರಗಳೂ ನಮಗೆ ನೋವು ಕೊಡುತ್ತವೆ. ಅಂದರೆ ನಾವು ಸೋಲುವಂಥ ಸ್ಥಿತಿ ಯನ್ನು ನಿರ್ಮಿಸಿ ಕೊಂಡದ್ದು ಸ್ವತಃ ನಾವೇ, ಇನ್ಯಾರೋ ಆ ಸ್ಥಿತಿಯನ್ನು ತಂದೊಡ್ಡಿದ್ದಲ್ಲ. ಹಾಗಾಗಿ ಅದನ್ನು ಬದಲಾಯಿಸಿಕೊಳ್ಳ ಬೇಕಾದವರೂ ನಾವೇ.

ನಮ್ಮ ದೇಹದೊಂದಿಗೆ ನಾವು ಗುರುತಿಸಿ ಕೊಳ್ಳದೆ ಇದ್ದರೆ ಆಗ ಇನ್ನೊಬ್ಬರೊಂದಿಗೆ ಅಥವಾ ಇನ್ನೊಂದರೊಂದಿಗೆ ಗುರುತಿಸಿ ಕೊಳ್ಳುವುದಿಲ್ಲ. ಒಬ್ಬರೊಂದಿಗೆ ಅಥವಾ ಯಾವುದೇ ವಸ್ತು, ವಿಷಯದೊಂದಿಗೆ “ಇರುವುದು’ ಮತ್ತು ಅವರು ಅಥವಾ ಆ ವಸ್ತು, ವಿಷಯಕ್ಕೆ “ಅಂಟಿಕೊಳ್ಳುವುದು’ ಎರಡೂ ಬೇರೆ ಬೇರೆ. “ಇರುವುದು’ ಬದುಕನ್ನು ಕಟ್ಟುತ್ತದೆ, ಬೆಳೆಸುತ್ತದೆ; “ಅಂಟಿಕೊಳ್ಳುವುದು’ ನೋವು ಉಂಟು ಮಾಡುತ್ತದೆ, ಸಾಯಿಸುತ್ತದೆ.

Advertisement

ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ
ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು edit@udayavani.comಗೆ ಕಳುಹಿಸಬಹುದು. ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next