Advertisement

ವಿಜಯಪುರ; ಜನರ ಎದೆಯಲ್ಲಿ ಭೂಕಂಪದ ಕಂಪನ

06:24 PM Oct 15, 2022 | Team Udayavani |

ವಿಜಯಪುರ: ಕಳೆದ ಎರಡು ವರ್ಷದಿಂದ ನಿರಂತರವಾಗಿ ಬಸವನಾಡನ್ನು ಕಾಡುತ್ತಿರುವ ಭೂಕಂಪ, ಕಳೆದ ಒಂದು ವಾರದಿಂದ ಅದರಲ್ಲೂ ಎರಡು ದಿನಗಳಿಂದ ಪದೇ ಪದೇ ಕಂಪಿಸುತ್ತಿದ್ದು ವಿಜಯಪುರ ಜಿಲ್ಲೆಯ ಜನರಲ್ಲಿ ವಸುಂಧರೆ ನಡುಕ ಸೃಷ್ಟಿಸಿದ್ದಾಳೆ.

Advertisement

ವಿಜಯಪುರ ನಗರದಲ್ಲಿ ಬುಧವಾರ ಮಧ್ಯರಾತ್ರಿ, ಗುರುವಾರ ಬೆಳಗ್ಗೆ ಹಾಗೂ ಶುಕ್ರವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಮಹಾನಗರ ಪಾಲಿಕೆ ಚುನಾವಣೆ ತುರಿಸಿನಲ್ಲಿರುವ ನಗರದ ಜನತೆಗಂತೂ ಪದೇ ಪದೇ ಸಂಭವಿಸುತ್ತಿರುವ ಭೂಕಂಪನ ಆತಂಕದಲ್ಲಿ ಮುಳುಗುವಂತೆ ಮಾಡಿದೆ.

ಭೂಮಿಯ ಆಳದಲ್ಲಿ ಪದೇ ಪದೇ ಭಾರೀ ಸದ್ದಿನೊಂದಿಗೆ ಕಂಪನ ಸೃಷ್ಟಿಸುತ್ತಿರುವ ಭೂದೇವಿ ಜನರನ್ನು ಭಯದಲ್ಲಿ ಬದುಕುವಂತೆ ಮಾಡಿದ್ದಾಳೆ. ಹಿಂದೆ ನಡೆದ ನಿರಂತರ ಭೂಕಂಪದ ಹಿನ್ನೆಲೆಯಲ್ಲಿ ಜನತೆಯ ಆಗ್ರಹದ ಮೇರೆಗೆ ಜಿಲ್ಲಾಡಳಿತದ ಕೋರಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಘಟಕದ ತಜ್ಞರು ಜಿಲ್ಲೆಗೆ ಭೇಟಿ ನೀಡಿದ್ದರು.

ಇದಕ್ಕೂ ಮೊದಲು ಭೂಗರ್ಭ ನಿವೃತ್ತ ಶಾಸ್ತ್ರಜ್ಞರೊಬ್ಬರು ನಗರದ ವ್ಯಕ್ತಿಯೊಬ್ಬರೊಂದಿಗೆ ಮಾತನಾಡಿದ್ದ ಮೊಬೈಲ್‌ ಕರೆಯ ಧ್ವನಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್‌ ಆಗಿ ಜನತೆಯಲ್ಲಿ ಇನ್ನಿಲ್ಲದಂತೆ ಆತಂಕ ಸೃಷ್ಟಿಸಿತ್ತು.

ಇದೀಗ ಶುಕ್ರವಾರ ಬೆಳಗ್ಗೆ 8:02 ನಿಮಿಷಕ್ಕೆ, ಗುರುವಾರ ರಾತ್ರಿ 11:42, ಗುರುವಾರ ಬೆಳಗ್ಗೆ 6:19ಕ್ಕೆ ಭೂಮಿ ಕಂಪಿಸಿದೆ. ಅಕ್ಟೋಬರ್‌ 2ರಂದು ಬೆಳಗ್ಗೆ 9:48ರ ಸುಮಾರಿಗೂ ಭೂಮಿ ಕಂಪಿಸಿದ್ದು, ಜಿಲ್ಲೆಯ ಜನರನ್ನು ನಿರಂತರ ಆತಂಕದಲ್ಲೇ ಜೀವಿನ ನಡೆಸುವಂತೆ ಮಾಡಿದೆ.

Advertisement

ಸೆಪ್ಟೆಂಬರ್‌ 30ರಂದು ಉಕ್ಕಲಿಯಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿತ್ತು. ಅಲ್ಲಿಂದ ಇಲ್ಲಿವರೆಗೆ ತಿಂಗಳಲ್ಲಿ ಹಲವು ಬಾರಿ ಭೂಕಂಪನ ಸಂಭವಿಸುತ್ತಲೇ ಇದ್ದರೂ, ಬಹತೇಕ ಸಂದರ್ಭದಲ್ಲಿ ಜಿಲ್ಲಾಡಳಿತ ಭೂಕಂಪನದ ನಿಖರ ಮಾಹಿತಿ ಇಲ್ಲ ಎಂದು ಅಲ್ಲಗಳೆಯುತ್ತಲೇ ಬರುತ್ತಿದೆ.

ಇದರ ಹೊರತಾಗಿ ಜನರ ಒತ್ತಡದ ಮೇರೆಗೆ ಆಗಸ್ಟ್‌ 26ರಂದು ಬೆಂಗಳೂರಿನ ವಿಶೇಷ ತಂಡ ಉಕ್ಕಲಿ ಸೇರಿದಂತೆ ಮೊದಲಾದ ಗ್ರಾಮಗಳಿಗೆ ಭೇಟಿ ನೀಡಿತ್ತು. ಉಕ್ಕಲಿಯಲ್ಲಿ ತಾತ್ಕಾಲಿಕ ಮಾನಿಟರಿಂಗ್‌ ಕೇಂದ್ರ ಆರಂಭಿಸಿ ಪೂರಕ ಯಂತ್ರ ಅಳವಡಿಕೆ ಮಾಡಿತ್ತು.

ಜಿಲ್ಲೆಯ ಜನರ ಆಗ್ರಹದ ಮೇರೆಗೆ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಘಟಕದಿಂದ ವಿಶೇಷ ತಂಡದ ಭೂ ವಿಜ್ಞಾನಿ ಜಗದೀಶ ಅವರನ್ನೊಳಗೊಂಡ ತಂಡ ಕಳೆದ ಆ. 26ರಂದು ವಿಜಯಪುರ ಜಿಲ್ಲೆಯ ಉಕ್ಕಲಿ, ಹೆಗಡಿಹಾಳ ಮೊದಲಾದ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿತ್ತು.

ಉಕ್ಕಲಿಯಲ್ಲಿ ತಾತ್ಕಾಲಿಕ ಭೂಕಂಪನ ಮಾಪನ ಅಳವಡಿಸಲಾಗಿದೆ, ಭೂಗರ್ಭ ವಿಜ್ಞಾನದ ಪರಿಭಾಷೆಯಲ್ಲಿ ಕ್ಲೋಸ್‌ ಮಾನಿಟರಿಂಗ್‌ ವ್ಯವಸ್ಥೆ ಆಧರಿಸಿ ದತ್ತಾಂಶ ಸಂಗ್ರಹ, ಪರಿಸ್ಥಿತಿ ಅಧ್ಯಯನ ಮಾಡಿ 15 ದಿನಗಳಲ್ಲಿ ವರದಿ ನೀಡಿ, ಜಿಯೋಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ರಾಕ್‌ ಸೈನ್ಸ್‌ ಮೊದಲಾದ ಪ್ರತಿಷ್ಠಿತ ಭೂ ವಿಜ್ಞಾನಕ್ಕೆ ಸಂಬಂಧಿಸಿದ ಕೇಂದ್ರಗಳಿಗೂ ಸಹ ಈ ವಿಷಯವಾಗಿ ಮಾರ್ಗದರ್ಶನ ಮಾಡಿ, ತಜ್ಞರನ್ನು ಕಳುಹಿಸುವಂತೆ ವಿನಂತಿರೂಪದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ವಿವರಿಸಿದ್ದರು. ಕಳೆದ ನಾಲ್ಕೈದು ವರ್ಷಗಳಿಂದ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಸುರಿದ ಮಳೆ ಭೂಮಿಯ ಆಳದಲ್ಲಿ ಸೇರಿಕೊಂಡು, ಭೂಗರ್ಭದಲ್ಲಿ ಜಲಸಂಚಾರದ ಒತ್ತಡ ಹೆಚ್ಚಿಸಿದೆ.

ಭೂಗರ್ಭದಲ್ಲಿನ ಕಲ್ಲಿನ ಪದರಗಳು ಮಳೆ ನೀರಿನ ಒತ್ತಡದಿಂದ ಉಂಟಾಗುವ ಬದಲಾವಣೆಗಳು, ಭೂಮಿಯ ಚಲನೆ ಭೂಗರ್ಭದ ಶಬ್ದಕ್ಕೆ ಕಾರಣವಾಗುತ್ತಿದೆ. ಇದರಿಂದ ಕಂಪನವೂ ಉಂಟಾಗುತ್ತಿದೆ ಎಂದು ಸಮಜಾಯಿಸಿ ನೀಡಿದ್ದರು. ಇದೇ ಹಂತದಲ್ಲಿ ಕರ್ನಾಟಕದ ಇತರೆ ಭಾಗಗಳು ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿ ಭೂಕಂಪನದ ಇದೇ ರೀತಿಯ ಅನುಭವ ಆಗುತ್ತಿರುವುದನ್ನು ವಿವರಿಸಿದ್ದರು.

ಆದರೆ ಅಪಾಯ ರಹಿತವಾಗಿರುವ ಈವರೆಗೆಇನ ಭೂಕಂಪನ ಭವಿಷ್ಯದಲ್ಲಿ ಭಾರಿ ಪ್ರಮಾಣದಲ್ಲಿ ಪ್ರಮಾದ ಸೃಷ್ಟಿಸುವ ಅಪಾಯ ಇಲ್ಲವೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದರು. ಇದರೊಂ ಗೆ ಬಸವನಾಡಿಗೆ ಭೂಕಂಪದ ಎಚ್ಚರಿಕೆ ಗಂಟೆ ಇದ್ದೇ ಇದೇ ಎಂಬುವುದನ್ನೂ ಹೇಳಲು ಮರೆತಿರಲಿಲ್ಲ. ಇದು ವಿಜಯಪುರ ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದೆ.

Advertisement

Udayavani is now on Telegram. Click here to join our channel and stay updated with the latest news.

Next