ತೀರ್ಥಹಳ್ಳಿ/ಹೊಸನಗರ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನ ಕೆಲವೆಡೆ ಶನಿವಾರ ತಡರಾತ್ರಿ 1.33ರ ಸುಮಾರಿಗೆ ಭೂಕಂಪವಾಗಿದ್ದು, ದೊಡ್ಡ ಹಾನಿ ಸಂಭವಿಸಿಲ್ಲ.
ತೀರ್ಥಹಳ್ಳಿ ತಾಲೂಕಿನ ವಿಠಲನಗರ ಭೂಕಂಪನದ ಕೇಂದ್ರ ಸ್ಥಾನವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.2ರಷ್ಟು ತೀವ್ರತೆ ದಾಖಲಾಗಿದೆ. ಆದರೆ, ವಾರಾಹಿ ಹಿನ್ನೀರು ಪ್ರದೇಶ ಹಾಗೂ ಮಾಣಿ ಡ್ಯಾಂ ಭಾಗದಲ್ಲಿ ಇದೇ ಮೊದಲ ಬಾರಿಗೆ ಭೂಕಂಪವಾಗಿದ್ದು ಆತಂಕ ಸೃಷ್ಟಿಸಿದೆ. ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಸುತ್ತಮುತ್ತಲಿನ ಗ್ರಾಮಗಳಾದ ಹನಸ, ಕರುಣಾಪುರ, ಅಚ್ಚಾರು, ಹುರುಳಿ, ಕೊಕ್ಕೋಡು, ಗಾರ್ಡರಗದ್ದೆ, ಶಿರೂರು, ಪಡುವಳ್ಳಿ ಹಾಗೂ ಹೊಸನಗರ ತಾಲೂಕಿನ ನಗರ ಹೋಬಳಿಯ ಸುಳುಗೋಡು, ಯಡೂರು, ಮಾಸ್ತಿಕಟ್ಟೆ, ತಮ್ಮೇಮನೆಗಳಲ್ಲಿಯೂ ಭೂಮಿ ಕಂಪಿಸಿದೆ.
ಶನಿವಾರ ತಡ ರಾತ್ರಿ ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿ ಬಂತು. ಇದರಿಂದ ಮಲಗಿದ್ದ ಜನ ಬೆಚ್ಚಿದರು. ಏನಾಗಿರಬಹುದು ಎಂದುಕೊಳ್ಳುವಷ್ಟರಲ್ಲೇ ಭೂಮಿ ಸಣ್ಣದಾಗಿ ಕಂಪಿಸಿದೆ. ಎತ್ತರದ ಸ್ಥಳದಲ್ಲಿಟ್ಟಿದ್ದ ವಸ್ತುಗಳೆಲ್ಲ ಕೆಳಕ್ಕೆ ಬಿದ್ದಿವೆ. ಹೊಸನಗರದ ಕೌರಿ ಎಂಬಲ್ಲಿ ದೇವೇಂದ್ರ ನಾಯ್ಕ ಎಂಬುವರ ಮನೆಯ ಗೋಡೆ ಬಿರುಕು ಬಿಟ್ಟಿದೆ. ಭಯಗೊಂಡ ಜನ ರಾತ್ರಿ ರಸ್ತೆಯಲ್ಲೇ ಕಾಲ ಕಳೆದಿದ್ದಾರೆ.
ಡ್ಯಾಂ ಪ್ರದೇಶದಲ್ಲಿ ಇದೇ ಮೊದಲು: ವಾರಾಹಿ ಜಲವಿದ್ಯುತ್ ಉತ್ಪಾದನಾ ಕೇಂದ್ರದ ಮಾಣಿ ಡ್ಯಾಂ ಬಳಿ ಇದೇ ಮೊದಲ ಬಾರಿಗೆ ಭೂಕಂಪನ ಆಗಿದೆ. ಜಲಾಶಯದ ಸುತ್ತಮುತ್ತ ಮತ್ತು ಹಿನ್ನೀರು ಪ್ರದೇಶದಲ್ಲಿ ಭೂಮಿ ಕಂಪಿಸಿದ್ದರಿಂದ ಇದು ದೊಡ್ಡ ಅನಾಹುತದ ಮುನ್ಸೂಚನೆಯೇ ಎಂದು ಜನ ಭಯಗೊಂಡಿದ್ದಾರೆ. ಇದೇ ವೇಳೆ, ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಹೊಸಂಗಡಿ, ಸಿದ್ದಾಪುರ, ಉಳ್ಳೂರು-74 ಪರಿಸರದಲ್ಲಿಯೂ ಶನಿವಾರ ಮಧ್ಯರಾತ್ರಿ 1.35ರಿಂದ 1.40ರ ಮಧ್ಯೆ ಸುಮಾರು 50 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವಾಗಿದೆ. ಆದರೆ, ಎಲ್ಲಿಯೂ ಕೂಡ ಹಾನಿ ಸಂಭವಿಸಿಲ್ಲ.
ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನ ಕೆಲವೆಡೆ ಭೂಮಿ ಕಂಪಿಸಿದೆ. ಮಾಣಿ ಡ್ಯಾಂ ಸಮೀಪದ ಸುಣ್ಣದಮನೆ ಬಳಿಯ ವಿಠಲನಗರ ಭೂಕಂಪನ ದಾಖಲು ಕೇಂದ್ರದಲ್ಲಿ 2.2ರಷ್ಟು ತೀವ್ರತೆ ದಾಖಲಾಗಿದೆ. ಈ ಭಾಗದಲ್ಲಿನ ಕಲ್ಲು ಗಣಿಗಾರಿಕೆಯಿಂದ ಭೂಮಿ ಕಂಪಿಸಿದೆ ಎನ್ನಲಾಗದು. ಇದಕ್ಕೆ ನಿಖರ ಕಾರಣ ಏನು ಎಂಬ ಬಗ್ಗೆ ತಜ್ಞರಿಂದ ಮಾಹಿತಿ ಪಡೆಯಲಾಗುವುದು. ● ಕೆ.ಎ.ದಯಾನಂದ, ಜಿಲ್ಲಾಧಿಕಾರಿ.