Advertisement
ದೀಪಾವಳಿ ಮುಗಿದರೂ ಸಂಭ್ರಮ ಮಾತ್ರ ಮುಗಿದಿಲ್ಲ. ಹೊಸ ಹೊಸ ಉಡುಪುಗಳನ್ನು ತೊಟ್ಟು ನೆಂಟರಿಷ್ಟರೊಂದಿಗೆ ಸೇರಿ ದೇವಸ್ಥಾನಕ್ಕೆ ಹೋಗಿ ಬರುವ, ಪೂಜೆ ಮಾಡಿ ಸಂಭ್ರಮಿಸುವ ಚಟುವಟಿಕೆಗಳಿನ್ನೂ ನಿಂತಿಲ್ಲ. ಹೀಗಿದ್ದಾಗ, ಆಯಾ ಉಡುಪಿಗೆ ಹೋಲುವಂಥ ಭಿನ್ನ-ಭಿನ್ನವಾದ ಅಲಂಕಾರಿಕ ಆಭರಣಗಳನ್ನು ತೊಡುವುದು ಸಹಜ ತಾನೆ? ಈ ವರ್ಷ ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಆಗುತ್ತಿರುವ ಆಭರಣ, ದೀಪ ಅಥವಾ ಹಣತೆ ಆಕಾರದ ಕಿವಿಯೋಲೆಗಳು!
ನಿಮಗೆ ಪರಿಚಯವಿರುವ ಚಿನ್ನದ ಅಂಗಡಿಯಲ್ಲಿ ನಿಮಗೆ ಬೇಕಾದ ವಿನ್ಯಾಸದಂತೆ ಹಣತೆ ಆಕಾರದ ಕಿವಿಯೋಲೆ ಮಾಡಿಸಬಹುದು. ಇಲ್ಲವೇ ಆನ್‌ಲೈನ್ ಮೂಲಕ ದಿಯಾ ಶೇಫ್ಡ್ ಇಯರ್ ರಿಂಗ್ಸ್ ಆರ್ಡರ್ ಮಾಡಿ ಕೊಂಡುಕೊಳ್ಳಬಹುದು. ಅಂಗಡಿಯಿಂದ ಅಂಗಡಿಗೆ ಅಲೆದಾಡುವುದನ್ನು ತಪ್ಪಿಸಲು ಆನ್‌ಲೈನ್‌ನಲ್ಲಿ ಖರೀದಿಸಬಹುದು. ಅಲ್ಲದೆ ಆನ್‌ಲೈನಿನಲ್ಲಿ ಕಸ್ಟಮೈಸ್ಡ್(ನಮಗೆ ಬೇಕಾದ ಹಾಗೆ ವಿನ್ಯಾಸಗೊಳಿಸಿದ) ಕಿವಿಯೋಲೆಗಳು ಲಭ್ಯ ಇರುವ ಕಾರಣ, ಹೆಚ್ಚಿನವರು ಅಲ್ಲಿಂದಲೇ ತರಿಸಿಕೊಳ್ಳುತ್ತಾರೆ. ದೀಪದ ಆಕಾರದ ಬುಗುಡಿ, ಓಲೆ, ಜುಮ್ಕಿ ಮತ್ತು ಚೈನ್ ಆನ್‌ಲೈನ್‌ನಲ್ಲಿ ಲಭ್ಯ. ಇವು ಹೊಳೆಯುತ್ತವೆ!
ಈ ಕಿವಿಯೋಲೆಗಳು, ಲಂಗ ದಾವಣಿ, ಉದ್ದ ಲಂಗ, ಚೂಡಿದಾರ್, ಸಲ್ವಾರ್ ಕಮೀಜ…, ಸೀರೆ- ರವಿಕೆ, ಕುರ್ತಿಯಂಥ ಸಾಂಪ್ರದಾಯಿಕ ಉಡುಪುಗಳಿಗೆ ಚೆನ್ನಾಗಿ ಒಪ್ಪುತ್ತವೆ. ಪ್ರಯೋಗ ಮಾಡಲು ಧೈರ್ಯ ಇದ್ದವರು ಪಾಶ್ಚಾತ್ಯ ಉಡುಗೆ ಜೊತೆಯೂ ಇವುಗಳನ್ನು ತೊಟ್ಟು ನೋಡಬಹುದು. ಕೆಂಪು, ಪಚ್ಚೆ, ಹಳದಿ ಅಥವಾ ನೀಲಿ ಬಣ್ಣದ ಕಲ್ಲುಗಳನ್ನೂ ಇಂಥ ಕಿವಿಯೋಲೆಗಳಲ್ಲಿ ಬಳಸುತ್ತಾರೆ. ಮುತ್ತು, ರತ್ನ, ಬಣ್ಣ-ಬಣ್ಣದ ಜಾಜಿನ ತುಂಡು, ಪ್ಲಾಸ್ಟಿಕ್ ಆಕೃತಿಗಳನ್ನೂ ಆರ್ಟಿಫಿಷಿಯಲ್ (ಕೃತಕ) ಆಭರಣಗಳಲ್ಲಿ ಬಳಸುತ್ತಾರೆ. ಚಿನ್ನ, ಬೆಳ್ಳಿ, ಪ್ಲಾಟಿನಂ, ವೈಟ್ ಮೆಟಲ…, ತಾಮ್ರ ಅಥವಾ ಕಂಚಿಗೆ ಹೋಲುವ ಲೋಹದಿಂದ ಇಂಥ ಕಿವಿಯೋಲೆಗಳನ್ನು ತಯಾರಿಸುತ್ತಾರೆ. ಕೃತಕ ಆಭರಣಗಳಲ್ಲಿ ಪ್ಲಾಸ್ಟಿಕ್, ಕಾರ್ಡ್‌ಬೋರ್ಡ್, ಮರದ ತುಂಡು, ಗಾಜಿನ ಚೂರು ಅಥವಾ ಮಣ್ಣಿನಿಂದ ತಯಾರಿಸಿ ಅವುಗಳ ಮೇಲೆ ಲೋಹದಂತೆ ಕಾಣುವ ಬಣ್ಣ ಬಳಿಯುತ್ತಾರೆ. ಬಣ್ಣದ ದಾರ, ಗೆಜ್ಜೆ, ಬಳೆಯ ಚೂರುಗಳಿಂದಲೂ ಕಿವಿಯೋಲೆಗಳನ್ನು ನಾವೇ ಸ್ವತಃ ಮಾಡಬಹುದು. ಇದಕ್ಕೆ ಸಂಬಂಧಿಸದ ಅದೆಷ್ಟೋ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಲಭ್ಯ ಇವೆ. ಇಂಥ ಕಿವಿಯೋಲೆಗಳಲ್ಲಿ ವಿಕಿರಣಶೀಲ ಲೋಹ ಧಾತು ರೇಡಿಯಂ(ಕತ್ತಲಿನಲ್ಲಿ ಹೊಳೆಯುವಂಥ ವಸ್ತು) ಮತ್ತು ಎಲ್.ಇ.ಡಿ ಲೈಟ್‌ಗಳನ್ನೂ ಬಳಸುತ್ತಾರೆ ಜೋಕೇ!
Related Articles
ಪ್ರತಿ ಉಡುಗೆಗೊಂದು ಕಿವಿಯೋಲೆ ತೊಟ್ಟರೆ ಹೇಗಿರುತ್ತದೆ? ಚೆಂದ ಅಲ್ವಾ? ಪ್ರತಿ ಹೊಸ ದಿರಿಸಿಗೆ ಹೋಲುವಂಥ ಬಗೆಬಗೆಯ ಬಣ್ಣ ಮತ್ತು ವಿನ್ಯಾಸಗಳ ದೀಪಾಕಾರದ ಕಿವಿಯೋಲೆ ಕೊಂಡುಕೊಳ್ಳಲು ಇಂದೇ ಹೊರಡಿ! ಹೊಸ ಬಗೆಯ ಕಿವಿಯೋಲೆ ತೊಟ್ಟು, ಎಲ್ಲರ ಗಮನ ನಿಮ್ಮತ್ತ ಬೀಳುವಂತೆ ಮಾಡಿ.
Advertisement
ಅದಿತಿಮಾನಸ ಟಿ. ಎಸ್.