Advertisement

ಮಹಿಳಾ ಶಿಕ್ಷಣಕ್ಕೆ ಹಣ ಮೀಸಲಿಡಿ

08:56 AM Jul 26, 2017 | Team Udayavani |

ಕಲಬುರಗಿ: ಮಹಿಳಾ ಶಿಕ್ಷಣ ಕಡೆಗಣಿಸಲಾಗುತ್ತಿರುವ ಈ ವೇಳೆಯಲ್ಲಿ ಸರಕಾರ ಬಜೆಟ್‌ನಲ್ಲಿ ಕನಿಷ್ಠ ಶೇ. 10ರಷ್ಟು ಹಣ ಮೀಸಲಾಗಿಡಬೇಕು. ಶಿಕ್ಷಣ ಹಾಗೂ ಆರೋಗ್ಯಕ್ಕೆ ನೀಡುವ ಅನುದಾನ ಕಡಿತ ಮಾಡಿರುವುದನ್ನು ಹಿಂದಕ್ಕೆ ಪಡೆಯಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮಂಗಳವಾರ ಅಖೀಲ ಭಾರತೀಯ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ, ಆಗ್ರಹಿಸಿತು.

Advertisement

ಈ ವೇಳೆ ಮಾತನಾಡಿದ ಜಿಲ್ಲಾ ಅಧ್ಯಕ್ಷೆ ಸೀಮಾ ದೇಶಪಾಂಡೆ, ಮಹಿಳೆಗೆ ಶಿಕ್ಷಣ ಅನಾವಶ್ಯಕ ಎನ್ನುವ ಕಾಲದಲ್ಲಿ ಆಶಾಕಿರಣವಾಗಿ ಬಂದವರು ಈಶ್ವರಚಂದ್ರ ವಿದ್ಯಾಸಾಗರ್‌. ಆದ್ದರಿಂದ ಅವರ 125ನೇ ಸ್ಮರಣ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು. ಇವತ್ತು ಹೆಣ್ಣು ಮಕ್ಕಳ ಶಿಕ್ಷಣ ಸಂಪೂರ್ಣ ಸಂಘರ್ಷದ ಹಾದಿಯಲ್ಲಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಖಾತ್ರಿ ಮಾಡುವ ನಿಯಮಗಳ ಅವಶ್ಯಕತೆ ಇದೆ. ಅದಕ್ಕಾಗಿ ಅಗತ್ಯ ಸರಕಾರಿ ಶಾಲೆ, ಕಾಲೇಜುಗಳನ್ನು ಆರಂಭಿಸಬೇಕು. ಶಾಲಾ, ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಕಲ್ಪಿಸಬೇಕು. ಎಲ್ಲಾ ವರ್ಗದ ಬಾಲಕಿಯರಿಗೆ ಉಚಿತವಾಗಿ ಬಸ್‌ಪಾಸ್‌ ನೀಡಬೇಕು. ಪ್ರತಿ ಸರಕಾರಿ ಶಾಲಾ, ಕಾಲೇಜುಗಳಲ್ಲಿ ಬಾಲಕಿಯರಿಗಾಗಿ ನೀರು, ಶೌಚಾಲಯ, ವಿದ್ಯುತ್‌ಚ್ಛಕ್ತಿ ಸರಬರಾಜು ಖಾತ್ರಿ ಪಡಿಸಬೇಕು. ಕಾಲೇಜುಗಳಲ್ಲಿ ಬಿಸಿ ಊಟದ ವ್ಯವಸ್ಥೆ ಮಾಡಬೇಕು. ಪ್ರತಿ ಸರಕಾರಿ ಶಾಲಾ, ಕಾಲೇಜುಗಳಲ್ಲಿ ಜೂಡೋ, ಕರಾಟೆ ತರಬೇತಿ ನೀಡಬೇಕು ಎಂದು ಆಗ್ರಹಿಸಿದರು.

ಬಾಲಕಿಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಿ, ವಿದ್ಯಾಸಂಸ್ಥೆಗಳಲ್ಲಿ ಕಚೇರಿಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಸಮಿತಿಗಳನ್ನು ರಚನೆ ಮಾಡಿರಿ, ಅಶ್ಲೀಲ ಸಿನಿಮಾ ಸಾಹಿತ್ಯ ನಿಷೇಧಿಸಿ, ಇಂಟರನೆಟ್‌, ಮೊಬೈಲ್‌ ಮುಂತಾದ ಮಾಧ್ಯಮಗಳಲ್ಲಿ ಅಶ್ಲೀಲತೆ ಪ್ರಚಾರ ತಡೆಗಟ್ಟಿ, ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ವಿಧಿಸಲಾಗಿರುವ ಶೇ. 12ರಷ್ಟು ತೆರಿಗೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಕಾರ್ಯದರ್ಶಿ ಗುಂಡಮ್ಮಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next