Advertisement

ನಿರ್ಭಯ ಯೋಜನೆಯ ಇ-ಟೆಂಡರ್‌ ; ವಿವಾದದಲ್ಲಿ ಗೃಹ ಕಾರ್ಯದರ್ಶಿ ಡಿ.ರೂಪಾ

11:02 PM Dec 25, 2020 | mahesh |

ಬೆಂಗಳೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ “ನಿರ್ಭಯ ಯೋಜನೆ’ಯ 619 ಕೋ.ರೂ. ಬೃಹತ್‌ ಇ-ಟೆಂಡರ್‌ ಪ್ರಕ್ರಿಯೆ ಈಗ ವಿವಾದದ ಸ್ವರೂಪ ಪಡೆದಿದೆ.

Advertisement

ಇ-ಟೆಂಡರ್‌ನಲ್ಲಿ ಪಾಲ್ಗೊಂಡಿದ್ದ ಕಂಪೆನಿಯೊಂದು ಚೀನ ಮೂಲದ ವಸ್ತುಗಳನ್ನು ಯೋಜನೆ ಅಡಿ ಬಳಕೆಗೆ ಮುಂದಾಗಿತ್ತು. ಅದು ಭದ್ರತಾ ವ್ಯವಸ್ಥೆಗೆ ಅಪಾಯಕಾರಿ ಎಂದು ಭಾರತ ಎಲೆಕ್ಟ್ರಾನಿಕ್ಸ್‌ ಲಿ. (ಬಿಇಎಲ್‌) ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದ ವಿಚಾರವೂ ಬೆಳಕಿಗೆ ಬಂದಿದೆ.

“ಟೆಂಡರ್‌ನಲ್ಲಿ ಪಾಲ್ಗೊಂಡಿದ್ದ ಮ್ಯಾಟ್ರಿಕ್ಸ್‌ ಕಂಪೆನಿ ಚೀನ ಮೂಲದ ಕೆಮರಾ, ಸರ್ವರ್‌ಗಳು, ಸಂಗ್ರಹಾಗಾರ ವಸ್ತುಗಳನ್ನು ಯೋಜನೆ ಅಳವಡಿಕೆಗೆ ಸಂಬಂಧ ಬೆಂಗಳೂರು ನಗರ ಪೊಲೀಸರು ಮತ್ತು ಟೆಂಡರ್‌ ಸಮಿತಿಯ ಮುಂದೆಯ ಪ್ರಾತ್ಯಕ್ಷಿಕೆ ಕೂಡ ನೀಡಿತ್ತು. ಸಾರ್ವಜನಿಕರ ರಕ್ಷಣೆಗೆ ಸಂಬಂಧಿಸಿದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಈ ರೀತಿಯ ಕಂಪೆನಿ ಭಾಗಿಯಾಗುತ್ತಿರುವುದು ಭದ್ರತೆ ದೃಷ್ಟಿಯಿಂದ ಸರಿಯಲ್ಲ. ಬೆಂಗಳೂರು ನಿವಾಸಿಗಳ ವೈಯಕ್ತಿಕ ದತ್ತಾಂಶಗಳು ಸೋರಿಕೆಯಾಗುವ ಸಾಧ್ಯತೆಯಿದೆ. ಇದು ನಮ್ಮ ಭದ್ರತೆಗೆ ಹೊಡೆತ ಕೊಡಬಹುದು,’ ಎಂದು ಬಿಇಎಲ್‌ ದೂರಿನಲ್ಲಿ ಕೇಳಿಕೊಂಡಿತ್ತು.

ಈ ನಡುವೆ ಬಿಇಎಲ್‌, ಲಾರ್ಸೆನ್‌ ಆ್ಯಂಡ್‌ ಟೂಬ್ರೋ, ಮ್ಯಾಟ್ರಿಕ್ಸ್‌ ಸೆಕ್ಯೂರಿಟಿ ಮತ್ತು ಸರ್ವೇಲೆನ್ಸ್‌ ಲಿ., ಎನ್‌ಸಿಸಿ ಲಿ. ಟೆಂಡರ್‌ನಲ್ಲಿ ಭಾಗಿಯಾಗಿದ್ದವು. ಈ ಪೈಕಿ ಮ್ಯಾಟ್ರಿಕ್ಸ್‌ ಸೆಕ್ಯೂರಿಟಿ ಮತ್ತು ಸರ್ವೈಲೆನ್ಸ್‌ ಲಿ. ಹಾಗೂ ಮತ್ತು ಎನ್‌ಸಿಸಿ ಲಿ. ಕಂಪೆನಿಗಳಿಗೆ ಒಬ್ಬರೇ ನಿರ್ದೇಶಕರಾಗಿದ್ದಾರೆ. ಅದರಲ್ಲಿ “ಸ್ವಹಿತಾಸಕ್ತಿ’ ಇರುವುದು ಕಂಡು ಬಂದಿದೆ. ಇದು ಟೆಂಡರ್‌ ನಿಯಮಕ್ಕೆ ವಿರುದ್ಧವಾಗಿದೆ. ಈ ಕುರಿತು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಮಾಹಿತಿ ನೀಡಲಾಗಿದ್ದು, ಎರಡು ಕಂಪೆನಿಯನ್ನು ಟೆಂಡರ್‌ ಪ್ರಕ್ರಿಯೆಯಿಂದ ಹೊರಗಿಡಬೇಕು ಎಂಬ ಆಗ್ರಹವೂ ಬಿಇಎಲ್‌ ಪ್ರದಾನಿ ಕಾರ್ಯಾಲಯಕ್ಕೆ ಬರೆದ ಪತ್ರದಲ್ಲಿತ್ತು.

ಈ ಪತ್ರದ ಆಧಾರದ ಮೇಲೆಯೇ ಪ್ರಧಾನ ಮಂತ್ರಿ ಕಚೇರಿಯಿಂದ ರಾಜ್ಯ ಸರ್ಕಾರಕ್ಕೆ ಸೂಚನೆ ಬಂದು, ನಗರ ಪೊಲೀಸ್‌ ಆಯುಕ್ತರು ಎರಡನೇ ಬಾರಿಯ ಟೆಂಡರ್‌ ರದ್ದುಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

ಡಿ. ರೂಪಾ ಹೆಸರು
“ಸೇಫ್ ಸಿಟಿ ಪ್ರಾಜೆಕ್ಟ್ ಟೆಂಡರ್‌’ ವಿಚಾರಕ್ಕೆ ಸಂಬಂಧಿಸಿ ಗೃಹ ಕಾರ್ಯದರ್ಶಿ ಡಿ. ರೂಪಾ ಹೆಸರು ಹೇಳಿಕೊಂಡು ಟೆಂಡರ್‌ನಲ್ಲಿ ಭಾಗಿಯಾದ ಕಂಪೆನಿಯ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಮಾಹಿತಿ ಕೇಳಿದ ಪ್ರಕರಣವೂ ಈಗ ಚರ್ಚೆಗೆ ಗ್ರಾಸವಾಗಿದೆ. ಬಿಇಎಲ್‌ ದೂರಿನ ಅನ್ವಯ ಪ್ರಧಾನಿ ಕಾರ್ಯಾಲಯವು ಮುಖ್ಯ ಕಾರ್ಯದರ್ಶಿ ಅವರಿಗೆ ವರದಿ ಕೇಳಿತ್ತು. ಮುಖ್ಯ ಕಾರ್ಯದರ್ಶಿಯ ಸೂಚನೆಯಂತೆ ಗೃಹ ಕಾರ್ಯದರ್ಶಿ ರೂಪಾ ಅವರು ಕಂಪೆನಿಯ ಅಧಿಕಾರಿಗೆ ಕರೆ ಮಾಡಿ ಮಾಹಿತಿ ಕೇಳಿದ್ದರು ಎನ್ನಲಾಗಿದೆ.

ಕರೆ ಮಾಡಿದ್ದು ನಾನೇ: ರೂಪಾ
ಪ್ರಕರಣ ಕುರಿತು ಸ್ಪಷ್ಟತೆ ನೀಡಿದ ಡಿ.ರೂಪಾ ಅವರು ಡಿ.2ರಂದು ಮುಂಬಯಿ ಮೂಲದ ಕಂಪೆನಿಗೆ ಕರೆ ಮಾಡಿದ್ದು ನಾನೇ ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಟೆಂಡರ್‌ ಕುರಿತು ದಾಖಲೆಗಳನ್ನು ಪರಿಶೀಲಿಸಿದಾಗ ಈ ನಿರ್ದಿಷ್ಟ ಕಂಪೆನಿಯ ಟೆಂಡರ್‌ ದಾಖಲಾತಿ ಬಗ್ಗೆ ಕೆಲವೊಂದು ಅನುಮಾನಗಳು ಬಂದಿದ್ದು, ಈ ವಿಚಾರವನ್ನು ಮುಖ್ಯಕಾರ್ಯದರ್ಶಿ ಹಾಗೂ ಕೇಂದ್ರ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಹೀಗಾಗಿ ತಪ್ಪಾಗಿ ಮಾಡಿದ್ದ ಟೆಂಡರ್‌ ರದ್ದಾಗಿದೆ ಎಂದಿದ್ದಾರೆ.

ತನಿಖೆಗೆ ಆದೇಶ
ಟೆಂಡರ್‌ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ರಾಜ್ಯ ಸರಕಾರ ಒಟ್ಟಾರೆ ಇ-ಟೆಂಡರ್‌ ಪ್ರಕ್ರಿಯೆಯಲ್ಲಿ ಮಾಹಿತಿ ಸೋರಿಕೆ ಸಹಿತ ಇತರ ಲೋಪಗಳ ಬಗ್ಗೆ ಶೀಘ್ರ ತನಿಖೆ ನಡೆಸಿ ವರದಿ ನೀಡುವಂತೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ. ಈಗ ವಿವಾದದ ಚೆಂಡು ನಗರ ಪೊಲೀಸ್‌ ಆಯುಕ್ತರ ಅಂಗಳಕ್ಕೆ ಬಿದ್ದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next